ADVERTISEMENT

ರಷ್ಯಾದಿಂದ ಬೃಹತ್‌ ದಾಳಿ: 3 ಸಾವು, ಹಲವರಿಗೆ ಗಾಯ

ಉಕ್ರೇನ್‌ನ 9 ಪ್ರದೇಶಗಳಿಗೆ ನುಗ್ಗಿದ ಡ್ರೋನ್‌, ಕ್ಷಿಪಣಿ

ಎಪಿ
Published 20 ಸೆಪ್ಟೆಂಬರ್ 2025, 15:45 IST
Last Updated 20 ಸೆಪ್ಟೆಂಬರ್ 2025, 15:45 IST
ರಷ್ಯಾದ ಡ್ರೋನ್‌ಗಳನ್ನು ಉಕ್ರೇನ್‌ ವಾಯಪಡೆಯು ಹೊಡೆದುರುಳಿಸಿತು – ಎಎಫ್‌ಪಿ ಚಿತ್ರ
ರಷ್ಯಾದ ಡ್ರೋನ್‌ಗಳನ್ನು ಉಕ್ರೇನ್‌ ವಾಯಪಡೆಯು ಹೊಡೆದುರುಳಿಸಿತು – ಎಎಫ್‌ಪಿ ಚಿತ್ರ   

ಕೀವ್‌: ಉಕ್ರೇನ್‌ ಮೇಲೆ ರಷ್ಯಾವು ಶನಿವಾರ ಬೃಹತ್‌ ಪ್ರಮಾಣದಲ್ಲಿ ಡ್ರೋ‌ನ್‌ ಮತ್ತು ಕ್ಷಿಪಣಿ ದಾಳಿ ನಡೆಸಿದ್ದು, ಮೂವರು ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ.

‘ಕೀವ್‌, ಸುಮಿ, ಹಾರ್ಕೀವ್‌ ಸೇರಿದಂತೆ ಒಂಬತ್ತು ಪ್ರದೇಶಗಳ ಮೇಲೆ ದಾಳಿ ನಡೆದಿದೆ. ನಮ್ಮ ಮೂಲಸೌಕರ್ಯ, ವಸತಿ ಪ್ರದೇಶ ಮತ್ತು ಸಾರ್ವಜನಿಕ ಆಸ್ತಿಗಳು ಶತ್ರುಗಳ ಗುರಿಯಾಗಿದ್ದವು. ಸ್ಪೋಟಕಗಳನ್ನು ಹೊಂದಿದ್ದ ಕ್ಷಿಪಣಿಗಳು ಡಿನಿಪ್ರೊ ನಗರದಲ್ಲಿ ಬಹುಮಹಡಿ ಕಟ್ಟಡವನ್ನು ಹಾನಿಗೊಳಿಸಿವೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

‘ಡಿನಿಪ್ರೊ ನಗರದ ಮೇಲೆ ನಡೆದ ದಾಳಿಯಲ್ಲಿ 26 ಮಂದಿ ಗಾಯಗೊಂಡಿದ್ದಾರೆ’ ಎಂದು ಸ್ಥಳೀಯ ರಾಜ್ಯಪಾಲರು ತಿಳಿಸಿದ್ದಾರೆ. ಕೀವ್‌ ಪ್ರದೇಶದಲ್ಲಿಯೂ ಭಾರಿ ಹಾನಿಯಾಗಿದೆ.

ADVERTISEMENT

ರಷ್ಯಾ 619 ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ದಾಳಿ ಮಾಡಿದೆ. ಅದರಲ್ಲಿ 552 ಡ್ರೋನ್ ಮತ್ತು 31 ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ.

ಮುಂದಿನ ವಾರ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಭದ್ರತಾ ಖಾತರಿಯ ಬಗ್ಗೆ ನಿರ್ಧಾರವಾಗಲಿದೆ ಎಂಬ ಭರವಸೆ ಇದೆ ಎಂದು ಝೆಲೆನ್‌ಸ್ಕಿ ಅವರು ಹೇಳಿದ್ದಾರೆ.

ರಷ್ಯಾದ ದಾಳಿಯಿಂದಾಗಿ ಕೀವ್‌ ಪ್ರದೇಶದಲ್ಲಿ ಹಲವು ವಾಹನಗಳು ಬೆಂಕಿಗಾಹುತಿಯಾಗಿವೆ– ಎಎಫ್‌ಪಿ ಚಿತ್ರ

ಈಸ್ಟೋನಿಯಾದ ವೈಮಾನಿ ಕಗಡಿ ಪ್ರವೇಶಿಸಿಲ್ಲ

ರಷ್ಯಾದ ಯುದ್ಧ ವಿಮಾನಗಳು ಅನುಮತಿ ರಹಿತವಾಗಿ ವೈಮಾನಿಕ ಗಡಿಯೊಳಗೆ ಪ್ರವೇಶಿಸಿ 12 ನಿಮಿಷ ಹಾರಾಟ ನಡೆಸಿವೆ ಎಂದು ಈಸ್ಟೋನಿಯಾ ಮಾಡಿರುವ ಆರೋಪವನ್ನು ರಷ್ಯಾ ನಿರಾಕರಿಸಿದೆ.  ‘ರಷ್ಯಾವು ಲಜ್ಜೆಗೆಟ್ಟ ವರ್ತನೆ ತೋರಿದೆ’ ಎಂದು ಆರೋಪಿಸಿದ್ದ ಈಸ್ಟೋನಿಯಾದ ರಾಜತಾಂತ್ರಿಕರು ಈ ಬಗ್ಗೆ ಪ್ರತಿಭಟನೆ ದಾಖಲಿಸಲು ರಷ್ಯಾದ ರಾಜತಾಂತ್ರಿಕರೊಬ್ಬರಿಗೆ ಸಮನ್ಸ್ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಷ್ಯಾ ‘ಈಸ್ಟೋನಿಯಾ ವೈಮಾನಿಕ ಗಡಿಯಿಂದ ಮೂರು ಕಿ.ಮೀ ದೂರದಲ್ಲಿ ನಮ್ಮ ಯುದ್ಧ ವಿಮಾನ ಹಾರಾಟ ನಡೆಸಿದೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.