ADVERTISEMENT

‘ಸ್ಪುಟ್ನಿಕ್‌–V’ ಕೋವಿಡ್‌–19 ಲಸಿಕೆಯ ಉತ್ಪಾದನೆ ಆರಂಭಿಸಿದ ರಷ್ಯಾ

ಆಗಸ್ಟ್‌ ಅಂತ್ಯಕ್ಕೆ ಬಳಕೆಗೆ ಲಭ್ಯ

ರಾಯಿಟರ್ಸ್
Published 15 ಆಗಸ್ಟ್ 2020, 15:46 IST
Last Updated 15 ಆಗಸ್ಟ್ 2020, 15:46 IST
ರಷ್ಯಾ ಸಿದ್ಧಪಡಿಸಿರುವ ಕೋವಿಡ್‌–19 ಲಸಿಕೆ ಸ್ಪುಟ್ನಿಕ್‌–V (ಸಂಗ್ರಹ ಚಿತ್ರ) 
ರಷ್ಯಾ ಸಿದ್ಧಪಡಿಸಿರುವ ಕೋವಿಡ್‌–19 ಲಸಿಕೆ ಸ್ಪುಟ್ನಿಕ್‌–V (ಸಂಗ್ರಹ ಚಿತ್ರ)    

ಮಾಸ್ಕೊ: ರಷ್ಯಾವು‘ಸ್ಪುಟ್ನಿಕ್‌–V’ ಹೆಸರಿನ ಕೋವಿಡ್‌–19 ಲಸಿಕೆಯ ಉತ್ಪಾದನೆಯನ್ನು ಶನಿವಾರ ಆರಂಭಿಸಿದ್ದು, ಲಸಿಕೆಯ ಮೊದಲ ಬ್ಯಾಚ್ ಉತ್ಪಾದನೆಯಾಗಿದೆ ಎಂದು ಇಂಟರ್‌ಫ್ಯಾಕ್ಸ್‌ ಸುದ್ದಿ ಸಂಸ್ಥೆ ಅಲ್ಲಿನ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ವರದಿ ಮಾಡಿದೆ.

ಪಿಡುಗಿಗೆ ಲಸಿಕೆ ಸಿದ್ಧಪಡಿಸಲು ವಿಶ್ವದಲ್ಲಿ ಹಲವು ಕಂಪನಿಗಳು ಸ್ಪರ್ಧೆಗಿಳಿದಿವೆ. ಇದರ ನಡುವೆ ಪ್ರಸಿದ್ಧಿ, ಘನತೆಗಾಗಿ ರಷ್ಯಾ ಲಸಿಕೆಗೆ ತ್ವರಿತವಾಗಿ ಒಪ್ಪಿಗೆ ನೀಡಿದೆ. ಇದರಿಂದ ಸುರಕ್ಷತೆ ಪ್ರಶ್ನೆ ಎದ್ದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.ಇದನ್ನು ಜಗತ್ತಿನ ಮೊದಲ ಕೋವಿಡ್‌–19 ಲಸಿಕೆ ಎನ್ನುತ್ತಿರುವ ರಷ್ಯಾ, ಮಾಸಾಂತ್ಯದಲ್ಲಿ ಇದನ್ನು ಬಳಕೆಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.

ರಷ್ಯಾದ ಗೇಮಲಿಯ ರಿಸರ್ಚ್ ಇನ್‌ಸ್ಟಿಟ್ಯೂಟ್‌ ಈ ಲಸಿಕೆ ಅಭಿವೃದ್ಧಿಪಡಿಸಿದ್ದು, ಪ್ರತಿ ತಿಂಗಳು 50 ಲಕ್ಷ ಲಸಿಕೆಗಳನ್ನು ಉತ್ಪಾದಿಸುವ ಗುರಿ ಹೊಂದಿದೆ ಎಂದು ಇಂಟರ್‌ಫ್ಯಾಕ್ಸ್‌ ವರದಿ ಮಾಡಿದೆ.

ADVERTISEMENT

ಮೂರನೇ ಹಂತದ ಪರೀಕ್ಷೆ ಇಲ್ಲ:ಮೂರು ಹಂತದ ಕ್ಲಿನಿಕಲ್ ಟ್ರಯಲ್‌ನ ಫಲಿತಾಂಶಗಳು ಬಂದ ನಂತರವಷ್ಟೇ ಲಸಿಕೆಯನ್ನು ಬಿಡುಗಡೆ ಮಾಡಬೇಕು. ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಹ ರಷ್ಯಾಗೆ ಹೇಳಿತ್ತು. ಆದರೆ ಎರಡೇ ಹಂತ ಪೂರ್ಣಗೊಳಿಸಿ ರಷ್ಯಾವು ಲಸಿಕೆಗೆ ಒಪ್ಪಿಗೆ ನೀಡಿದೆ.

‘ನನ್ನ ಮಗಳೇ ಈ ಲಸಿಕೆಯನ್ನು ತೆಗೆದುಕೊಂಡಿದ್ದಾಳೆ.ಈ ಲಸಿಕೆ ಸುರಕ್ಷಿತವಾಗಿದೆ’ ಎನ್ನುವ ಭರವಸೆಯನ್ನೂ ಕಳೆದ ಮಂಗಳವಾರ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಜನರಿಗೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.