ADVERTISEMENT

ಉಕ್ರೇನ್‌ನ ಝಪೊರಿಝಿಯಾ ಮೇಲೆ ರಷ್ಯಾದ ಕ್ಷಿಪಣಿ ದಾಳಿ: 17 ಸಾವು

ಏಜೆನ್ಸೀಸ್
Published 10 ಅಕ್ಟೋಬರ್ 2022, 2:08 IST
Last Updated 10 ಅಕ್ಟೋಬರ್ 2022, 2:08 IST
   

ಝಪೊರಿಝಿಯಾ: ಉಕ್ರೇನ್‌ನ ಝಪೊರಿಝಿಯಾದಲ್ಲಿ ಅಪಾರ್ಟ್‌ಮೆಂಟ್‌ ಕಟ್ಟಡಗಳು ಮತ್ತು ಇತರ ನೆಲೆಗಳ ಮೇಲೆ ರಷ್ಯಾದ ಪಡೆಗಳು ನಡೆಸಿದ ಕ್ಷಿಪಣಿ ದಾಳಿಗೆ 17 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿ ರುವುದಾಗಿ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.

ಕ್ರಿಮಿಯಾದ ಪ್ರಮುಖ ಸಂಪರ್ಕದ ಕೆರ್ಚ್‌ ಸೇತುವೆಯನ್ನು ಉಕ್ರೇನ್‌ಸೇನೆ ಸ್ಫೋಟಿಸಿರುವುದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಉಕ್ರೇನ್‌ ನಿಯಂತ್ರಣದಲ್ಲಿರುವ ಪ್ರದೇಶದ ಮೇಲೆ ದಾಳಿ ನಡೆಸಿದ್ದಾಗಿ ರಷ್ಯಾ ಹೇಳಿದೆ. ಬಹುಮಹಡಿ ಅಪಾರ್ಟ್‌ಮೆಂಟ್‌ ಕಟ್ಟಡ ಭಾಗಶಃ ಕುಸಿದಿದೆ. ಅಕ್ಕಪಕ್ಕದ ಕಟ್ಟಡಗಳಿಗೂ ಭಾರಿ ಹಾನಿಯಾಗಿದೆ. ಸಾವು ಸಂಭವಿಸಿರುವುದನ್ನು ಉಕ್ರೇನ್‌ ಸೇನೆಯೂ ಖಚಿತ‍ಪಡಿಸಿದೆ.

ವಸತಿ ಪ್ರದೇಶಗಳ ಮೇಲೆ ರಾತ್ರಿಯಿಡಿ ರಷ್ಯಾ ಸೇನೆ ನಡೆಸಿದ ಕ್ಷಿಪಣಿ ದಾಳಿಗೆ 20 ಮನೆಗಳು,50 ಅಪಾರ್ಟ್‌ ಮೆಂಟ್‌ಗಳು ಜಖಂಗೊಂಡಿವೆ. ಗಾಯಗೊಂಡಿರುವ40 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಟಿ ಕೌನ್ಸಿಲ್‌ ಕಾರ್ಯದರ್ಶಿ ಅನಾಟೋಲಿ ಕರ್ಟೆವ್ ತಿಳಿಸಿದ್ದಾರೆ.

ADVERTISEMENT

ಗುರುವಾರ ನಗರದ ಅಪಾರ್ಟ್‌ಮೆಂಟ್‌ ಕಟ್ಟಡಗಳ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ 19 ಜನರು ಸಾವನ್ನಪ್ಪಿದ್ದರು.

ಕ್ರಿಮಿಯಾ ಮತ್ತು ರಷ್ಯಾ ನಡುವಿನ ಇಂಧನ ಮೂಲಸೌಕರ್ಯಕ್ಕಾಗಿ ಕೆರ್ಚ್‌ ಸೇತುವೆಗೆ ಬಿಗಿ ಭದ್ರತೆ ಒದಗಿಸುವ, ಫೆಡರಲ್ ಭದ್ರತಾ ಸೇವೆ ಎಫ್‌ಎಸ್‌ಬಿಯ ಉಸ್ತುವಾರಿ ವಹಿಸುವ ಆದೇಶಕ್ಕೆ ಶನಿವಾರ ತಡರಾತ್ರಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಸಹಿ ಹಾಕಿದರು. ಅಲ್ಲದೆ, ವಾಯುಪಡೆಯ ಮುಖ್ಯಸ್ಥ ಸೆರ್ಗೆಯ್ ಸುರೊವಿಕಿನ್ ಅವರನ್ನುಉಕ್ರೇನ್‌ನಲ್ಲಿ ಹೋರಾಡುತ್ತಿರುವ ರಷ್ಯಾದ ಎಲ್ಲ ಸೈನಿಕರಿಗೆ ಮುಖ್ಯಸ್ಥರಾಗಿ ನೇಮಿಸಲಾಗಿದೆ.

ಝೆಲೆನ್‌ಸ್ಕಿ ಖಂಡನೆ:ಕೆರ್ಚ್‌ ಸೇತುವೆ ಮೇಲಿನ ದಾಳಿಯ ಹೊಣೆಯನ್ನು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ರಷ್ಯಾದ ಕ್ಷಿಪಣಿ ದಾಳಿಯನ್ನು ತೀಕ್ಷ್ಣವಾಗಿ ಖಂಡಿಸಿದರು.

‘ವಸತಿ ಕಟ್ಟಡಗಳನ್ನು ಗುರಿಯಾಗಿಸಿ ನಡೆದಿರುವ ಇದು ಅರ್ಥಹೀನ ದಾಳಿ. ಇದಕ್ಕೆ ತಕ್ಕಬೆಲೆ ತೆರಲೇಬೇಕು’ ಎಂದು ಝೆಲೆನ್‌ಸ್ಕಿ, ಪುಟಿನ್‌ ವಿರುದ್ಧ ಗುಡುಗಿದ್ದಾರೆ.

ಉಕ್ರೇನ್‌ನ ದಕ್ಷಿಣದಲ್ಲಿನ ಸೇನಾ ಕಾರ್ಯಾಚರಣೆಗೆ ಅಗತ್ಯ ಶಸ್ತ್ರಾಸ್ತ್ರ ಮತ್ತು ಇಂಧನಗಳನ್ನು ಪೂರೈಸಲು ಪ್ರಮುಖ ಮಾರ್ಗವಾಗಿಕೆರ್ಚ್ ಸೇತುವೆಯನ್ನು ರಷ್ಯಾ ಬಳಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.