ADVERTISEMENT

ಉಕ್ರೇನ್‌: ಮಹಿಳೆಯರನ್ನು ಕೂಡಿ ಹಾಕಿ ರಷ್ಯಾ ಸೈನಿಕರಿಂದ ಅತ್ಯಾಚಾರ– ವಿಶ್ವಸಂಸ್ಥೆ

ಏಜೆನ್ಸೀಸ್
Published 14 ಅಕ್ಟೋಬರ್ 2022, 13:50 IST
Last Updated 14 ಅಕ್ಟೋಬರ್ 2022, 13:50 IST
   

ಕೀವ್: ರಷ್ಯಾ ಪಡೆಗಳು ಉಕ್ರೇನ್‌ನಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯವನ್ನು ಮಿಲಿಟರಿ ತಂತ್ರದ ಭಾಗವಾಗಿ ಬಳಸುತ್ತಿವೆ ಎಂದು ವಿಶ್ವಸಂಸ್ಥೆಯ ಪ್ರತಿನಿಧಿ ಪ್ರಮೀಳಾ ಪ್ಯಾಟೆನ್ ಎಎಫ್‌ಪಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಜನರಲ್ಲಿ ಆತಂಕ ಸೃಷ್ಟಿಸಲು ಉದ್ದೇಶಪೂರ್ವಕವಾಗಿಯೇ ಈ ತಂತ್ರ ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಉಕ್ರೇನ್‌ನಲ್ಲಿ ಅತ್ಯಾಚಾರವನ್ನು ಯುದ್ಧದ ಅಸ್ತ್ರವಾಗಿ ಬಳಸಲಾಗುತ್ತಿದೆಯೇ? ಎಂದು ಕೇಳಿದಾಗ, 'ಅದಕ್ಕೆ ಸಂಬಂಧಿಸಿದ ಎಲ್ಲ ಪುರಾವೆಗಳು ಇವೆ’ಎಂದು ವಿಶ್ವಸಂಸ್ಥೆಯ ಲೈಂಗಿಕ ಹಿಂಸೆ ತಡೆ ವಿಭಾಗದ ಪ್ರತಿನಿಧಿ ಹೇಳಿದ್ದಾರೆ.

'ಮಹಿಳೆಯರನ್ನು ಹಲವು ದಿನಗಳ ಕಾಲ ಬಂಧಿಸಿ ಅತ್ಯಾಚಾರ ಎಸಗಲಾಗಿದೆ. ಚಿಕ್ಕ ಹಡುಗರು ಮತ್ತು ಪುರುಷರ ಮೇಲೂ ಲೈಂಗಿಕ ದೌರ್ಜನ್ಯ ನಡೆದಿದೆ. ಅದಕ್ಕೆ ಪುರಾವೆ ಎಂಬಂತೆ ಜನನಾಂಗದಲ್ಲಿ ತೀವ್ರ ಗಾಯಗಳು ಕಂಡುಬಂದಿವೆ. ರಷ್ಯಾ ಸೈನಿಕರು ವಯಾಗ್ರ ಇಟ್ಟುಕೊಂಡು ಅತ್ಯಾಚಾರಕ್ಕೆ ಸಿದ್ಧರಾಗಿಯೇ ಬಂದಿದ್ದಾರೆ ಎಂದು ಮಹಿಳೆಯರು ಹೇಳುವುದನ್ನು ಕೇಳಿದಾಗ, ಇದು ಮಿಲಿಟರಿ ತಂತ್ರವೆಂಬುದು ಸ್ಪಷ್ಟವಾಗುತ್ತದೆ’ಎಂದು ಅವರು ಹೇಳಿದ್ದಾರೆ.

ADVERTISEMENT

ರಷ್ಯಾ, ಉಕ್ರೇನ್ ಮೇಲೆ ಆಕ್ರಮಣ ಪ್ರಾರಂಭ ಮಾಡಿದಾಗಿನಿಂದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ನೂರಕ್ಕೂ ಅಧಿಕ ಪ್ರಕರಣಗಳನ್ನು ಪರಿಶೀಲನೆ ನಡೆಸಲಾಗಿದೆ ಎಂದು ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವರದಿಯನ್ನು ಉಲ್ಲೇಖಿಸಿ ಪ್ಯಾಟನ್ ಹೇಳಿದರು.

ರಷ್ಯಾ ಪಡೆಗಳು ಮಾನವೀಯತೆಯ ವಿರುದ್ಧವಾದ ಅಪರಾಧ ಎಸಗುತ್ತಿವೆ ಎಂಬುದನ್ನು ವರದಿ ಖಚಿತಪಡಿಸಿದೆ. ಸಂತ್ರಸ್ತರ ವಿಚಾರಣೆ ವೇಳೆ 4 ರಿಂದ 82 ವರ್ಷದ ವಯಸ್ಸಿನವರ ಮೇಲೂ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ.

ಅತ್ಯಾಚಾರ ಸಂತ್ರಸ್ತರಲ್ಲಿ ಹೆಚ್ಚಿನ ಮಂದಿ ಮಹಿಳೆಯರು ಮತ್ತು ಬಾಲಕಿಯರಾಗಿದ್ದು, ಪುರುಷ ಮತ್ತು ಬಾಲಕರೂ ಇದ್ದಾರೆ ಎಂದಿದ್ದಾರೆ.

ಆದರೆ, ವರದಿಯಾದ ಪ್ರಕರಣಗಳು ಕೆಲವೇ ಕೆಲವು ಇದ್ದಂತೆ ಕಾಣುತ್ತಿದೆ ಎಂದು ಅವರು ಹೇಳಿದರು.

ಇಂತಹ ಸಂಘರ್ಷ ನಡೆಯುತ್ತಿರುವಾಗ ಖಚಿತವಾಗಿ ಅತ್ಯಾಚಾರ ಸಂತ್ರಸ್ತರ ಸಂಖ್ಯೆ ಕಲೆ ಹಾಕುವುದು ಕಷ್ಟಕರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.