ADVERTISEMENT

ರಷ್ಯಾ ಉಕ್ರೇನ್‌ ಕದನ| ಬುಚಾ ಪಟ್ಟಣದಲ್ಲಿ ಸಾಮೂಹಿಕ ಸಮಾಧಿ ಪತ್ತೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 16:07 IST
Last Updated 14 ಜೂನ್ 2022, 16:07 IST
   

ಬುಚಾ: ಕೈವ್‌ನ ಹೊರವಲಯದಲ್ಲಿರುವ ಬುಚಾ ಪಟ್ಟಣದ ಸಮೀಪದಲ್ಲಿರುವ ಮತ್ತೊಂದು ಸಾಮೂಹಿಕ ಸಮಾಧಿಯಿಂದ ಕಾರ್ಮಿಕರು ಮೃತದೇಹಗಳನ್ನು ಹೊರತೆಗೆದಿದ್ದಾರೆ.

‘ದೇಹಗಳು ಬಟ್ಟೆ ಮತ್ತು ಹೊಲಸಿನಿಂದ ಮುಚ್ಚಲ್ಪಟ್ಟಿದ್ದವು. ಟೇಪ್‌ನಿಂದ ಬೆನ್ನ ಹಿಂದೆ ಕಟ್ಟಿದ ಕೈಗಳು ಜನರನ್ನು ಒತ್ತೆಯಾಳುಗಳನ್ನಾಗಿ ಹಿಡಿದಿಟ್ಟುಕೊಂಡು, ಮಾಹಿತಿ ಪಡೆಯಲು ಯತ್ನಿಸಲಾಗಿದೆ. ಮೊಣಕಾಲುಗಳಿಗೆ ಬಿದ್ದಿರುವ ಹೊಡೆತಗಳು ಜನರಿಗೆ ಚಿತ್ರ ಹಿಂಸೆ ನೀಡಿರುವುದನ್ನು ತೋರಿಸುತ್ತದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದಾಗಿನಿಂದ 12 ಸಾವಿರಕ್ಕೂ ಹೆಚ್ಚು ಜನರ ಹತ್ಯೆಯಾಗಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಿಮಿನಲ್ ತನಿಖೆ ನಡೆಸುತ್ತಿದ್ದಾರೆ ಎಂದು ಉಕ್ರೇನ್‌ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮಾರ್ಚ್ ಅಂತ್ಯದಲ್ಲಿ ಈ ಪ್ರದೇಶದಿಂದ ರಷ್ಯಾದ ಸೈನ್ಯ ಹಿಂತೆಗೆದುಕೊಂಡಾಗಿನಿಂದ, ಅಧಿಕಾರಿಗಳು 1,316 ಜನರ ಶವಗಳನ್ನು ಪತ್ತೆ ಹಚ್ಚಿದ್ದಾರೆ.

ಪೂರ್ವದಲ್ಲಿ ರಷ್ಯಾ ಪ್ರಭಾವಿ:ಪೂರ್ವ ಉಕ್ರೇನ್‌ನಲ್ಲಿನ ಹೋರಾಟದ ಪ್ರಮುಖ ಕೇಂದ್ರ ಸಿವಿಯೆರೊಡೊನೆಟ್ಸ್ಕ್ ಆಗಿದ್ದು, ಇಲ್ಲಿ ರಷ್ಯಾ ಪಡೆಗಳು ಶೇ 80 ರಷ್ಟು ನಗರದ ಮೇಲೆ ನಿಯಂತ್ರಣ ಸಾಧಿಸಿದೆ. ಮೂರು ಸೇತುವೆಗಳನ್ನು ನಾಶಪಡಿಸಿದರೂ ರಷ್ಯಾವನ್ನು ಇನ್ನೂ ನಿರ್ಬಂಧಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

‘ಗಾಯಗೊಂಡವರನ್ನು ಸ್ಥಳಾಂತರಿಸಲು, ಉಕ್ರೇನ್ ಮಿಲಿಟರಿ ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಸಂವಹನ ನಡೆಸಲು ಇನ್ನೂ ಅವಕಾಶವಿದೆ’ ಎಂದುಉಕ್ರೇನ್‌ನ ಪ್ರಾದೇಶಿಕ ಸೇನಾ ಗವರ್ನರ್ ಸೆರ್‌ಹಿಯ್‌ ಹೈಡೇ ಎಪಿ ಸುದ್ದಿಸಂಸ್ಥೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

‘ರಷ್ಯಾ ಸೇನೆ ಬಳಸುತ್ತಿರುವ ಭಾರೀ ಫಿರಂಗಿಗಳಿಂದ ಉಕ್ರೇನ್ ಪಡೆಗಳು ನಗರದ ಕೈಗಾರಿಕಾ ಹೊರವಲಯಕ್ಕೆ ತಳ್ಳಲ್ಪಟ್ಟಿವೆ.ಸುಮಾರು 12 ಸಾವಿರ ಜನರು ಸೀವಿರೋಡೋನೆಟ್ಸ್ಕ್‌ನಲ್ಲಿ ಉಳಿದುಕೊಂಡಿದ್ದು, 500 ಕ್ಕೂ ಹೆಚ್ಚು ನಾಗರಿಕರು ಅಜೋಟ್ ರಾಸಾಯನಿಕ ಘಟಕದಲ್ಲಿ ಆಶ್ರಯ ಪಡೆದಿದ್ದಾರೆ’ ಎಂದು ಹೈಡೇ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.