ADVERTISEMENT

10 ಬಾರಿ ಮೌಂಟ್ ಎವರೆಸ್ಟ್ ಏರಿದ್ದ ಐರ್ಲೆಂಡ್‌ನ ನೊಯೇಲ್ ಹನ್ನಾ ಇನ್ನಿಲ್ಲ

ಏಜೆನ್ಸೀಸ್
Published 19 ಏಪ್ರಿಲ್ 2023, 3:01 IST
Last Updated 19 ಏಪ್ರಿಲ್ 2023, 3:01 IST
ನೋಯಿಲ್ ಹನ್ನಾ
ನೋಯಿಲ್ ಹನ್ನಾ   

ಕಠ್ಮಂಡು: ಜಗತ್ತಿನಲ್ಲೇ ಅತಿ ಎತ್ತರವಾದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು 10 ಬಾರಿ ಯಶಸ್ವಿಯಾಗಿ ಏರಿ ಬಂದಿದ್ದ ಹಾಗೂ ಐರ್ಲೆಂಡ್‌ನ ಹೆಸರಾಂತ ಪರ್ವತಾರೋಹಿ 56 ವರ್ಷದ ನೊಯೇಲ್ ಹನ್ನಾ ಮೃತರಾಗಿದ್ದಾರೆ.

ಅವರು ನೇಪಾಳದ ಅನ್ನಪೂರ್ಣ ಪರ್ವತ ಪ್ರದೇಶದಲ್ಲಿ ಪರ್ವತಾರೋಹಣ ಮಾಡಿ ವಾಪಸ್ ಬರುವಾಗ ಟೆಂಟ್‌ನಲ್ಲಿ ಆಕ್ಸಿಜನ್ ಕೊರತೆಯಿಂದ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.

ಅವರ ಮೃತದೇಹವನ್ನು ಕೆಳಗೆ ತರಲಾಗುತ್ತಿದ್ದು ಅಲ್ಲಿಂದ ಕಠ್ಮಂಡುವಿಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಸೆವೆನ್ ಸಮ್ಮಿಟ್ ಟ್ರೆಕ್ಕಿಂಗ್‌ನ ಮಿಂಗ್ಮಾ ಶೆರ್ಫಾ ತಿಳಿಸಿದ್ದಾರೆ.

ADVERTISEMENT

ನೊಯೇಲ್ ಅವರು ಸಾಯುವ ಮುನ್ನ 8,091 ಮೀಟರ್ ಎತ್ತರವಿರುವ ಅನ್ನಪೂರ್ಣ ಪರ್ವತವನ್ನು (ಮೌಂಟ್ ಎವರೆಸ್ಟ್ 8,849) ಯಶಸ್ವಿಯಾಗಿ ಏರಿದ್ದರು.

2006 ರಿಂದ 2020ರವರೆಗೆ ವಿವಿಧ ಸಂದರ್ಭಗಳಲ್ಲಿ ನೊಯೇಲ್ ಒಟ್ಟು 10 ಬಾರಿ ಮೌಂಟ್ ಎವರೆಸ್ಟ್ ಅನ್ನು ಯಶಸ್ವಿಯಾಗಿ ಏರಿದ್ದರು. ಈ ಮೂಲಕ ಅವರು ಪ್ರಪಂಚದ ಟಾಪ್ 10 ಪರ್ವತಾರೋಹಿಗಳ ಸಾಲಿನಲ್ಲಿ ಹೆಸರು ಪಡೆದಿದ್ದರು.

ಇದೇ ವೇಳೆ ನೊಯೇಲ್ ಅವರ ಜೊತೆ ಅನ್ನಪೂರ್ಣ ಪರ್ವತ ಏರಲು ಹೋಗಿದ್ದ ಭಲಜೀತ್ ಕೌರ್ ಹಾಗೂ ಅರ್ಜುನ್ ವಾಜಪೇಯಿ ಅವರನ್ನು ಅಪಾಯದಿಂದ ರಕ್ಷಿಸಲಾಗಿದೆ. ಕಳೆದ ವಾರ ಇಲ್ಲಿಯೇ ಹಿಮಗಾಳಿಯಿಂದ ನೇಪಾಳದ ಮೂವರು ಪರ್ವತಾರೋಹಿಗಳು ಮೃತಪಟ್ಟಿದ್ದರು.

ಅತ್ಯಂತ ಅಪಾಯಕಾರಿಯಾಗಿರುವ ಅನ್ನಪೂರ್ಣ ಪರ್ವತಪ್ರದೇಶದಲ್ಲಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಪರ್ವತಾರೋಹಿಗಳು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.