ADVERTISEMENT

ಕೀವ್‌, ಚೆರ್ನಿವ್‌ನಿಂದ ಸೇನೆ ವಾಪಸ್‌: ರಷ್ಯಾ

ಇಸ್ತಾಂಬುಲ್‌ನಲ್ಲಿ ನಡೆದ ಮಾತುಕತೆ ಮೂಡಿಸಿದ ಆಶಾದಾಯಕ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 19:07 IST
Last Updated 29 ಮಾರ್ಚ್ 2022, 19:07 IST
ರಷ್ಯಾದ ಸೇನಾ ಪಡೆಗಳು ಮಂಗಳವಾರ ನಡೆಸಿದ ದಾಳಿಯಲ್ಲಿ ಉಕ್ರೇನ್‌ನ ಮೈಕೊಲೈವ್‌ ನಗರದ ಪ್ರಾದೇಶಿಕ ಸರ್ಕಾರಿ ಪ್ರಧಾನ ಕಚೇರಿಯು ಧ್ವಂಸಗೊಂಡಿದೆ       –ಪಿಟಿಐ ಚಿತ್ರ
ರಷ್ಯಾದ ಸೇನಾ ಪಡೆಗಳು ಮಂಗಳವಾರ ನಡೆಸಿದ ದಾಳಿಯಲ್ಲಿ ಉಕ್ರೇನ್‌ನ ಮೈಕೊಲೈವ್‌ ನಗರದ ಪ್ರಾದೇಶಿಕ ಸರ್ಕಾರಿ ಪ್ರಧಾನ ಕಚೇರಿಯು ಧ್ವಂಸಗೊಂಡಿದೆ       –ಪಿಟಿಐ ಚಿತ್ರ   

ಮಾಸ್ಕೊ/ಕೀವ್‌, ಇಸ್ತಾಂಬುಲ್‌: ಯುದ್ಧ ಕೊನೆಗೊಳಿಸುವ ಉದ್ದೇಶದಿಂದ ಮಾತುಕತೆಗಳಲ್ಲಿ ಪರಸ್ಪರ ನಂಬಿಕೆ ಹೆಚ್ಚಿಸಲು ಉಕ್ರೇನ್‌ ರಾಜಧಾನಿ ಕೀವ್‌ ಮತ್ತು ಇನ್ನೊಂದು ಪ್ರಮುಖ ನಗರ ಚೆರ್ನಿವ್‌ ಬಳಿ ಸೇನಾ ಕಾರ್ಯಾಚರಣೆಗಳನ್ನು ನಿಯಮಿತವಾಗಿ ಕಡಿತಗೊಳಿಸಲು ಮಾಸ್ಕೊನಿರ್ಧರಿಸಿದೆ ಎಂದು ರಷ್ಯಾದ ರಕ್ಷಣಾ ಉಪ ಸಚಿವ ಅಲೆಕ್ಸಾಂಡರ್‌ ಫೊಮಿನ್‌ ಹೇಳಿದ್ದಾರೆ.

ಮಂಗಳವಾರ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ರಷ್ಯಾ ಮತ್ತು ಉಕ್ರೇನ್ ನಡುವಿನ ಮತ್ತೊಂದು ಸುತ್ತಿನ ಮಾತುಕತೆಯ ನಂತರ ಫೊಮಿನ್‌ ಈ ನಿರ್ಧಾರ ಪ್ರಕಟಿಸಿದ್ದಾರೆ.

ಒಂದು ತಿಂಗಳ ಹಿಂದೆ ಉಕ್ರೇನ್‌ ಮೇಲೆ ಆಕ್ರಮಣ ಆರಂಭಿಸಿದ ರಷ್ಯಾ ಇದೇ ಮೊದಲ ಬಾರಿಗೆ ತೋರಿದ ಪ್ರಮುಖ ಉದಾರತೆ ಇದು.

ADVERTISEMENT

ಈ ಹಿಂದೆಯೇ ಕೀವ್‌ ಮತ್ತು ಚೆರ್ನಿವ್ ಸುತ್ತಲೂ ರಷ್ಯಾ ಸೇನೆ ಹಿಂಪಡೆಯುವಿಕೆಯನ್ನು ಗಮನಿಸಿದ್ದಾಗಿ ಉಕ್ರೇನಿನ ಮಿಲಿಟರಿ ಜನರಲ್‌ ಸ್ಟಾಫ್‌ ಹೇಳಿದೆ.

ಪುಟಿನ್ ಗುಟುರು: ಯುದ್ಧ ಕೊನೆಗಾಣಿಸಿ ಶಾಂತಿ ಸ್ಥಾಪನೆಗೆ ಮುಂದಾಗು ವಂತೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಮುಂದಿಟ್ಟಿರುವ ಪ್ರಸ್ತಾವಕ್ಕೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ‘ಝೆಲೆನ್‌ಸ್ಕಿಯನ್ನು ಸದೆಬಡಿಯುವೆ’ ಎಂದು ಗುಟುರು ಹಾಕಿದ್ದಾರೆ.

ಉಕ್ರೇನ್‌ ಜತೆಗಿನ ಮಾತುಕತೆಯಲ್ಲಿ ರಷ್ಯಾದ ಅನಧಿಕೃತ ರಾಜತಾಂತ್ರಿಕರಾಗಿ ಕಾರ್ಯನಿರ್ವಹಿಸುತ್ತಿರುವ ರಷ್ಯಾದ ಸಿರಿವಂತ ಉದ್ಯಮಿ ರೋಮನ್ ಅಬ್ರಮೊವಿಚ್ ಅವರು ಝೆಲೆನ್‌ಸ್ಕಿ ನೀಡಿದ್ದ ಕೈಬರಹದ ಟಿಪ್ಪಣಿಯನ್ನು ಕೊಟ್ಟಾಗ ಪುಟಿನ್ ಅವರುಉಕ್ರೇನಿಗರನ್ನು ‘ಸದೆಬಡಿಯುವೆ’ ಎಂದು ಹೇಳಿ ರುವುದಾಗಿ ವರದಿಯೊಂದು ತಿಳಿಸಿದೆ.

ಝೆಲೆನ್‌ಸ್ಕಿ ಟಿಪ್ಪಣಿ ನೋಡಿ ಕೆಂಡಾಮಂಡಲರಾದ ಪುಟಿನ್‌ ‘ಅವನಿಗೆ (ಝೆಲೆನ್‌ಸ್ಕಿ) ಹೇಳಿ, ಅವನನ್ನು ಸದೆಬಡಿಯುವೆ’ ಎಂದು ಹೇಳಿರುವುದಾಗಿ ಬ್ರಿಟನ್‌ ದೈನಿಕ ‘ದಿ ಟೈಮ್ಸ್‌’ ವರದಿ ಮಾಡಿದೆ.ಯುದ್ಧ ಕೊನೆಗೊಳಿಸಲು ಉಕ್ರೇನ್‌ ಹಾಕಿ ರುವಷರತ್ತುಗಳು ಆ ಟಿಪ್ಪಣಿಯಲ್ಲಿ ದ್ದವು.

ಪಶ್ಚಿಮದ ರಾಷ್ಟ್ರಗಳ ನಿರ್ಬಂಧಕ್ಕೆ ಒಳಗಾಗಿರುವ ರಷ್ಯದ ಸಿರಿವಂತ ಉದ್ಯಮಿಗಳಲ್ಲಿ ರೋಮನ್ ಅಬ್ರಮೊವಿಚ್ ಒಬ್ಬರು.

ಕಳೆದ ಫೆಬ್ರುವರಿ 24ರಂದು ರಷ್ಯಾ ಆರಂಭಿಸಿದ ಆಕ್ರಮಣ ಅಂತ್ಯ ಗೊಳಿಸುವ ಸಂಬಂಧದ ಮಾತುಕತೆಗೆ ನೆರವಾಗುವಂತೆ ಅಬ್ರಮೊ ವಿಚ್ ಅವರ ನೆರವನ್ನು ಉಕ್ರೇನ್‌ ಕೇಳಿತ್ತು.

ಇದಕ್ಕೆ ಒಪ್ಪಿಕೊಂಡಿದ್ದ ಅಬ್ರಮೊ ವಿಚ್ ಟರ್ಕಿಯ ಇಸ್ತಾಂಬುಲ್‌ನಲ್ಲಿ ಮಾತುಕತೆ ಮುಗಿಸಿ, ವಿಮಾನದಲ್ಲಿ ಇಸ್ತಾಂಬುಲ್‌ನಿಂದ ಮಾಸ್ಕೊಗೆ ಮರಳಿದರು. ನಂತರ ಪುಟಿನ್ ಅವರನ್ನು ಭೇಟಿಯಾಗಿ, ಝೆಲೆನ್‌ಸ್ಕಿ
ಅವರ ಟಿಪ್ಪಣಿಯನ್ನು ಪುಟಿನ್‌ ಅವರಿಗೆ ಸಲ್ಲಿಸಿದರು ಎಂದು ‘ದಿ ಟೈಮ್ಸ್‌’ ಹೇಳಿದೆ.

ಕೀವ್‌ನಲ್ಲಿ ಈ ತಿಂಗಳ ಆರಂಭದಲ್ಲಿ ನಡೆದ ಶಾಂತಿ ಸಂಧಾನ ಸಭೆಯ ನಂತರ ಅಬ್ರಮೊವಿಚ್ ಮತ್ತು ಉಕ್ರೇನಿನ ಇಬ್ಬರು ಸಂಧಾನಕಾರರು ವಿಷಪ್ರಾಶನಕ್ಕೆ ತುತ್ತಾಗಿರುವ ಲಕ್ಷಣಗಳನ್ನು ಅನುಭವಿಸಿದ್ದಾರೆ ಎಂದು ‘ದಿ ವಾಲ್‌ ಸ್ಟ್ರೀಟ್‌ ಜರ್ನಲ್‌’ ಸೋಮವಾರ ವರದಿ ಮಾಡಿತ್ತು. ಈ ಮೂವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

‘ಝೆಲೆನ್‌ಸ್ಕಿ, ಪುಟಿನ್‌ ಮಾತುಕತೆ ಸಾಧ್ಯತೆ’

ಟರ್ಕಿಯ ಇಸ್ತಾಂಬುಲ್‌ನಲ್ಲಿ ಮಂಗಳವಾರ ನಡೆದ ರಷ್ಯಾ– ಉಕ್ರೇನ್‌ ನಡುವಿನ ಸಂಧಾನ ಮಾತುಕತೆಯ ನಂತರಪುಟಿನ್‌ ಮತ್ತು ಝೆಲೆನ್‌ಸ್ಕಿ ಅವರು ನೇರ ಭೇಟಿಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಉಕ್ರೇನ್ ಹೇಳಿದೆ.

‘ಇಸ್ತಾಂಬುಲ್‌ ಸಭೆಯ ಫಲಿತಾಂಶಗಳು ಇಬ್ಬರು ನಾಯಕರ ನಡುವಿನ ಭೇಟಿ ಮತ್ತು ಮಾತುಕತೆಗೆ ಸಾಕಾಗಲಿವೆ’ ಎಂದು ಉಕ್ರೇನ್ ಸಂಧಾನಕಾರ ಡೇವಿಡ್ ಅರಾಖಮಿಯಾ ಹೇಳಿದ್ದಾರೆ.

‘ರಷ್ಯಾದೊಂದಿಗಿನ ಸಂಘರ್ಷ ಪರಿಹರಿಸಲು,ಉಭಯ ರಾಷ್ಟ್ರಗಳ ಅಧ್ಯಕ್ಷರ ನಡುವಿನ ಭೇಟಿ ಸಾಧ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಮಾತುಕತೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಉಕ್ರೇನಿನ ಪ್ರತಿನಿಧಿಗಳೊಂದಿಗೆಶಾಂತಿ ಮಾತುಕತೆಯಲ್ಲಿ ಆದ ಅರ್ಥಪೂರ್ಣ ಪ್ರಗತಿಯನ್ನು ರಷ್ಯಾದ ಸಂಧಾನಕಾರರು ಸ್ವಾಗತಿಸಿದರು.

ಯುದ್ಧಪೀಡಿತ ಉಕ್ರೇನಿನಲ್ಲಿ ಉಂಟಾಗಿರುವ ಮಾನವೀಯ ಬಿಕ್ಕಟ್ಟು ಮತ್ತು ತಟಸ್ಥ ರಾಷ್ಟ್ರವಾಗಿ ಉಕ್ರೇನ್‌ ಉಳಿಯಬೇಕೆಂಬ ರಷ್ಯಾದ ಬೇಡಿಕೆ ಮತ್ತು ಇತರ ವಿಷಯಗಳನ್ನು ಕೇಂದ್ರೀಕರಿಸಿಕೊಂಡುಇಸ್ತಾನ್‌ಬುಲ್‌ ಸಭೆಯಲ್ಲಿ ಚರ್ಚಿಸಲಾಯಿತು. ಈ ನಡುವೆ ಇತರ ದೇಶಗಳು ತನ್ನ ಭದ್ರತೆಯನ್ನು ಖಾತರಿಪಡಿಸುವಂತಹಅಂತರರಾಷ್ಟ್ರೀಯ ಒಪ್ಪಂದಕ್ಕೆಉಕ್ರೇನ್ ಒತ್ತಾಯಿಸಿತು.

‘ಈ ಒಪ್ಪಂದ ನ್ಯಾಟೊದಆರ್ಟಿಕಲ್ 5 ಅನ್ನು ಹೋಲುವಂತಿರಬೇಕು. ಅದು ಮೈತ್ರಿ ಸದಸ್ಯ ರಾಷ್ಟ್ರಗಳು ಪರಸ್ಪರ ರಕ್ಷಿಸಿಕೊಳ್ಳಲು ಬದ್ಧವಾಗಿರುತ್ತದೆ’ ಎಂದು ಡೇವಿಡ್ ಅರಾಖಮಿಯಾ ಸುದ್ದಿಗಾರರಿಗೆ ತಿಳಿಸಿದರು.

ಇದೇ ವೇಳೆ, ಉಭಯ ರಾಷ್ಟ್ರಗಳ ಅಧ್ಯಕ್ಷರ ನಡುವಿನಮಾತುಕತೆಯ ಸಾಧ್ಯತೆಯನ್ನು ತಳ್ಳಿ ಹಾಕಿದ ರಷ್ಯಾ ‘ಇದು ಪ್ರತಿರೋಧಕ’ ಎಂದು ಹೇಳಿದೆ.

34ನೇ ದಿನದ ಬೆಳವಣಿಗೆಗಳು

lರಷ್ಯಾ– ಉಕ್ರೇನ್‌ ನ್ಯಾಯಸಮ್ಮತ ಕಾಳಜಿ ಹೊಂದಿವೆ. ಈ ದುರಂತ ಕೊನೆಗಾಣಿಸಲು ಎರಡೂ ಕಡೆಯಲ್ಲೂ ಒತ್ತಾಯವಿದೆ. ಇಡೀ ಜಗತ್ತು ನಿಮ್ಮಿಂದ ಒಳ್ಳೆಯ ಸುದ್ದಿಗಾಗಿ ಕಾಯುತ್ತಿದೆ ಎಂದು ಎರಡೂ ಕಡೆಯವರಿಗೆ ಹೇಳಿರುವೆ– ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ (ಉಭಯ ರಾಷ್ಟ್ರಗಳ ನಿಯೋಗಗಳನ್ನು ಸ್ವಾಗತಿಸಿ, ನಂತರ ನೀಡಿದ ಹೇಳಿಕೆ)

lಟರ್ಕಿಯಲ್ಲಿನ ಶಾಂತಿ ಮಾತುಕತೆಗೂ ಮುನ್ನಾ ಮೈಕೊಲೈವ್‌ ಸರ್ಕಾರಿ ಪ್ರಧಾನ ಕಚೇರಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ.
11 ಮಂದಿ ಸಾವು, 22 ಮಂದಿಗೆ ಗಾಯ– ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿಕೆ

lಉಕ್ರೇನಿನ ದಕ್ಷಿಣ ಭಾಗದ ಕೆರ್ಸಾನ್‌, ಒಡೆಸಾ, ಮೈಕೊಲೈವ್‌ ಮತ್ತು ಮರಿಯುಪೊಲ್‌ ನಗರಗಳ ಮೇಲೆ ರಷ್ಯಾ ದಾಳಿ ಮುಂದುವರಿಸಿದೆ. ಉಕ್ರೇನ್‌ಗೆ ಕಪ್ಪು ಸಮುದ್ರದ ಸಂಪರ್ಕ ಕಡಿತಗೊಳಿಸಿ, ರಷ್ಯಾದಿಂದ ಕ್ರಿಮಿಯಾಕ್ಕೆ ಭೂ ಕಾರಿಡಾರ್ ಸ್ಥಾಪಿಸಲು ಪ್ರಯತ್ನಿಸುತ್ತಿದೆ–
ಮೈಕೊಲೈವ್‌ ಗವರ್ನರ್‌ ವಿಟಾಲಿ ಕಿಮ್‌ ಆರೋಪ

lನಿಪ್ರೊಪೆಟ್ರೊವ್‌ಸ್ಕ್‌ ಪ್ರದೇಶದ ನೈಕೊಪೊಲ್ ನಗರ ಸಮೀಪ ರಷ್ಯಾದ ಕ್ಷಿಪಣಿ ದಾಳಿ ಮಂಗಳವಾರ ಕೂಡ ನಡೆಯಿತು. ಈ ನಗರವು ಝಪ್ರೊರಿಝಿಯಾದ ಅಣು ಸ್ಥಾವರಕ್ಕೆ ತುಂಬಾ ಸನಿಹದಲ್ಲಿದೆ.

lರಷ್ಯಾದ ಆಕ್ರಮಣದಿಂದ ಮರಿಯುಪೊಲ್‌ ಹೊರತುಪಡಿಸಿ, ಉಕ್ರೇನಿನಲ್ಲಿ ಈವರೆಗೆ 114 ಮಕ್ಕಳು ಮೃತಪಟ್ಟಿದ್ದು, 220 ಮಕ್ಕಳು ಗಾಯಗೊಂಡಿದ್ದಾರೆ– ಉಕ್ರೇನಿನ ಪ್ರಾಸಿಕ್ಯೂಟರ್‌ ಜನರಲ್‌ ಕಚೇರಿ ಮಾಹಿತಿ.

lಮರಿಯುಪೊಲ್‌ ನಗರವೊಂದರಲ್ಲೇ 210 ಮಕ್ಕಳು ಸಾವನ್ನಪ್ಪಿದ್ದಾರೆ –ನಗರದ ಮೇಯರ್‌ ಹೇಳಿಕೆ

lಉಕ್ರೇನ್‌ನ ದೂರಸಂಪರ್ಕ ಕಂಪನಿ ‘ಉಕ್ರ್‌ಟೆಲಿಕಾಂ’ ಮೇಲೆ ಸೈಬರ್ ದಾಳಿ ನಡೆದಿದೆ. ಶೇ 70ರಷ್ಟು ಬಳಕೆದಾರರಿಗೆ ತೊಂದರೆಯಾಗಿದೆ. ಸೇವೆ ಮರುಸ್ಥಾಪನೆ ನಡೆಯುತ್ತಿದೆ– ಉಕ್ರೇನ್‌ನ ಸಂವಹನ ಮತ್ತು ಮಾಹಿತಿ ರಕ್ಷಣೆ ವಿಶೇಷ ಸೇವೆಗಳ ಅಧ್ಯಕ್ಷ ಯೂರಿ ಶಿಖೋಲ್

l100ಕ್ಕೂ ಹೆಚ್ಚು ನೆಲ ಬಾಂಬ್‌ಗಳನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಲಾಗಿದೆ –ಉಕ್ರೇನ್‌ ಗೃಹ ಸಚಿವಾಲಯ

lಮಾನವೀಯತೆಯ ದೃಷ್ಟಿಯಿಂದ ಉಕ್ರೇನ್‌ ಮತ್ತು ರಷ್ಯಾ ನಡುವೆ ಕದನ ವಿರಾಮ ಘೋಷಿಸಬೇಕು– ವಿಶ್ವಸಂಸ್ಥೆ ಒತ್ತಾಯ

lಮಂಗಳವಾರ ಒಂದೇ ದಿನದಲ್ಲಿ ರಷ್ಯಾ ಪಡೆಗಳ 8 ಯುದ್ಧ ವಿಮಾನ, 4 ಮಾನವ ರಹಿತ ಡ್ರೋನ್‌, 3 ಹೆಲಿಕಾಪ್ಟರ್‌ ಮತ್ತು ಎರಡು ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್‌ ಸಶಸ್ತ್ರ ಪಡೆ ಹೇಳಿದೆ

lಮೆಲಿಟೊಪೊಲ್‌ ಸಿಟಿ ಕೌನ್ಸಿಲ್‌ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಇರಿನಾ ಶೆರ್ಬಾಕ್ ಅವರನ್ನು ರಷ್ಯಾ ಪಡೆಗಳು ಅಪಹರಿಸಿವೆ– ಮೆಲಿಟೊಪೊಲ್ ನಗರದ ಮೇಯರ್ ಇವಾನ್ ಫೆಡೊರೊವ್ ಹೇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.