ADVERTISEMENT

ರಷ್ಯಾದಿಂದ ಪರಮಾಣು ಸಾಮರ್ಥ್ಯದ ಕ್ಷಿಪಣಿಗಳನ್ನು ಒಳಗೊಂಡ ಮಿಲಿಟರಿ ತಾಲೀಮು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2022, 14:18 IST
Last Updated 19 ಫೆಬ್ರುವರಿ 2022, 14:18 IST
ವ್ಲಾಡಿಮಿರ್ ಪುಟಿನ್: ರಷ್ಯಾ ಅಧ್ಯಕ್ಷ
ವ್ಲಾಡಿಮಿರ್ ಪುಟಿನ್: ರಷ್ಯಾ ಅಧ್ಯಕ್ಷ   

ಮಾಸ್ಕೊ: ಶನಿವಾರ ರಷ್ಯಾ ಪರಮಾಣು-ಸಾಮರ್ಥ್ಯದ ಕ್ಷಿಪಣಿಗಳನ್ನು ಒಳಗೊಂಡ ಮತ್ತೊಂದು ಮಿಲಿಟರಿ ತಾಲೀಮನ್ನು ನಡೆಸಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇದರ ಮೇಲ್ವಿಚಾರಣೆ ಮಾಡಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕೆಲವೇ ದಿನಗಳಲ್ಲಿ ಉಕ್ರೇನ್ ಅನ್ನು ಆಕ್ರಮಿಸಲು ರಷ್ಯಾ ಯೋಜಿಸುತ್ತಿದೆ ಎಂದು ಅಮೆರಿಕ ಎಚ್ಚರಿಸಿದ ಗಂಟೆಗಳ ನಂತರ ಈ ಸಾಹಸಕ್ಕೆ ರಷ್ಯಾ ಕೈಹಾಕಿದೆ.

ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಂದ ಬೆಂಬಲ ಪಡೆದುಕೊಳ್ಳುವ ದೃಷ್ಟಿಯಿಂದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜರ್ಮನಿಗೆ ತೆರಳಿದ್ದಾರೆ. ದೇಶದ ಪೂರ್ವ ಭಾಗದಲ್ಲಿ ಸೇನಾ ಘರ್ಷಣೆ ಹೆಚ್ಚಿದ್ದು, ಉಕ್ರೇನಿಯನ್ ಸೈನಿಕನನ್ನು ಕೊಲೆ ಮಾಡಲಾಗಿದೆ. ಇದರ ಬೆನ್ನಲ್ಲೇ ರಷ್ಯಾ ಆಕ್ರಮಣಕಾರಿ ವರ್ತನೆ ತೋರಿದೆ.

ಅಮೆರಿಕ ಎಚ್ಚರಿಕೆ ನಡುವೆಯೂ, ಶೆಲ್ ದಾಳಿ ಹೆಚ್ಚಿದ್ದು, ಉಕ್ರೇನ್‌ನಲ್ಲಿನ ರಷ್ಯಾ ಬೆಂಬಲಿತ ಬಂಡಾಯ ಪ್ರದೇಶಗಳಿಂದ ನಾಗರಿಕರನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಯುರೋಪ್‌ನಲ್ಲಿನ ಪ್ರಮುಖ ಸಂಘರ್ಷದ ಭಯವನ್ನು ಹೆಚ್ಚಿಸಿದೆ.

ADVERTISEMENT

ಉಕ್ರೇನ್ ಮೇಲೆ ಯುದ್ಧ ಮಾಡುವುದಿಲ್ಲ ಎಂದು ರಷ್ಯಾ ಹೇಳುತ್ತಿದ್ದರೂ ಸಹ ಅದು ಯುದ್ಧ ಸನ್ನದ್ಧತೆಯಲ್ಲಿ ತೊಡಗಿರುವುದನ್ನು ಅಮೆರಿಕ ಬಯಲು ಮಾಡಿತ್ತು. ಉಕ್ರೇನ್ ಗಡಿಯಲ್ಲಿ ರಷ್ಯಾವು ಸರಿ ಸುಮಾರು 1.5 ಲಕ್ಷ ಯೋಧರನ್ನು ನಿಯೋಜಿಸಿದೆ. ಉಕ್ರೆನಿನಲ್ಲಿರುವ ರಷ್ಯಾ ಬೆಂಬಲಿತ ಬಂಡಾಯಗಾರರನ್ನು ಸೇರಿಸಿ ಈ ಸಂಖ್ಯೆ 1.9 ಲಕ್ಷ ದಾಟುತ್ತದೆ ಎಂದು ಅಮೆರಿಕ ಹೇಳಿತ್ತು.

ಪಾಶ್ಚಿಮಾತ್ಯ ದೇಶಗಳ ಬೃಹತ್ ನಿರ್ಬಂಧಗಳ ಎಚ್ಚರಿಕೆಗಳನ್ನು ಲೆಕ್ಕಿಸದೆಯೇ ಪುಟಿನ್ ಆಕ್ರಮಣಕ್ಕೆ ಕರೆ ನೀಡಿದ್ದಾರೆ ಎಂದು ನನಗೆ ಖಚಿತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶುಕ್ರವಾರ ಹೇಳಿದ್ದರು.

‘ಉಕ್ರೇನ್ ಮೇಲೆ ದಾಳಿಗೆ ಪುಟಿನ್ ಆದೇಶಿಸಿರುವುದು ನನಗೆ ಸ್ಪಷ್ಟವಾಗಿದೆ’ ಎಂದು ಶ್ವೇತಭವನದಿಂದ ದೂರದರ್ಶನದಲ್ಲಿ ಪ್ರಸಾರವಾದ ಹೇಳಿಕೆಯಲ್ಲಿ ಬೈಡನ್ ತಿಳಿಸಿದ್ದಾರೆ.

ಮುಂದಿನ ವಾರ ಅಥವಾ ಕೆಲ ದಿನಗಳಲ್ಲಿ ರಷ್ಯಾ, ಉಕ್ರೇನ್ ಮೇಲೆ ದಾಳಿ ನಡೆಯಬಹುದು. 28 ಲಕ್ಷ ಜನಸಂಖ್ಯೆ ಇರುವ ರಾಜಧಾನಿ ಕ್ವಿವ್ ಸೇರಿ ಉಕ್ರೇನ್ ದೇಶದಾದ್ಯಂತ ದಾಳಿ ನಡೆಸಬಹುದು ಎಂದಿದ್ದಾರೆ.

ಇತ್ತೀಚೆಗೆ, ಉಕ್ರೇನ್ ಗಡಿ ಬಳಿ ನಿಯೋಜಿಸಿದ್ದ ಸೇನೆ ಹಿಂಪಡೆದಿದ್ದಾಗಿ ಹೇಳಿದ್ದ ರಷ್ಯಾ, ನಮ್ಮ ಸೇನೆಯನ್ನು ನಿಯಮಿತ ಯುದ್ಧ ತಾಲೀಮು ನಡೆಸಲು ನಿಯೋಜಿಸಲಾಗಿತ್ತು. ಆದರೆ, ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್ ಮೇಲೆ ದಾಳಿಗೆ ಮುಂದಾಗಿದ್ದೇವೆ ಎಂದು ವದಂತಿ ಹಬ್ಬಿಸಿವೆ ಎಂದು ರಷ್ಯಾ ಹೇಳಿತ್ತು.

ಆದರೆ, ರಷ್ಯಾ ಪರಮಾಣು ಕ್ಷಿಪಣಿಗಳನ್ನು ಒಳಗೊಂಡ ಮಿಲಿಟರಿ ತಾಲೀಮು ನಡೆಸಿರುವುದು ಆತಂಕಕ್ಕೆ ಎಡೆಮಾಡಿದೆ.

ಶನಿವಾರ ಸೇನಾ ಅಭ್ಯಾಸಕ್ಕೆ ನಾವು ನಿರ್ಧರಿಸಿದ್ದು, ಖಂಡಾಂತರ ಕ್ಷಿಪಣಿ ಮತ್ತು ನೌಕಾ ಕ್ಷಿಪಣಿಗಳ ಪರೀಕ್ಷೆ ನಡೆಸಲಾಗುವುದು ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.