ADVERTISEMENT

ಅತ್ಯಾಚಾರ | ಖಿನ್ನತೆ, ಅಸಹನೀಯ ನೋವಿನಿಂದ ದಯಾಮರಣ ಪಡೆದ ಡಚ್‌ ಯುವತಿ

ಏಜೆನ್ಸೀಸ್
Published 5 ಜೂನ್ 2019, 7:03 IST
Last Updated 5 ಜೂನ್ 2019, 7:03 IST
ದಯಾಮರಣ ಪಡೆದ ಡಚ್‌ ಯುವತಿ ಚಿತ್ರ: ಇನ್‌ಸ್ಟಾಗ್ರಾಮ್‌
ದಯಾಮರಣ ಪಡೆದ ಡಚ್‌ ಯುವತಿ ಚಿತ್ರ: ಇನ್‌ಸ್ಟಾಗ್ರಾಮ್‌   

ಅಮ್‌ಸ್ಟರ್‌ಡಾಮ್‌: ಅತ್ಯಾಚಾರಕ್ಕೊಳಗಾಗಿ ಬದುಕುಳಿದಿದ್ದ 17 ವರ್ಷ ವಯಸ್ಸಿನ ನೆದರ್‌ಲೆಂಡ್‌ನ ಯುವತಿ ಖಿನ್ನತೆ ಮತ್ತು ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ವರ್ಷಕಾಲ ಹೋರಾಟದ ಬದುಕು ನಡೆಸಿ, ತಾನು ಸಲ್ಲಿಸಿದ ಮನವಿ ಮೇರೆಗೆ ದೇಶದ ಕಾನೂನಿನ ಅನ್ವಯ ದಯಾಮರಣ ಪಡೆದಿದ್ದಾಳೆ.

ನೋವಾ ಪೊಥೊವೆನ್‌ ದಯಾಮರಣ(ನೆರವು ಪಡೆದು ಆತ್ಮಹತ್ಯೆ) ಪಡೆದ ಯುವತಿ. ಪೂರ್ವ ನೆದರ್‌ಲೆಂಡ್‌ನ ಅಹಮ್‌ನಲ್ಲಿ ‘ಲೈಪ್‌ ಕ್ಲಿನಿಕ್‌’ನ ಸಹಾಯದಿಂದ ಭಾನುವಾರ ತನ್ನ ಬದುಕಿನ ಅಂತ್ಯ ಕಂಡುಕೊಂಡಿದ್ದಾರೆ. ಆತ್ಮಹತ್ಯೆಯು ದೇಶದ ‘ಟರ್ಮಿನೇಷನ್‌ ಆಫ್‌ ಲೈಫ್‌ ಆನ್‌ ರಿಕ್ವೆಸ್ಟ್‌ ಅಂಡ್‌ ಅಸಿಸ್ಟೆಡ್‌ ಸುಸೈಟ್‌ ಆಕ್ಟ್‌’ 2001ರ ಅಡಿ ಕಾನೂನುಬದ್ಧವಾಗಿದೆ. ಆದರೆ, ರೋಗಿಗಳ ದುಃಖ, ನೋವಿನ ತೀವ್ರತೆಯನ್ನು ನಿರ್ಣಯಿಸಲು ವೈದ್ಯರ ಅನುಮೋದನೆ ಅಗತ್ಯವಿದೆ.

ತನ್ನ ಸಾವಿಗೂ ಮೊದಲ ದಿನ ಪೊಥೊವೆನ್‌, 10 ಸಾವಿರ ಫಾಲೋವರ್‌ ಇರುವ ತನ್ನ ಇನ್‌ಸ್ಟಾಗ್ರಾಂನಲ್ಲಿ ತನ್ನ ನಿರ್ಧಾರವನ್ನು ಹಂಚಿಕೊಂಡಿದ್ದಾರೆ.

ADVERTISEMENT
ನೋವನ್ನು ಹಂಚಿಕೊಂಡಿದ್ದ ಯುವತಿ. ಚಿತ್ರ: ಇನ್‌ಸ್ಟಾಗ್ರಾಮ್‌

‘ನಾನು ಗರಿಷ್ಠ 10 ದಿನಗಳಲ್ಲಿ ಸಾಯುತ್ತೇನೆ’ ಎಂದು ಬರೆದುಕೊಂಡಿದ್ದ ಅವರು, ‘ನನ್ನ ನೋವು ಅಸಹನೀಯವಾಗಿದೆ. ಅನೇಕ ಸಂಭಾಷಣೆ ಮತ್ತು ವಿಮರ್ಶೆಗಳ ಬಳಿಕ ಬದುಕನ್ನು ಕೊನೆಗೊಳಿಸಿಕೊಳ್ಳಲು ನಿರ್ಧರಿಸಿದ್ದೇನೆ. ಹಲವು ವರ್ಷಗಳ ನನ್ನ ಹೋರಾಟ ಮುಗಿದಿದೆ. ನಾನು ಈಗ ಕೆಲ ಸಮಯದಿಂದ ತಿನ್ನುವುದು, ಸೇವಿಸುವುದನ್ನು ನಿಲ್ಲಿಸಿದ್ದೇನೆ. ಇದೇ ಅಂತ್ಯ’ ಎಂದು ಮನದಾಳವನ್ನು ಹಂಚಿಕೊಂಡಿದ್ದರು.

ಪೋಥೊವೆನ್‌, ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಬರೆದ ಆತ್ಮಚರಿತ್ರೆ ಪುಸ್ತಕ ‘ವಿನ್ನಿಂಗ್‌ ಅಂಡ್‌ ಲರ್ನಿಂಗ್’ನಲ್ಲಿ ಖಿನ್ನತೆ ಹಾಗೂ ತನ್ನ ಹೋರಾಟದ ಬಗ್ಗೆ ಬರೆದಿದ್ದಾರೆ. ಹದಿಹರೆಯದವರ ಲೈಂಗಿಕ ದುರ್ಬಳಕೆ ಮತ್ತು ಅತ್ಯಾಚಾರದ ಕುರಿತಾಗಿ ತನಗಾದ ನೋವನ್ನು ವಿಸ್ತಾರವಾಗಿ ವಿವರಿಸಿದ್ದು, ವರ್ಷದುದ್ದಕ್ಕೂ ಎದುರಿಸಿದ ಅಪಮಾನ, ನಿಂದನೆಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ.

ದಯಾಮರಣ ಹೆಚ್ಚು ವಿವಾದಾತ್ಮಕವಾಗಿ ಉಳಿದಿದೆಯಾದರೂ, ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಜನ ಕಾನೂನಾತ್ಮಕವಾಗಿ ಸಾವನ್ನಪ್ಪುತ್ತಿದ್ದಾರೆ. ತೀರಾ ಇತ್ತೀಚಿನ ಮಾಹಿತಿ ಪ್ರಕಾರ, 2017ರಲ್ಲಿ ನೆದರ್‌ಲೆಂಡ್‌ನಲ್ಲಿ 6,500ಕ್ಕಿಂತಲೂ ಹೆಚ್ಚಿನ ಜನರು ಕಾನೂನಾತ್ಮಕವಾಗಿ ನೆರವು ಪಡೆದು ಆತ್ಮಹತ್ಯೆ ಮಾಡಿಕೊಂಡಿದ್ದು, ಹಿಂದಿನ ವರ್ಷಕ್ಕಿಂತ ಶೇಕಡಾ 8ರಷ್ಟು ಹೆಚ್ಚಾಗಿದೆ. ದಯಾಮರಣ ಕೆನಡಾ ಮತ್ತು ಬೆಲ್ಜಿಯಂನಲ್ಲಿ ಕಾನೂನಾತ್ಮಕವಾಗಿದೆ.

ಚಿತ್ರ: ಇನ್‌ಸ್ಟಾಗ್ರಾಮ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.