ADVERTISEMENT

ರಫೇಲ್‌ ದಾಖಲೆ ಕಳವು: ರಕ್ಷಣಾ ಸಚಿವೆ ರಾಜೀನಾಮೆಗೆ ಒತ್ತಾಯಿಸಿ ಸಹಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 9:00 IST
Last Updated 7 ಮಾರ್ಚ್ 2019, 9:00 IST
   

ನವದೆಹಲಿ:ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳವಾಗಿವೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಾಜೀನಾಮೆ ನೀಡುವಂತೆ ಒತ್ತಾಯಿಸಿ ‘our democracy’ ವೆಬ್ ಜಾಲತಾಣ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ.

ಅಭಿಯಾನ ಕುರಿತು...
ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳವಾಗಿವೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಹೀಗೆ ಕಳವಾದ ದಾಖಲೆಗಳ ಆಧಾರದಲ್ಲಿ ವರದಿಗಳನ್ನು ಪ್ರಕಟಿಸುತ್ತಿರುವ ‘ದ ಹಿಂದೂ’ ಪತ್ರಿಕೆಯ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವುದಾಗಿಯೂ ಸರ್ಕಾರ ಎಚ್ಚರಿಕೆ ನೀಡಿದೆ.

ರಕ್ಷಣಾ ಸಚಿವಾಲಯದ ದಾಖಲೆ ಕಳವಾಗಿರುವುದು ಅತ್ಯಂತ ಗಂಭೀರ ವಿಷಯವಾಗಿದೆ. ‘ಕಳವು’ ಕುರಿತು ಉತ್ತರ ಬ್ಲಾಕ್‌ ಪೊಲೀಸ್‌ ಠಾಣೆಗೆ ರಕ್ಷಣಾ ಸಚಿವಾಲಯ ಔಪಚಾರಿಕ ದೂರು ಅಥವಾ ಎಫ್‌ಐಆರ್ ಸಲ್ಲಿಸಿಲ್ಲ ಎಂಬುದು ಆಘಾತಕಾರಿ ಸಂಗತಿ. ಇದು ರಾಷ್ಟ್ರೀಯ ಭದ್ರತೆಯ ಒಂದು ಪ್ರಮುಖ ಉಲ್ಲಂಘನೆ ಮಾತ್ರವಲ್ಲ, ಪೊಲೀಸರು ಮತ್ತು ದೇಶದ ಜನರಿಂದ ಈ ಅಪರಾಧವನ್ನು ಸರ್ಕಾರ ಮರೆಮಾಚುತ್ತಿರುವುದು ಅನೈತಿಕತೆಯಾಗಿದೆ ಎಂದು ಹೇಳಿದೆ.

ADVERTISEMENT

ಇದೂ ಅಲ್ಲದೆ, ರಫೇಲ್‌ ಒಪ್ಪಂದ ಅತಿ ಸೂಕ್ಷ್ಮ ವಿಚಾರ. ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಭ್ರಷ್ಟಾಚಾರ ಆರೋಪಗಳು ಕೇಳಿಬಂದಿವೆ. ಆದ್ದರಿಂದ, ಇಂತಹ ‘ಕಳವು’ ಅನ್ನು ವರದಿ ಮಾಡದೆ ಸರ್ಕಾರ ಮೌನ ವಹಿಸಿರುವುದು ಆಘಾತಕಾರಿ ಮತ್ತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಸಂದರ್ಭದಲ್ಲಿ ಸ್ವತಂತ್ರ ತನಿಖೆ ನಡೆಯುತ್ತಿಲ್ಲ ಮತ್ತು ರಫೇಲ್‌ ಹಗರಣದ ನಿಜ ಪತ್ತೆಯಾಗುತ್ತಿಲ್ಲ ಎಂದು ಸಹಿ ಅಭಿಯಾನದಲ್ಲಿ ಉಲ್ಲೇಖಿಸಿದ್ದಾರೆ.

ರಕ್ಷಣಾ ಇಲಾಖೆ ಕಚೇರಿಯಲ್ಲಿನ ‘ಕಳವು’ ವರದಿ ಮಾಡಲು ವಿಫಲವಾಗಿರುವ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಜವಾಬ್ದಾರಿಯನ್ನು ಹೊರಬೇಕು ಎಂದುಒತ್ತಾಯಿಸಿದ್ದಾರೆ.

ರಕ್ಷಣಾ ಸಚಿವರು ಜವಾಬ್ದಾರಿಯನ್ನು ಹೊರುವುದರ ಜತೆಗೆ, ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಆಘಾತಕಾರಿಯಾದ ವೈಫಲ್ಯಕ್ಕಾಗಿ ರಕ್ಷಣಾ ಸಚಿವರ ರಾಜೀನಾಮೆಗೆ ಒತ್ತಾಯಿಸಲು ಬೆಂಬಲಿಸಿ ಈ ಗುಂಪಿನಲ್ಲಿ ಸೇರ್ಪಡೆಗೊಳ್ಳಿ ಎಂದು ಕೋರಿದ್ದಾರೆ.

ಜತೆಗೆ, ಮೋದಿ ಸರ್ಕಾರ ಈ ಮೂರು ಪ್ರಶ್ನೆಗಳಿಗೆ ಉತ್ತರಿಸುವಂತೆ ಒತ್ತಾಯಿಸಿ ಎಂದು ಮನವಿ ಮಾಡಿದ್ದಾರೆ.

1) ರಫೇಲ್‌ ದಾಖಲೆಗಳ ‘ಕಳವು’ಅನ್ನು ಯಾವಾಗ ಪತ್ತೆ ಮಾಡಲಾಯಿತು?

2) ಪೊಲೀಸ್‌ ಅಥವಾ ಸಂಬಂಧಿಸಿದ ಅಧಿಕಾರಿಗಳಿಗೆ ಈ ಕಳವಿನ ಬಗ್ಗೆ ಏಕೆ ವರದಿಯಾಗಿಲ್ಲ?

3) ಕಳುವಾದ ದಾಖಲೆಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುತ್ತಿದೆ ಎಂದು ಸರ್ಕಾರ ಒಪ್ಪಿಕೊಳ್ಳುವುದೆ? ಹಾಗಿದ್ದರೆ, ಈ ಎಲ್ಲಾ ದಾಖಲೆಗಳು ಅಧಿಕೃತ ಎಂದಾಗುವುದಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.