ADVERTISEMENT

ರಿಷಿ ಸುನಕ್‌ ಮೇಲೆ ಆಜೀವ ನಿಷೇಧ ಹೇರಿದ ಬ್ರಿಟನ್‌ನ ಪಬ್‌

ಪಿಟಿಐ
Published 24 ಅಕ್ಟೋಬರ್ 2020, 13:15 IST
Last Updated 24 ಅಕ್ಟೋಬರ್ 2020, 13:15 IST
ರಿಷಿ ಸುನಕ್‌
ರಿಷಿ ಸುನಕ್‌   

ಲಂಡನ್‌: ಬ್ರಿಟನ್‌ನ ಹಣಕಾಸು ಸಚಿವ ರಿಷಿ ಸುನಕ್ ಹಾಗೂ ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷದ ಮೂವರು ಸಂಸದರ ಮೇಲೆ ಇಲ್ಲಿನ ಪಬ್‌ವೊಂದು ಆಜೀವ ನಿಷೇಧ ಹೇರಿದೆ.

ಈ ವರ್ಷದ ಆರಂಭದಲ್ಲಿ ಬ್ರಿಟನ್‌ ಸರ್ಕಾರವು ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳಿಗೆ ಉಚಿತ ಊಟ ನೀಡುವ ತಾತ್ಕಾಲಿಕ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯನ್ನು ಮುಂದುವರಿಸಬೇಕೊ ಬೇಡವೊ ಎಂಬುದರ ಕುರಿತು ಇತ್ತೀಚೆಗೆ ಸಂಸತ್ತಿನಲ್ಲಿ ಸುದೀರ್ಘ ಚರ್ಚೆ ನಡೆದಿತ್ತು. ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿಯವರ ಅಳಿಯ ರಿಷಿ ಹಾಗೂ ಸಂಸದರಾದ ಮ್ಯಾಟ್‌ ವಿಕರ್ಸ್‌, ಸಿಮನ್‌ ಕ್ಲಾರ್ಕ್‌ ಮತ್ತು ಜೇಕಬ್‌ ಯಂಗ್‌ ಅವರು ಈ ಯೋಜನೆಯನ್ನು ಮುಂದುವರಿಸುವುದರ ವಿರುದ್ಧ ಮತ ಚಲಾಯಿಸಿದ್ದರು. ಹೀಗಾಗಿ ಉತ್ತರ ಯಾರ್ಕ್‌ಶೈರ್‌ನ ಸ್ಟೋಕ್ಸ್‌ಲಿಯಲ್ಲಿರುವ ದಿ ಮಿಲ್‌ ಪಬ್‌ನ ಮಾಲೀಕ ಅಲೆಕ್ಸ್‌ ಕುಕ್‌, ಈ ನಾಲ್ವರ ಮೇಲೆ ನಿಷೇಧ ಹೇರಿದ್ದಾರೆ.

ಕುಕ್‌ ಒಡೆತನದ ಮಿಲ್‌ ಪಬ್‌ ಮತ್ತು ಮುಲಿನೊ ರೆಸ್ಟೋರೆಂಟ್‌, ಸುನಕ್‌ ಅವರು ಪ್ರತಿನಿಧಿಸುವ ಕ್ಷೇತ್ರದಲ್ಲೇ ಇದೆ.

ADVERTISEMENT

‘ಬ್ರಿಟನ್‌ ಸರ್ಕಾರವುಶಾಲಾ ಮಕ್ಕಳಿಗೆ ಉಚಿತ ಊಟ ನೀಡುವ ಯೋಜನೆಯನ್ನು ಮುಂದುವರಿಸುವುದರ ವಿರುದ್ಧ ಮತ ಚಲಾಯಿಸಿದ್ದು ವಿಪರ್ಯಾಸ’ ಎಂದು ಕುಕ್‌ ಅವರು ಗುರುವಾರ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

‘ರಿಷಿ, ವಿಕರ್ಸ್‌, ಕ್ಲಾರ್ಕ್‌ ಮತ್ತು ಜೇಕಬ್‌ ಅವರೂ ಯೋಜನೆಯ ವಿರುದ್ಧ ಮತ ಚಲಾಯಿಸಿದ್ದು ಬೇಸರ ತರಿಸಿದೆ. ಇವರು ನಮ್ಮ ಪಬ್‌ ಹಾಗೂ ರೆಸ್ಟೋರೆಂಟ್‌ಗೆ ಕಾಲಿಡುವುದು ಬೇಡ. ಇವರ ಮೇಲೆ ನಾವು ಆಜೀವ ನಿಷೇಧ ಹೇರಿದ್ದೇವೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.