ಉಕ್ರೇನ್ ಮೇಲೆ ರಷ್ಯಾ ದಾಳಿ (ಸಾಂದರ್ಭಿಕ ಚಿತ್ರ)
–ರಾಯಿಟರ್ಸ್ ಚಿತ್ರ
ಕೀವ್(ಉಕ್ರೇನ್): ಬುಧವಾರ ರಾತ್ರಿ ಉಕ್ರೇನ್ ವಿರುದ್ಧದ ದಾಳಿಯನ್ನು ರಷ್ಯಾ ತೀವ್ರಗೊಳಿಸಿದ್ದು, 741 ವೈಮಾನಿಕ ಅಸ್ತ್ರಗಳನ್ನು ಬಳಸಿ ದಾಳಿ ಮಾಡಿದೆ. ಇದರಲ್ಲಿ, 728 ಡ್ರೋನ್, 7 ಇಸ್ಕಂದರ್–ಕೆ ಕ್ರೂಸ್ ಕ್ಷಿಪಣಿಗಳು ಮತ್ತು 6 ಕಿಂಝಾಲ್ ಕ್ಷಿಪಣಿ ಸೇರಿವೆ. ಹೆಚ್ಚುತ್ತಿರುವ ರಷ್ಯಾ ಭಯೋತ್ಪಾದನೆಗೆ ಕಡಿವಾಣ ಹಾಕಲು ನಿರ್ಬಂಧ ಹೆಚ್ಚಿಸುವಂತೆ ಉಕ್ರೇನ್ ಕರೆ ನೀಡಿದೆ.
2022ರಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದಾಗಿನಿಂದ ಇದು ಬೃಹತ್ ಆಕ್ರಮಣವಾಗಿದೆ. ಈ ತಿಂಗಳಲ್ಲೇ ರಷ್ಯಾ ಎರಡನೇ ಬಾರಿಗೆ ದೊಡ್ಡ ಆಕ್ರಮಣವನ್ನು ರಷ್ಯಾ ಮಾಡಿದೆ.
ಪ್ರತಿ ದಾಳಿ ಡ್ರೋನ್ ಮತ್ತು ಇತರ ರಕ್ಷಣಾ ಸಾಮಗ್ರಿಗಳನ್ನು ಬಳಸಿ ರಷ್ಯಾದ 718 ವೈಮಾನಿಕ ದಾಳಿಗಳನ್ನು ತಡೆಯಲಾಗಿದೆ ಎಂದು ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಎಫ್‌ಎ) ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಬಲವಾದ ರಕ್ಷಣಾ ವ್ಯವಸ್ಥೆಯ ಹೊರತಾಗಿಯೂ ಬೃಹತ್ ದಾಳಿಯೊಂದು ಲುಟ್ಸ್ಕ್ ನಗರಕ್ಕೆ ಹಾನಿ ಮಾಡಿದೆ. ಗ್ಯಾರೇಜ್, ಸಹಕಾರಿ ಮತ್ತು ಖಾಸಗಿ ಉದ್ಯಮದ ಕಟ್ಟಡದಲ್ಲಿ ಬೆಂಕಿಗೆ ಕಾಣಿಸಿಕೊಂಡಿತ್ತು. ಡ್ನಿಪ್ರೊ, ಝೈಟೊಮಿರ್, ಕೀವ್, ಕ್ರೊಪಿವ್ನಿಟ್ಸ್ಕಿ, ಮೈಕೊಲೈವ್, ಸುಮಿ, ಹಾರ್ಕಿವ್, ಖ್ಮೆಲ್ನಿಟ್ಸ್ಕಿ, ಚೆರ್ಕಾಸಿ ಮತ್ತು ಚೆರ್ನಿಹಿವ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಹಾನಿ ವರದಿಯಾಗಿದೆ. ದಾಳಿಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, ಡಜನ್‌ಗೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಕೀವ್ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ.
ರಾಜಧಾನಿ ಕೀವ್‌ನಲ್ಲಿ ಇನ್ನೂ 8,000 ಚದರ ಮೀಟರ್ ವ್ಯಾಪ್ತಿಯಲ್ಲಿ ಬೆಂಕಿ ಆವರಿಸಿದ್ದು, ತುರ್ತು ಕಾರ್ಯಾಚರಣಾ ಸಿಬ್ಬಂದಿ ನಂದಿಸುವ ಕಾರ್ಯ ಮಾಡುತ್ತಿದೆ ಎಂದು ಎಂಎಫ್‌ಎ ತಿಳಿಸಿದೆ. ಇಂತಹ ದಾಳಿ ನಡೆಸಿರುವ ರಷ್ಯಾ ವಿರುದ್ಧ ಮತ್ತಷ್ಟು ನಿರ್ಬಂಧ ಮತ್ತು ಅವರಿಂದ ತೈಲವನ್ನು ಖರೀದಿಸುವವರ ಮೇಲೂ ನಿರ್ಬಂಧಗಳನ್ನು ಹೇರಬೇಕೆಂದು ಉಕ್ರೇನ್ ಕರೆ ನೀಡಿದೆ.
ಉಕ್ರೇನ್‌ನ ವಿದೇಶಾಂಗ ಸಚಿವ ಆಂಡ್ರಿ ಸಿಬಿಹಾ ಕೂಡ ಈ ದಾಳಿಯನ್ನು ಬೆಳೆಯುತ್ತಿರುವ ಭಯೋತ್ಪಾದನೆ ಎಂದು ಖಂಡಿಸಿದ್ದಾರೆ. ಉಕ್ರೇನ್‌ನ ವಾಯು ರಕ್ಷಣೆಯನ್ನು ತಕ್ಷಣವೇ ಬಲಪಡಿಸಲು ಮತ್ತು ರಷ್ಯಾದ ಮೇಲೆ ಒತ್ತಡವನ್ನು ಹೆಚ್ಚಿಸಲು ಕರೆ ನೀಡಿದ್ದಾರೆ.
‘ಶಾಂತಿ ಪ್ರಯತ್ನಗಳ ಬದಲಾಗಿ ರಷ್ಯಾ, ರಾತ್ರೋರಾತ್ರಿ ಉಕ್ರೇನ್ ಮೇಲೆ ದಾಖಲೆಯ ಸುಮಾರು 750 ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹಾರಿಸಿದೆ. ಈ ಬೆಳೆಯುತ್ತಿರುವ ಭಯೋತ್ಪಾದನೆಯು ಇಂಟರ್‌ಸೆಪ್ಟರ್ ಡ್ರೋನ್‌ಗಳಲ್ಲಿ ಹೂಡಿಕೆ ಮಾಡುವುದು, ರಷ್ಯಾದ ಮೇಲೆ ಒತ್ತಡವನ್ನು ಹೆಚ್ಚಿಸುವುದು ಮತ್ತು ಅದರ ತೈಲ ಆದಾಯವನ್ನು ಕಡಿತಗೊಳಿಸುವುದು ಸೇರಿದಂತೆ ನಮ್ಮ ವಾಯು ರಕ್ಷಣೆಯನ್ನು ಬಲಪಡಿಸುವ ತುರ್ತು ಅಗತ್ಯವನ್ನು ಒತ್ತಿಹೇಳುತ್ತದೆ’ಎಂದು ಸಿಬಿಹಾ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇದೇವೇಳೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶಾಂತಿ ಪ್ರಯತ್ನಗಳನ್ನು ತಿರಸ್ಕರಿಸಿದ್ದಕ್ಕಾಗಿ ಖಂಡಿಸಿರುವ ಅವರು, ಅಂತರರಾಷ್ಟ್ರೀಯ ಸಮುದಾಯಗಳಿಂದ ತಕ್ಷಣದ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಅಮೆರಿಕ ಸೆನೆಟ್ ಮಸೂದೆ ಮತ್ತು ರಷ್ಯಾ ವಿರುದ್ಧ ಯುರೋಪಿಯನ್ ಒಕ್ಕೂಟದ 18ನೇ ನಿರ್ಬಂಧಗಳ ಪ್ಯಾಕೇಜ್ ಅನ್ನು ತ್ವರಿತವಾಗಿ ಅಂಗೀಕರಿಸುವಂತೆ ಅವರು ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.