ಪ್ಯಾರಿಸ್/ ಕೀವ್/ಝಪೊರಿಝಿಯಾ:ಉಕ್ರೇನ್ ಸೇನೆಯು ಹಾರ್ಕಿವ್ ಬಳಿಯ ನಾಲ್ಕು ಹಳ್ಳಿಗಳಿಂದ ರಷ್ಯಾದ ಪಡೆಗಳನ್ನು ಹಿಮ್ಮೆಟ್ಟಿಸಿದ್ದು, ದೇಶದ ಪೂರ್ವ ಭಾಗದಲ್ಲಿ ಸ್ವಲ್ಪಮಟ್ಟಿಗೆ ಮುನ್ನಡೆ ಸಾಧಿಸಲಾಗಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಬುಧವಾರ ತಿಳಿಸಿದರು.
ಮಂಗಳವಾರ ನಿಧನರಾದ ಸ್ವತಂತ್ರ ಉಕ್ರೇನಿನ ಮೊದಲ ಅಧ್ಯಕ್ಷ ಲಿಯೊನಿಡ್ ಕ್ರಾವ್ಚುಕ್‌ಅವರಿಗೆ ಅಂತಿಮ ನಮನ ಸಲ್ಲಿಸುವ ಭಾಷಣದಲ್ಲಿ ಝೆಲೆನ್‌ಸ್ಕಿ, ಬಿಕ್ಕಟ್ಟಿನ ಸಂದರ್ಭದಲ್ಲೂ ಅವರು ಧೃತಿಗಡೆದೆ ಸಾಹಸ ಮೆರೆದರು. ಇಡೀ ದೇಶ ತಮ್ಮ ಮಾತನ್ನು ಹೇಗೆ ಕೇಳುತ್ತದೆ ಎನ್ನುವ ನಾಡಿಮಿಡಿತವು ಅವರಿಗೆ ತಿಳಿದಿತ್ತು ಎಂದು ಬಣ್ಣಿಸಿದರು.
‘ಹಾರ್ಕಿವ್ ಪ್ರದೇಶದಿಂದ ರಷ್ಯಾ ಪಡೆಗಳನ್ನು ಹೊರದಬ್ಬುವಲ್ಲಿ ನಮ್ಮ ಸೇನೆ ಕ್ರಮೇಣ ಯಶಸ್ಸು ಸಾಧಿಸುತ್ತಿದೆ’ ಎಂದು ಝೆಲೆನ್‌ಸ್ಕಿ ಹೇಳಿದರು.
ಫ್ರಾನ್ಸ್ ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೊಂದಿಗೆ ವರ್ಚುವಲ್ ಸಂವಾದ ನಡೆಸಿದ ಝೆಲೆನ್‌ಸ್ಕಿ,‘ಉಕ್ರೇನ್, ರಷ್ಯಾದ ಆಕ್ರಮಣಕ್ಕೂ ಮೊದಲೇ ನ್ಯಾಟೊ ಭಾಗವಾಗಿದ್ದರೆ ಯಾವುದೇ ಯುದ್ಧ ನಡೆಯುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.
ಉಕ್ರೇನ್ ವಿದೇಶಾಂಗ ಸಚಿವ ಡೆಮಿಟ್ರೊ ಕುಲೆಬಾ, ‘ನಮ್ಮ ಸೇನೆ ಮುಂಚೂಣಿಯಲ್ಲಿ ಈಗ ಬಲಿಷ್ಠವಾಗಿದೆ. ಮರಿಯುಪೊಲ್‌ನ ಅಜೋವ್‌ಸ್ಟಾಲ್ ಉಕ್ಕಿನ ಸ್ಥಾವರದ ಮೇಲೆ ದಿನದ 24 ತಾಸುಗಳಲ್ಲಿ 34 ಬಾರಿ ರಷ್ಯಾ ಬಾಂಬ್ ದಾಳಿ ನಡೆಸಿದರೂ, ನಮ್ಮ ಯೋಧರು ಸ್ಥಾವರದ ನಿಯಂತ್ರಣ ಬಿಟ್ಟುಕೊಟ್ಟಿಲ್ಲ. ಡಾನ್‌ಬಾಸ್‌ನಲ್ಲೂ ಹೋರಾಡುತ್ತೇವೆ. ಡಾನ್‌ಬಾಸ್ ಗೆಲ್ಲುವುದು ನಮ್ಮ ಸಾಮರ್ಥ್ಯ ಸಾಬೀತಿಗೆ ನಿರ್ಣಾಯಕವಾಗಿದೆ. ಈ ಗೆಲುವು ಖಂಡಿತಾ ನಮ್ಮವರನ್ನು ಮತ್ತು ನಮ್ಮ ಗಡಿಗಳನ್ನು ಆಕ್ರಮಣದಿಂದ ವಿಮೋಚನೆಗೊಳಿಸಲಿದೆ’ ಎಂದು ಹೇಳಿದರು.
‘ನಮ್ಮ ಭವಿಷ್ಯ ಕ್ರೆಮ್ಲಿನ್ ನಿರ್ಧರಿಸಬೇಕು’
ಆಕ್ರಮಿತ ಕೆರ್ಸಾನ್ ಪ್ರದೇಶ ರಷ್ಯಾಕ್ಕೆ ಸೇರುವ ಸಾಧ್ಯತೆಯ ಬಗ್ಗೆ ಕೇಳಿದಾಗ ಸ್ಥಳೀಯ ನಿವಾಸಿಗಳು, ‘ತಮ್ಮ ಭವಿಷ್ಯವನ್ನು ಕ್ರೆಮ್ಲಿನ್ (ಪುಟಿನ್ ಆಡಳಿತ ಕಚೇರಿ) ನಿರ್ಧರಿಸಬೇಕು’ ಎಂದು ಹೇಳುತ್ತಾರೆ ಎಂದು ‘ರಾಯಿಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಷ್ಯಾದ ಅನಿಲ ಸಾಗಣೆ ಸ್ಥಗಿತ
ದೇಶದ ಪೂರ್ವದ ಪ್ರಮುಖ ಕೇಂದ್ರದ ಮೂಲಕ ಯುರೋಪ್ ರಾಷ್ಟ್ರಗಳಿಗೆ ಸಾಗಣೆಯಾಗುತ್ತಿದ್ದ ರಷ್ಯಾದ ಗ್ಯಾಜ್‌ಪ್ರೋಮ್ ಕಂಪನಿಯ ನೈಸರ್ಗಿಕ ಅನಿಲವನ್ನು ಉಕ್ರೇನ್‌ನ ನೈಸರ್ಗಿಕ ಅನಿಲ ಪೈಪ್‌ಲೈನ್ ಆಪರೇಟರ್ ಬುಧವಾರ ಸ್ಥಗಿತಗೊಳಿಸಿದೆ.
ಫೆಬ್ರುವರಿಯಲ್ಲಿ ಪ್ರಾರಂಭವಾದ ರಷ್ಯಾದ ಸೇನಾ ಕಾರ್ಯಾಚರಣೆಯು, ಉಕ್ರೇನ್‌ನಲ್ಲಿ ಮೊದಲ ಬಾರಿಗೆ ಗ್ಯಾಜ್‌ಪ್ರೋಮ್ ನೈಸರ್ಗಿಕ ಅನಿಲ ಸರಬರಾಜು ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಅಮೆರಿಕ ನೆರವು: ರಷ್ಯಾದ ಆಕ್ರಮಣ ತಡೆಯಲು ಮತ್ತು ಉಕ್ರೇನ್ ಜತೆಗೆ ದ್ವಿಪಕ್ಷೀಯ ಬಾಂಧವ್ಯ ಕಾಯ್ದುಕೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೊಸದಾಗಿ ಪ್ರಕಟಿಸಿದ್ದ ₹3.8 ಲಕ್ಷ ಕೋಟಿ ಪರಿಹಾರ ನೆರವಿನ ಪ್ಯಾಕೆಜ್‌ಗೆ ಅಮೆರಿಕದ ಸಂಸತ್ ಬುಧವಾರ ಅನುಮೋದನೆ ನೀಡಿತು. ಈ ಮೊತ್ತವನ್ನು ಉಕ್ರೇನ್‌ನಲ್ಲಿ ರಕ್ಷಣಾ ವ್ಯವಸ್ಥೆ ಮತ್ತು ಮಾನವೀಯ ನೆರವಿಗೆ ವಿನಿಯೋಗಿಸಲಾಗುತ್ತದೆ.
ಜಿಮಿನಿ ದ್ವೀಪದಲ್ಲಿ ರಷ್ಯಾ ಸೇನೆಗೆ ಬಲ
ಕಪ್ಪು ಸಮುದ್ರದ ಮೇಲೆ ಪ್ರಾಬಲ್ಯ ಸಾಧಿಸಲು ರಷ್ಯಾ ಜಿಮಿನಿ ದ್ವೀಪದಲ್ಲಿ ಯುದ್ಧತಂತ್ರದ ವಾಯು ರಕ್ಷಣಾ ವ್ಯವಸ್ಥೆ, ಕರಾವಳಿ ರಕ್ಷಣೆಗೆ ಕ್ರೂಸ್ ಕ್ಷಿಪಣಿಗಳೊಂದಿಗೆ ರಕ್ಷಣಾ ಪಡೆಗಳ ಸಾಮರ್ಥ್ಯ ಬಲಪಡಿಸಿಕೊಳ್ಳುತ್ತಿದೆ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ಹೇಳಿದೆ.
ಡೊನೆಟ್‌ಸ್ಕ್ ಪ್ರಾಂತ್ಯದ ಸ್ಲೊವಿಯನ್‌ಸ್ಕ್ ನಗರದ ಎರಡು ಜಿಲ್ಲೆಗಳು ಹಾಗೂ ಝಪೊರಿಝಿಯಾ ಪ್ರಾಂತ್ಯದ ಮೇಲೆ ರಷ್ಯಾ ಪಡೆಗಳು ಬುಧವಾರ ಕ್ರಿಪಣಿ ಮತ್ತು ಶೆಲ್ ದಾಳಿ ತೀವ್ರಗೊಳಿಸಿದವು. ಝಪೊರಿಝಿಯಾದಲ್ಲಿ ರಷ್ಯಾದ ಕ್ಷಿಪಣಿಗಳನ್ನು ಉಕ್ರೇನ್ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದರೂ, ಕೆಲವು ಮೂಲಸೌಕರ್ಯಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಆಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್‌ನಲ್ಲಿ ಶೇ 30ರಷ್ಟು ಉದ್ಯೋಗ ನಷ್ಟ
ಜಿನೀವಾ:ರಷ್ಯಾ ಆಕ್ರಮಣದ ನಂತರ ಉಕ್ರೇನ್‌ನಲ್ಲಿ ಶೇ 30ರಷ್ಟು ಉದ್ಯೋಗ ನಷ್ಟವಾಗಿದೆ ಎಂದು ವಿಶ್ವಸಂಸ್ಥೆ ಬುಧವಾರ ಹೇಳಿದೆ.
ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು (ಐಎಲ್‌ಒ), ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದ ಪರಿಣಾಮಗಳ ಕುರಿತಾದ ತನ್ನ ಮೊದಲ ವರದಿಯಲ್ಲಿ ಈ ಮಾಹಿತಿ ಉಲ್ಲೇಖಿಸಿದೆ.
ಉಕ್ರೇನ್– ರಷ್ಯಾ ಯುದ್ಧ ಮುಂದುವರಿದರೆ ಪರಿಸ್ಥಿತಿಯು ಇನ್ನಷ್ಟು ಹೀನಾಯವಾಗಲಿದೆ. ಉದ್ಯೋಗ ನಷ್ಟ 70 ಲಕ್ಷಕ್ಕೆ ಅಥವಾ ಶೇ 44.5ಕ್ಕೆ ಏರಿಕೆಯಾಗಲಿದೆಎಂದು ಅಂದಾಜಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.