ಕೊಚ್ಚಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರ ಮೃತದೇಹಕ್ಕೆ ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೆಕರ್ ಅಂತಿಮ ನಮನ ಸಲ್ಲಿಸಿದರು
ಪಿಟಿಐ ಚಿತ್ರ
ನೈರೋಬಿ, ಕೆನ್ಯಾ: ಭಾರತದಲ್ಲಿ ಬುಧವಾರ ಕೊನೆಯುಸಿರೆಳೆದಿದ್ದ ಕೆನ್ಯಾದ ಮಾಜಿ ಪ್ರಧಾನಿ ಹಾಗೂ ಆಫ್ರಿಕಾದ ಪ್ರಸಿದ್ಧ ರಾಜಕಾರಣಿ ರೈಲಾ ಒಡಿಂಗಾ ಅವರ ಮೃತದೇಹವನ್ನು ಗುರುವಾರ ರಾಜಧಾನಿ ನೈರೋಬಿಗೆ ತರಲಾಗಿದ್ದು, ಲಕ್ಷಾಂತರ ಮಂದಿ ನೆಚ್ಚಿನ ಜನನಾಯಕನಿಗೆ ಕಂಬನಿ ಮಿಡಿದರು.
ಇಲ್ಲಿನ ವಿಮಾನ ನಿಲ್ದಾಣಕ್ಕೆ ಚಾರ್ಟೆಡ್ ವಿಮಾನದಲ್ಲಿ ತಂದ ಮೃತದೇಹಕ್ಕೆ ಜಲಫಿರಂಗಿ ಮೂಲಕ ಗೌರವ ಸಲ್ಲಿಸಲಾಯಿತು. ಅಲ್ಲಿಂದ ಸೀದಾ ಸಂಸತ್ ಭವನಕ್ಕೆ ಕೊಂಡೊಯ್ಯಲಾಯಿತು. ರಸ್ತೆಯುದ್ದಕ್ಕೂ ನಿಂತಿದ್ದ ಲಕ್ಷಾಂತರ ಮಂದಿ ನೆಚ್ಚಿನ ನಾಯಕನಿಗೆ ಗೌರವ ಸಲ್ಲಿಸಿದರು.
ಆಯುರ್ವೇದ ಚಿಕಿತ್ಸೆ ಪಡೆಯಲು ಇಲ್ಲಿಗೆ ಬಂದಿದ್ದ ಒಡಿಂಗಾ ಅವರು ಹೃದಯಸ್ತಂಭನದಿಂದ ಕೇರಳದ ಎರ್ನಾಕುಲಂನ ಕೊತ್ತಾಟ್ಟುಕುಳಂನಲ್ಲಿ ಬುಧವಾರ ಮೃತಪಟ್ಟರು. ಒಡಿಂಗಾ ಅವರಿಗೆ ಪತ್ನಿ ಇಡಾ, ಮೂವರು ಮಕ್ಕಳು ಇದ್ದಾರೆ. ಅವರ ಹಿರಿಯ ಪುತ್ರ ಫಿಡೆಲ್ 2015ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.
ಭಾನುವಾರ ಅಂತ್ಯಕ್ರಿಯೆ: ಸರ್ಕಾರಿ ಗೌರವಗಳೊಂದಿಗೆ ಒಡಿಂಗಾ ಅವರ ಅಂತ್ಯಕ್ರಿಯೆಯು ಅವರ ದೇಶದ ಪಶ್ಚಿಮ ಭಾಗ ನಗರ ‘ಬೊಂಡೊದಲ್ಲಿ’ ಭಾನುವಾರ ನೆರವೇರಲಿದೆ. 72 ಗಂಟೆಗಳ ಒಳಗಾಗಿ ಅವರ ಅಂತ್ಯಕ್ರಿಯೆ ನೆರವೇರಿಸಬೇಕು ಎಂದು ಅವರ ಕುಟುಂಬದ ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಶುಕ್ರವಾರ ನೈರೋಬಿಯ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲು ನಿರ್ಧರಿಸಿದ್ದು, ದೇಶದಾದ್ಯಂತ ರಜೆ ಘೋಷಿಸಲಾಗಿದೆ. ಶನಿವಾರ ‘ಕಿಸುಮು’ ಪಟ್ಟಣದಲ್ಲಿಯೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
2018ರಿಂದ 2023ರವರೆಗೆ ಕೆನ್ಯಾದ ಪ್ರಧಾನಿಯಾಗಿದ್ದ ರೈಲಾ ಒಡಿಂಗಾ ಅವರು ದಶಕಗಳ ಕಾಲ ವಿರೋಧ ಪಕ್ಷದ ನಾಯಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. 2010ರಲ್ಲಿ ಅಂಗೀಕರಿಸಲ್ಪಟ್ಟ ಸಂವಿಧಾನ ಜಾರಿ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸುಮಾರು ಐದು ಬಾರಿ ದೇಶದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋಲುಂಡಿದ್ದರು.
ದೇಶದಲ್ಲಿ ಬಹುಪಕ್ಷೀಯ ಚುನಾವಣಾ ಪದ್ಧತಿ ಜಾರಿ, ಪ್ರಜಾಪ್ರಭುತ್ವದಲ್ಲಿ ಹಲವು ಸುಧಾರಣೆ, ಜನಪರ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಅಪಾರ ಬೆಂಬಲಿಗರನ್ನು ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.