ADVERTISEMENT

ಗ್ರೀನ್‌ಲ್ಯಾಂಡ್‌: ಕರಗಿದ ಹಿಮದ ಪ್ರಮಾಣ 586 ಶತಕೋಟಿ ಟನ್‌!

ಕಳೆದ ವರ್ಷದ ವಿದ್ಯಮಾನ: ತಾಪಮಾನ ಹೆಚ್ಚಳ ಕಾರಣ

ಏಜೆನ್ಸೀಸ್
Published 21 ಆಗಸ್ಟ್ 2020, 6:17 IST
Last Updated 21 ಆಗಸ್ಟ್ 2020, 6:17 IST
ಗ್ರೀನ್‌ಲ್ಯಾಂಡ್‌ನ ಸರ್ಮರ್ಸೂಕ್‌ ಸಮೀಪದ ಕುಲುಸುಕ್‌ ಬಳಿ ಕರಗಿದ ಹಿಮಗಡ್ಡೆಯೊಂದು ಸಾಗರದಲ್ಲಿ ತೇಲುತ್ತಿದೆ. (ಸಂಗ್ರಹ ಚಿತ್ರ) – ಎಎಫ್‌ಪಿ ಚಿತ್ರ
ಗ್ರೀನ್‌ಲ್ಯಾಂಡ್‌ನ ಸರ್ಮರ್ಸೂಕ್‌ ಸಮೀಪದ ಕುಲುಸುಕ್‌ ಬಳಿ ಕರಗಿದ ಹಿಮಗಡ್ಡೆಯೊಂದು ಸಾಗರದಲ್ಲಿ ತೇಲುತ್ತಿದೆ. (ಸಂಗ್ರಹ ಚಿತ್ರ) – ಎಎಫ್‌ಪಿ ಚಿತ್ರ   

ನೂಕ್‌: ಕಳೆದ ವರ್ಷ ತಾಪಮಾನದಲ್ಲಿ ಹೆಚ್ಚಳದಿಂದಾಗಿ ಗ್ರೀನ್‌ಲ್ಯಾಂಡ್‌ನಲ್ಲಿ ದಾಖಲೆಯ 586 ಶತಕೋಟಿ ಟನ್‌ನಷ್ಟು ಹಿಮ ಕರಗಿದೆ ಎಂದು ಅಧ್ಯಯನವೊಂದು ಹೇಳಿದೆ.

ಕರಗಿದ ಹಿಮದ ರಾಶಿಯಿಂದ ಸಿಗುವ ನೀರನ್ನು, ಇಡೀ ಕ್ಯಾಲಿಫೋರ್ನಿಯಾ ನಗರದಲ್ಲಿ ನಾಲ್ಕು ಅಡಿಗಳಿಗಿಂತ ಹೆಚ್ಚು ಎತ್ತರ ನಿಲ್ಲಿಸಲು ಸಾಧ್ಯವಾಗುತ್ತಿತ್ತು ಎಂದು ಉಪಗ್ರಹ ಕಳುಹಿಸಿದ ವಿವರಗಳನ್ನು ವಿಶ್ಲೇಷಿಸಿ ವಿಜ್ಞಾನಿಗಳು ಹೇಳಿದ್ದಾರೆ.

2003 ರಿಂದ ಇಲ್ಲಿ ವಾರ್ಷಿಕ ಸರಾಸರಿ 259 ಶತಕೋಟಿ ಟನ್‌ನಷ್ಟು ಹಿಮ ಕರಗುತ್ತದೆ. 2012ರಲ್ಲಿ ಈ ವಾರ್ಷಿಕ ಸರಾಸರಿಗಿಂತ ಅಧಿಕ, ಅಂದರೆ 511 ಶತಕೋಟಿ ಟನ್‌ನಷ್ಟು ಹಿಮ ಕರಗಿತ್ತು. 2019ರಲ್ಲಿ ಕರಗಿರುವ ಹಿಮದ ಪ್ರಮಾಣ ಈ ಎಲ್ಲ ಹಿಂದಿನ ದಾಖಲೆಗಳನ್ನು ಹಿಂದಿಕ್ಕಿದೆ ಎಂದು ‘ನೇಚರ್‌ ಕಮ್ಯುನಿಕೇಷನ್ಸ್‌ ಅರ್ಥ್ ಆ್ಯಂಡ್ ಎನ್ವಿರಾನ್‌ಮೆಂಟ್‌’ ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನದಲ್ಲಿ ವಿವರಿಸಲಾಗಿದೆ.

ADVERTISEMENT

‘ಗ್ರೀನ್‌ಲ್ಯಾಂಡ್‌ನಲ್ಲಿ ಹಿಮ ಕರುಗುವುದು ಸಹಜ ವಿದ್ಯಮಾನ. ಆದರೆ, ಇತ್ತೀಚಿನ ವರ್ಷಗಳಲ್ಲಿ ಬಹಳ ವೇಗವಾಗಿ ಕರಗುತ್ತಿರುವುದನ್ನು ಕಾಣಬಹುದು’ ಎಂದು ಜರ್ಮನಿಯ ಅಲ್ಫ್ರೆಡ್‌ ವೆಜಿನರ್‌ ಇನ್‌ಸ್ಟಿಟ್ಯೂಟ್‌ನ ಭೂವಿಜ್ಞಾನಿ ಇಂಗೊ ಸಸ್ಗೆನ್‌ ಹೇಳುತ್ತಾರೆ.

‘ಕಳೆದ ವರ್ಷ ಕರಗಿದ ಹಿಮದಿಂದಾಗಿ ಜಾಗತಿಕವಾಗಿ ಸಮುದ್ರಮಟ್ಟದಲ್ಲಿ 0.06 ಇಂಚುಗಳಷ್ಟು (1.5 ಮಿ.ಮೀ.) ಏರಿಕೆಯಾಗಿದೆ. ಈ ಏರಿಕೆ ಪ್ರಮಾಣ ಅತ್ಯಲ್ಪ ಎನಿಸಿದರೂ, ಅದರಿಂದಾಗುವ ಪರಿಣಾಮ ಅಗಾಧ’ ಎನ್ನುತ್ತಾರೆ ನಾಸಾದ ವಿಜ್ಞಾನಿ ಅಲೆಕ್ಸ್‌ ಗಾರ್ಡನರ್‌.

‘ಗ್ರೀನ್‌ಲ್ಯಾಂಡ್‌ನಲ್ಲಿ ಹಿಮ ಕರಗುವ ವಿದ್ಯಮಾನ ಕುರಿತು 1948ರಿಂದಲೂ ಅಧ್ಯಯನ ನಡೆದಿದ್ದರೂ, 2003ರಿಂದ ನಿಖರವಾಗಿ ದಾಖಲಿಸಲಾಗುತ್ತಿದೆ . ಉಪಗ್ರಹ ಕಳಿಸುವ ದತ್ತಾಂಶಗಳನ್ನು ನಾಸಾ ವಿಶ್ಲೇಷಣೆ ಮಾಡುತ್ತಿರುವುದರಿಂದ ಇದು ಸಾಧ್ಯವಾಗಿದೆ’ ಎಂದೂ ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.