ADVERTISEMENT

ಬ್ರಿಟನ್‌ ಪ್ರಧಾನಿ ಸ್ಥಾನದ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿ ರಿಷಿ ಸುನಕ್

ಪಿಟಿಐ
Published 9 ಜುಲೈ 2022, 14:25 IST
Last Updated 9 ಜುಲೈ 2022, 14:25 IST
ರಿಷಿ ಸುನಕ್ (ಎಪಿ ಚಿತ್ರ)
ರಿಷಿ ಸುನಕ್ (ಎಪಿ ಚಿತ್ರ)   

ಲಂಡನ್: ಬ್ರಿಟನ್‌ನ ಕನ್ಸರ್ವೇಟಿವ್‌ ಪಕ್ಷದ ನಾಯಕತ್ವ ವಹಿಸಿಕೊಳ್ಳಲು, ಆ ಮೂಲಕ ಮುಂದಿನ ಪ್ರಧಾನಿಯಾಗುವ ಸ್ಪರ್ಧೆಯಲ್ಲಿ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಮುಂಚೂಣಿಯಲ್ಲಿದ್ದು, ಶನಿವಾರ ಔಪಚಾರಿಕವಾಗಿ ಪ್ರಚಾರ ಆರಂಭಿಸಿದ್ದಾರೆ.

ಇನ್ಫೊಸಿಸ್ ಸಹಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ, ಕನ್ಸರ್ವೇಟಿವ್ ಪಕ್ಷದ ಮಾಜಿ ಅಧ್ಯಕ್ಷ ಆಲಿವರ್ ಡೌಡೆನ್ ಮತ್ತು ಮಾಜಿ ಕ್ಯಾಬಿನೆಟ್ ಸಚಿವ ಲಿಯಾಮ್ ಫಾಕ್ಸ್ ಸೇರಿದಂತೆ ಸಂಸತ್ತಿನ ಹಿರಿಯ ಟೋರಿ ಸದಸ್ಯರ ಬೆಂಬಲವನ್ನು ಪಡೆದಿದ್ದಾರೆ.

ದೇಶದ ಆರ್ಥಿಕ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯವೂ ರಿಷಿ ಅವರಿಗಿದೆ ಎನ್ನುವ ಮಾತುಗಳೂ ಕೇಳಿಬಂದಿವೆ. ರಿಷಿ ಸುನಕ್ ಅವರು ಪ್ರಧಾನಿ ಸ್ಥಾನವನ್ನು ಗೆದ್ದರೆ ಅವರು ಬ್ರಿಟನ್ ಪ್ರಧಾನಿಯಾದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗಲಿದ್ದಾರೆ.

ADVERTISEMENT

ಬ್ರಿಟನ್‌ನ ಓಡ್ಸ್‌ಚೆಕ್ಸರ್ ಬೆಟ್ಟಿಂಗ್ ಏಜೆನ್ಸಿಯ ಬುಕ್ಕಿಗಳ ಪ್ರಕಾರ, ಪ್ರಧಾನಿ ಸ್ಥಾನದ ಪ್ರಬಲ ಆಕಾಂಕ್ಷಿಗಳ ಪೈಕಿ ರಿಷಿ ಮುಂಚೂಣಿಯಲ್ಲಿದ್ದಾರೆ. ಸ್ಪರ್ಧೆಯಲ್ಲಿ ಕೇಳಿಬರುತ್ತಿರುವ ಮತ್ತಿಬ್ಬರು ಅಭ್ಯರ್ಥಿಗಳಾದ ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಮತ್ತು ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್ ಅವರ ಹೆಸರು ಇನ್ನಷ್ಟೇ ಘೋಷಣೆಯಾಗಬೇಕಿದೆ.

‌‘ಕೋವಿಡ್‌ನ ದುಃಸ್ವಪ್ನವನ್ನು ಎದುರಿಸಿದ ಕಠಿಣ ಸಮಯದಲ್ಲಿ ನಾನು ಸರ್ಕಾರದಲ್ಲಿ ಅತ್ಯಂತ ಕಷ್ಟಕರವಾಗಿದ್ದ ಇಲಾಖೆಯನ್ನು ಮುನ್ನಡೆಸಿದ್ದೇನೆ. ಕನ್ಸರ್ವೇಟಿವ್ ಪಕ್ಷದ ಮುಂದಿನ ನಾಯಕತ್ವ ವಹಿಸಿಕೊಳ್ಳಲು ಹಾಗೂ ನಿಮ್ಮ ಮುಂದಿನ ಪ್ರಧಾನಿಯಾಗಲು ಬೆಂಬಲ ಕೋರುತ್ತಿದ್ದೇನೆ’ ಎಂದು ‘ರೆಡಿಫಾರ್ ರಿಷಿ’ ಎನ್ನುವ ಹ್ಯಾಷ್‌ಟ್ಯಾಗ್‌ನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆಯಾದ ಪ್ರಚಾರ ವಿಡಿಯೊದಲ್ಲಿ ರಿಷಿ ಮನವಿ ಮಾಡಿದ್ದಾರೆ.

‘ನಮ್ಮ ದೇಶವು ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ. ಯಾರಾದರೂ ಈ ಕ್ಷಣವನ್ನು ಹಿಡಿದಿಟ್ಟುಕೊಳ್ಳಬೇಕು ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅದಕ್ಕಾಗಿ ನಿಮ್ಮ ಬೆಂಬಲ ಕೋರುತ್ತಿರುವೆ. ಬನ್ನಿ ಮತ್ತೆ ನಂಬಿಕೆಯನ್ನು ಬಲಪಡಿಸಿ, ಆರ್ಥಿಕ ಸ್ಥಿತಿಯನ್ನು ಪುನಃಶ್ಚೇತನಗೊಳಿಸೋಣ’ ಎಂದೂ ಅವರು ವಿಡಿಯೊ ಪ್ರಚಾರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.