ADVERTISEMENT

ಅಮೆರಿಕ ಜೊತೆಗಿನ ಪರಮಾಣು ಶಸ್ತ್ರಾಸ್ತ್ರ ಒಪ್ಪಂದ ರದ್ದುಪಡಿಸಿದ ರಷ್ಯಾ

ರಾಯಿಟರ್ಸ್
Published 21 ಫೆಬ್ರುವರಿ 2023, 13:47 IST
Last Updated 21 ಫೆಬ್ರುವರಿ 2023, 13:47 IST
   

ಮಾಸ್ಕೊ: ಉಭಯ ರಾಷ್ಟ್ರಗಳ ಕಾರ್ಯತಂತ್ರದ ಪರಮಾಣು ಶಸ್ರ್ತಾಸ್ತ್ರಗಳ ಬಳಕೆ ಮಿತಿಗೊಳಿಸುವ ಅಮೆರಿಕ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸುತ್ತಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

‘ಇಂದು ಒತ್ತಾಯಪೂರ್ವಕವಾಗಿ ನಾನು ಈ ಘೋಷಣೆ ಮಾಡಬೇಕಿದೆ. ಅದೇನೆಂದರೆ, ಅಮೆರಿಕ ಜೊತೆಗಿನ ಕಾರ್ಯತಂತ್ರದ ಆಕ್ರಮಣಕಾರಿ ಶಸ್ತ್ರಾಸ್ತ್ರ ಒಪ್ಪಂದದಲ್ಲಿ ರಷ್ಯಾ ಭಾಗವಹಿಸುವಿಕೆಯನ್ನು ರದ್ದು ಮಾಡುತ್ತಿದ್ದೇನೆ’ ಎಂದು ಪುಟಿನ್ ಹೇಳಿದರು.

2010ರಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿದ್ದು, 2021ರಲ್ಲಿ ಜೋ ಬೈಡನ್ ಅಮೆರಿಕ ಅಧ್ಯಕ್ಷರಾದ ಬಳಿಕ ಐದು ವರ್ಷಗಳ ಅವಧಿಗೆ ವಿಸ್ತರಿಸಲಾಗಿತ್ತು.

ADVERTISEMENT

ಈ ಒಪ್ಪಂದವು ಅಮೆರಿಕ ಮತ್ತು ರಷ್ಯಾ ದೇಶಗಳು ತಮ್ಮಲ್ಲಿರುವ ಪರಮಾಣು ಶಸ್ರ್ತಾಸ್ತ್ರಗಳ ಬಳಕೆಯನ್ನು ಮಿತಿಗೊಳಿಸುತ್ತದೆ.

ಪರಿಣಿತರ ಪ್ರಕಾರ, 6,000 ಸಿಡಿತಲೆಗಳನ್ನು ಹೊಂದಿರುವ ರಷ್ಯಾವು ವಿಶ್ವದಲ್ಲಿ ಅತಿ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳ ದಾಸ್ತಾನು ಹೊಂದಿರುವ ದೇಶವಾಗಿದೆ. ಅಮೆರಿಕ ಮತ್ತು ರಷ್ಯಾ ದೇಶಗಳು ವಿಶ್ವದ ಶೇ 90ರಷ್ಟು ಪರಮಾಣು ಸಿಡಿತಲೆಗಳನ್ನು ಹೊಂದಿವೆ. ಈ ಶಸ್ತ್ರಾಸ್ತ್ರಗಳನ್ನು ಬಳಸಿ ಹಲವು ಬಾರಿ ಭೂಮಿಯನ್ನು ನಾಶಪಡಿಸಬಹುದಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಸೋಮವಾರ ಉಕ್ರೇನ್‌ ರಾಜಧಾನಿ ಕೀವ್‌ಗೆ ಅಘೋಷಿತ ಭೇಟಿ ನೀಡಿದ್ದರು. ಬೈಡನ್ ಅವರ ಈ ಭೇಟಿ ರಷ್ಯಾ ಕಣ್ಣು ಕೆಂಪಾಗುವಂತೆ ಮಾಡಿತ್ತು.

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬೈಡನ್‌, ಹೆಚ್ಚುವರಿ 50 ಕೋಟಿ ಡಾಲರ್‌ (₹413 ಕೋಟಿ) ನೆರವು ನೀಡುವುದಾಗಿ ಘೋಷಿಸಿದ್ದರು.

‘ಉಕ್ರೇನ್‌ ಮತ್ತು ಪ್ರಜಾಪ್ರಭುತ್ವ ಗಟ್ಟಿಯಾಗಿ ನಿಂತಿವೆ. ಅಮೆರಿಕ ಹಾಗೂ ಇಡೀ ಜಗತ್ತು ಉಕ್ರೇನ್‌ ಪರವಾಗಿದೆ’ ಎಂದು ಬೈಡನ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.