ADVERTISEMENT

ಯುದ್ಧದ ಪರಿಣಾಮ ನಿರ್ವಹಣೆ: ಭಾರತ–ಅಮೆರಿಕ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 20:13 IST
Last Updated 11 ಏಪ್ರಿಲ್ 2022, 20:13 IST
ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೋಮವಾರ ವರ್ಚುವಲ್‌ ಆಗಿ ಚರ್ಚಿಸಿದರು. ಚರ್ಚೆಯ ಸಂದರ್ಭದಲ್ಲಿ ಶ್ವೇತಭವನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಅವರೂ ಇದ್ದರು –‍ಪಿಟಿಐ ಚಿತ್ರ
ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೋಮವಾರ ವರ್ಚುವಲ್‌ ಆಗಿ ಚರ್ಚಿಸಿದರು. ಚರ್ಚೆಯ ಸಂದರ್ಭದಲ್ಲಿ ಶ್ವೇತಭವನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಅವರೂ ಇದ್ದರು –‍ಪಿಟಿಐ ಚಿತ್ರ   

ನವದೆಹಲಿ: ಉಕ್ರೇನ್‌–ರಷ್ಯಾ ಬಿಕ್ಕಟ್ಟು ಹಿನ್ನೆಲೆಯಲ್ಲಿ ತಲೆದೋರಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಸೋಮವಾರ ಮಾತುಕತೆ ನಡೆಸಿದರು.

ಉಕ್ರೇನ್‌ ಮೇಲೆ ಅತಿಕ್ರಮಣ ನಡೆಸಿರುವ ರಷ್ಯಾದ ಜತೆಗೆ ವ್ಯಾಪಾರ ನಡೆಸದಂತೆ ಅಮೆರಿಕ ಎಚ್ಚರಿಕೆ ನೀಡಿತ್ತು. ಆದರೆ, ಭಾರತವು ರಷ್ಯಾದಿಂದ ಕಚ್ಚಾತೈಲ ಖರೀದಿ ಪ್ರಮಾಣವನ್ನು ಹೆಚ್ಚಿಸಿತ್ತು. ಇದರ ಮಧ್ಯೆಯೇ ಉಭಯ ನಾಯಕರ ನಡುವೆವರ್ಚುವಲ್‌ ಆಗಿ ಮಾತುಕತೆ ನಡೆದಿದೆ.

ಉಕ್ರೇನ್‌ –ರಷ್ಯಾಯುದ್ಧದದುಷ್ಪರಿಣಾಮಗಳನ್ನು ನಿರ್ವಹಿಸುವುದುಹೇಗೆ ಎಂಬ ಬಗ್ಗೆ ಉಭಯ ರಾಷ್ಟ್ರಗಳುಪರಿಶೀಲನೆನಡೆಸಲಿವೆ ಎಂದು ಬೈಡನ್ ಅವರು ಮಾತುಕತೆ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

‘ಬುಕಾದಲ್ಲಿ ರಷ್ಯಾ ನಡೆಸಿರುವ ಹತ್ಯಾಕಾಂಡವನ್ನು ನಾವು ಖಂಡಿಸಿದ್ದೇವೆ ಮತ್ತು ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದೇವೆ’ ಎಂದು ಪ್ರಧಾನಿ ಮೋದಿ ತಿಳಿಸಿದರು.

ಎರಡೂ ರಾಷ್ಟ್ರಗಳು ಚರ್ಚೆ ನಡೆಸಲು ಸಲಹೆ ನೀಡಿದ್ದೇವೆ. ಉಕ್ರೇನ್‌ಗೆ ಭಾರತವು ಔಷಧ, ವೈದ್ಯಕೀಯ ನೆರವು ನೀಡಿದೆ’ ಎಂದು ಹೇಳಿದರು.

ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆ ನಡೆಸಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ನಿರ್ಧಾರ ಕುರಿತಂತೆ ಮೋದಿ ಆಡಳಿತ ಕಠಿಣ ನಿಲುವು ತೆಗೆದುಕೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಅಮೆರಿಕ ಗಮನಿಸಲಿದೆ ಎಂಬ ಇಂಗಿತವನ್ನು ಬೈಡನ್‌ ಇದೇ ಸಂದರ್ಭದಲ್ಲಿ ನೀಡಿದರು.

ಮೋದಿ ಮತ್ತು ಬೈಡನ್‌ ಭೇಟಿ ಹಿಂದೆಯೇ ಉಭಯ ದೇಶಗಳ ವಿದೇಶಾಂಗ ವ್ಯವಹಾರ ಮತ್ತು ರಕ್ಷಣಾ ಸಚಿವರ ಮಟ್ಟದಲ್ಲಿ ಚರ್ಚೆಯು ಮುಂದುವರಿಯಲಿದೆ. ಮಾತುಕತೆ ನಡೆಸಲು ಸಚಿವರಾದ ಎಸ್‌.ಜೈಶಂಕರ್, ರಾಜನಾಥ ಸಿಂಗ್‌ ಅವರು ವಾಷಿಂಗ್ಟನ್‌ಗೆ ತೆರಳಿದ್ದಾರೆ.

ಮೋದಿ ಮತ್ತು ಬೈಡನ್‌ ನಡುವೆ ವರ್ಚುವಲ್‌ ಸಭೆ ನಡೆದ ಸಂದರ್ಭದಲ್ಲಿ ಈ ಇಬ್ಬರು ಸಚಿವರು ಮತ್ತು ಬೈಡನ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸುಲಿವಾನ್‌ ಅವರೂ ಶ್ವೇತಭವನದಲ್ಲಿ ಉಪಸ್ಥಿತರಿದ್ದರು.

ಮೋದಿ ಕಳವಳ: ಬೈಡನ್ ಜೊತೆಗೆ ನಡೆದ ಮಾತುಕತೆ ವೇಳೆ ಮೋದಿ ಅವರು ಪ್ರಮುಖವಾಗಿ, ರಷ್ಯಾವು ಉಕ್ರೇನ್‌ನ ಬುಕಾದಲ್ಲಿ ನಡೆಸಿದ ನರಮೇಧ ಘಟನೆ ಕುರಿತು ಕಳವಳ ವ್ಯಕ್ತಪಡಿಸಿದರು.

ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಪುಟಿನ್‌ ಮತ್ತು ಝೆಲೆನ್‌ಸ್ಕಿ ಪರಸ್ಪರ ಚರ್ಚೆ ನಡೆಸಬೇಕು, ಈ ಮೂಲಕ ಬಿಕ್ಕಟ್ಟು ಶಮನಗೊಳಿಸಲು ಮುಂದಾಗಬೇಕು ಎಂದರು.

ಉಕ್ರೇನ್‌ ಯುದ್ಧದ ಅವಧಿಯಲ್ಲಿ ಅಲ್ಲಿನ ಜನರಿಗೆ ಭಾರತ ಒದಗಿಸಿದ ಮಾನವೀಯ ಬೆಂಬಲವನ್ನು ಸ್ವಾಗತಿಸುತ್ತೇನೆ ಎಂದುಬೈಡನ್ ಇದೇ ವೇಳೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.