ADVERTISEMENT

ಕೀವ್‌ ಮೇಲೆ ರಷ್ಯಾ ದಾಳಿ ತೀವ್ರ: ರಾತ್ರಿಯಿಡೀ ಡ್ರೋನ್‌ ಮತ್ತು ಕ್ಷಿಪಣಿ ದಾಳಿ

ಪಿಟಿಐ
Published 2 ಸೆಪ್ಟೆಂಬರ್ 2024, 11:30 IST
Last Updated 2 ಸೆಪ್ಟೆಂಬರ್ 2024, 11:30 IST
ರಷ್ಯಾ ನಡೆಸಿದ ಕ್ಷಿಪಣಿ ದಾಳಿಗೆ ಉಕ್ರೇನ್‌ನ ಕೀವ್‌ ನಗರದ ಕಟ್ಟಡವೊಂದಕ್ಕೆ ಹಾನಿಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು –ಎಎಫ್‌ಪಿ ಚಿತ್ರ 
ರಷ್ಯಾ ನಡೆಸಿದ ಕ್ಷಿಪಣಿ ದಾಳಿಗೆ ಉಕ್ರೇನ್‌ನ ಕೀವ್‌ ನಗರದ ಕಟ್ಟಡವೊಂದಕ್ಕೆ ಹಾನಿಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು –ಎಎಫ್‌ಪಿ ಚಿತ್ರ    

ಕೀವ್: ಬೇಸಿಗೆ ರಜೆಯ ನಂತರ ಮಕ್ಕಳು ದೇಶದಾದ್ಯಂತ ಶಾಲೆಗೆ ಮರಳಲು ತಯಾರಿ ನಡೆಸುತ್ತಿರುವ ಸಂದರ್ಭದಲ್ಲೇ, ಕೀವ್‌ ನಗರದ ಮೇಲೆ ರಷ್ಯಾದ ದಾಳಿ ತೀವ್ರಗೊಂಡಿದೆ.

ಭಾನುವಾರ ರಾತ್ರಿಯಿಡೀ ರಷ್ಯಾ ಸೇನೆ, ಕೀವ್‌ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ದಾಳಿ ನಡೆಸಿದೆ ಎಂದು ಉಕ್ರೇನ್ ವಾಯುಪಡೆ ಸೋಮವಾರ ತಿಳಿಸಿದೆ.

ಕೀವ್‌ನಲ್ಲಿ ಬೆಳಗಿನ ಜಾವ ಹಲವೆಡೆ ಸ್ಫೋಟದ ಸದ್ದು ಕೇಳಿಬಂದಿದೆ. ರಷ್ಯಾದ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದ್ದು, ಅವುಗಳ ಅವಶೇಷಗಳು ನಗರದ ವಿವಿಧೆಡೆ ಬಿದ್ದಿವೆ. ಮೂವರು ಗಾಯಗೊಂಡಿದ್ದು, ಎರಡು ಶಿಶುವಿಹಾರಗಳಿಗೆ ಹಾನಿಯಾಗಿದೆ ಎಂದು ಉಕ್ರೇನ್‌ನ ಒಳಾಡಳಿತ ಸಚಿವಾಲಯ ಹೇಳಿದೆ. ನಗರದ ಕೆಲವು ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದಾಗಿ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಭಾನುವಾರ ರಾತ್ರಿಯಿಂದ ಸೋಮವಾರ ನಸುಕಿನ ಅವಧಿಯಲ್ಲಿ ರಷ್ಯಾ ಪಡೆಗಳು ವಿವಿಧ ರೀತಿಯ 35 ಕ್ಷಿಪಣಿಗಳು ಮತ್ತು 26 ಡ್ರೋನ್‌ಗಳನ್ನು ಹಾರಿಸಿವೆ. 9 ಬ್ಯಾಲಿಸ್ಟಿಕ್‌ ಕ್ಷಿಪಣಿಗಳು, 13 ಕ್ರೂಸ್‌ ಕ್ಷಿಪಣಿಗಳು ಮತ್ತು 20 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್‌ ಸೇನೆ ಮಾಹಿತಿ ನೀಡಿದೆ.

ಉಕ್ರೇನ್‌ನ ಎರಡನೇ ಅತಿದೊಡ್ಡ ನಗರ ಹಾರ್ಕಿವ್‌ನಲ್ಲೂ ಸ್ಫೋಟದ ಸದ್ದು ಕೇಳಿಬಂದವು ಎಂದು ಮಾಧ್ಯಮಗಳು ವರದಿ ಮಾಡಿವೆ. ನಗರದ ಇಂಡಸ್ಟ್ರಿಯಲ್ನಿ ಪ್ರದೇಶದ ಮೇಲೆ ಸೋಮವಾರ ನಸುಕಿನಲ್ಲಿ ಕ್ಷಿಪಣಿ ದಾಳಿ ನಡೆದಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಒಂದು ವಸತಿ ಸಮುಚ್ಛಯ ಹಾಗೂ ಕೆಲವು ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡವು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.