ADVERTISEMENT

ಸೇನೆ ಸೇರದೆ ದೇಶ ತೊರೆಯುತ್ತಿರುವ ಪುರುಷರು; ಕಾರ್ಯಾಚರಣೆಗಿಳಿದ ಉಕ್ರೇನ್ ಪೊಲೀಸ್

ಏಜೆನ್ಸೀಸ್
Published 10 ಜನವರಿ 2025, 10:03 IST
Last Updated 10 ಜನವರಿ 2025, 10:03 IST
<div class="paragraphs"><p>ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ</p></div>

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ

   

ರಾಯಿಟರ್ಸ್ ಚಿತ್ರ

ಕೀವ್‌: ಮಿಲಿಟರಿ ಸೇವೆಯನ್ನು ತಪ್ಪಿಸಿಕೊಳ್ಳಲು ವಯಸ್ಕ ಪುರುಷರು ದೇಶದಿಂದ ಪರಾರಿಯಾಗಲು ಬಳಸುತ್ತಿರುವ ರಸ್ತೆಗಳನ್ನು ಬಂದ್ ಮಾಡಲು ರಾಷ್ಟ್ರದಾದ್ಯಂತ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಉಕ್ರೇನ್‌ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ADVERTISEMENT

ರಷ್ಯಾ ಸೇನೆ 2022ರ ಫೆಬ್ರುವರಿಯಿಂದ ಉಕ್ರೇನ್‌ ಮೇಲೆ ಆಕ್ರಮಣ ನಡೆಸುತ್ತಿದೆ. ಪೂರ್ವ ಭಾಗದಿಂದ ಮುನ್ನುಗ್ಗಿ ಬರುತ್ತಿರುವ ಆ ದೇಶದ ದೊಡ್ಡ ಸೈನ್ಯವನ್ನು ಹತ್ತಿಕ್ಕಲು ಹೆಣಗಾಡುತ್ತಿರುವ ಉಕ್ರೇನ್‌, ವಯಸ್ಕ ಪುರುಷರನ್ನು ಸೇನೆಗೆ ಸೇರಿಸಿಕೊಳ್ಳುವ ಮೂಲಕ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಹಲವು ತಿಂಗಳುಗಳಿಂದ ಬೃಹತ್ ಅಭಿಯಾನ ನಡೆಸುತ್ತಿದೆ.

ಈ ಅಭಿಯಾನವು ವಯಸ್ಕ ಪುರುಷರಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದಾಗಿ ಸಾವಿರಾರು ಜನರು ಪರ್ವತಗಳು ಅಥವಾ ನದಿ ಮಾರ್ಗಗಳ ಮೂಲಕ ಅಕ್ರಮವಾಗಿ ಯುರೋಪ್‌ನತ್ತ ಪಲಾಯನ ಮಾಡುತ್ತಿದ್ದಾರೆ.

'ಉಕ್ರೇನ್‌ ಸೆಕ್ಯುರಿಟಿ ಸರ್ವೀಸ್‌ ಹಾಗೂ ಪೊಲೀಸರು, ಏಕಕಾಲದಲ್ಲಿ 600ಕ್ಕೂ ಅಧಿಕ ಕಡೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಿಲಿಟರಿಯಲ್ಲಿ ಸೇವೆ ಸಲ್ಲಿಸಲು ಶಕ್ತರಾಗಿರುವ ಪುರುಷರು ದೇಶ ತೊರೆಯುವ ಮಾರ್ಗಗಳನ್ನು ತಡೆಯುವ ನಿಟ್ಟಿನಲ್ಲಿ ಕೈಗೊಂಡ ಮೊದಲ ಹಂತದ ವಿಶೇಷ ಕಾರ್ಯಾಚರಣೆ ಇದಾಗಿದೆ' ಎಂದು ಪೊಲೀಸ್‌ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.

'ಜನರು ಉಕ್ರೇನ್‌ ಗಡಿಯನ್ನು ಅಕ್ರಮವಾಗಿ ದಾಟಲು ನೆರವಾಗುತ್ತಿರುವ ಸಂಘಟನೆಗಳನ್ನು ಪ್ರಾಥಮಿಕವಾಗಿ ಗುರಿಯಾಗಿಸಿದ್ದೇವೆ. ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಮತ್ತಷ್ಟು ಮಾಹಿತಿ ಹಂಚಿಕೊಳ್ಳುತ್ತೇವೆ' ಎಂದೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.