ADVERTISEMENT

Russia Ukraine War: ಉಕ್ರೇನ್‌ ಮೇಲೆ ಹೈಪರ್‌ಸಾನಿಕ್‌ ಕ್ಷಿಪಣಿಯಿಂದ ರಷ್ಯಾ ದಾಳಿ

ಏಜೆನ್ಸೀಸ್
Published 13 ಡಿಸೆಂಬರ್ 2025, 16:20 IST
Last Updated 13 ಡಿಸೆಂಬರ್ 2025, 16:20 IST
<div class="paragraphs"><p>ಉಕ್ರೇನ್‌ ಮೇಲೆ ರಷ್ಯಾ ರಾಕೆಟ್‌ ದಾಳಿ ನಡೆಸಿತು</p></div>

ಉಕ್ರೇನ್‌ ಮೇಲೆ ರಷ್ಯಾ ರಾಕೆಟ್‌ ದಾಳಿ ನಡೆಸಿತು

   

ಮಾಸ್ಕೊ: ರಷ್ಯಾ ಸೇನೆಯು ಉಕ್ರೇನ್‌ನ ಕೈಗಾರಿಕಾ ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ಹೈಪರ್‌ಸಾನಿಕ್‌ ಕ್ಷಿಪಣಿಗಳಿಂದ ದಾಳಿ ನಡೆಸಿದೆ. 

‘ಕಿನ್‌ಝಾಲ್ ಹೈಪರ್‌ಸಾನಿಕ್‌ ಕ್ಷಿಪಣಿಗಳನ್ನು ಬಳಸಿ ಉಕ್ರೇನ್‌ ಸೇನೆ ಮತ್ತು ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಶುಕ್ರವಾರ ರಾತ್ರಿ ಭಾರಿ ದಾಳಿ ನಡೆಸಿದ್ದೇವೆ. ರಷ್ಯಾದ ನಾಗರಿಕರನ್ನು ಗುರಿಯಾಗಿಸಿ ಉಕ್ರೇನ್‌ ನಡೆಸಿದ ದಾಳಿಗೆ ಪ್ರತಿಯಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಯಿತು’ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ.

ADVERTISEMENT

ಇಬ್ಬರು ಸಾವು: ರಷ್ಯಾದ ನೈರುತ್ಯ ಭಾಗದಲ್ಲಿರುವ ಸರತೊವ್ ಪ್ರಾಂತ್ಯದ ಮೇಲೆ ಉಕ್ರೇನ್‌ ನಡೆಸಿದ ಡ್ರೋನ್‌ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಉಕ್ರೇನ್‌ ಹಾರಿಸಿದ 41 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ಸೇನೆ ಹೇಳಿದೆ.

ವಿದ್ಯುತ್‌ ಪೂರೈಕೆ ಸ್ಥಗಿತ (ಕೀವ್‌ ವರದಿ): ರಷ್ಯಾ ನಡೆಸಿದ ದಾಳಿಯಿಂದ 12ಕ್ಕೂ ಅಧಿಕ ನಾಗರಿಕ ಮೂಲಸೌಕರ್ಯಗಳಿಗೆ ಹಾನಿಯಾಗಿವೆ. ಏಳು ಪ್ರಾಂತ್ಯಗಳಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದ್ದು, ಹಲವು ಪ್ರದೇಶಗಳು ಕತ್ತಲಲ್ಲಿ ಮುಳುಗಿವೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

‘ರಷ್ಯಾ ಏನು ಮಾಡುತ್ತಿದೆ ಎಂಬುದನ್ನು ಈಗ ಎಲ್ಲರೂ ತಿಳಿದುಕೊಳ್ಳುವುದು ಮುಖ್ಯ. ಅವರಿಗೆ ಯುದ್ಧವನ್ನು ಕೊನೆಗೊಳಿಸುವ ಉದ್ದೇಶ ಇಲ್ಲ ಎಂಬುದು ಸ್ಪಷ್ಟ. ನಮ್ಮ ದೇಶವನ್ನು ಇನ್ನಷ್ಟು ನಾಶ ಮಾಡಿ, ಜನರಿಗೆ ಗರಿಷ್ಠ ನೋವು ಉಂಟುಮಾಡುವ ಗುರಿಯನ್ನು ಹೊಂದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.