ADVERTISEMENT

ರಷ್ಯಾ ವಿರೋಧಿ ಮೈತ್ರಿಗೆ ಭಾರತ ಸೇರಿಸಲು ನ್ಯಾಟೊ ಯತ್ನ: ಲಾವ್ರೊವ್‌

ಏಜೆನ್ಸೀಸ್
Published 1 ಡಿಸೆಂಬರ್ 2022, 14:30 IST
Last Updated 1 ಡಿಸೆಂಬರ್ 2022, 14:30 IST
ಸೆರ್ಗೈ ಲಾವ್ರೊವ್‌
ಸೆರ್ಗೈ ಲಾವ್ರೊವ್‌   

ಮಾಸ್ಕೊ: ‘ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಪ್ರಭಾವ ದಮನಿಸಲು ಪ್ರಯತ್ನಿಸುತ್ತಿದೆ. ರಷ್ಯಾ ವಿರೋಧಿ ಮತ್ತು ಚೀನಾ ವಿರೋಧಿ ಮೈತ್ರಿಕೂಟಕ್ಕೆ ಭಾರತವನ್ನು ಎಳೆದುಕೊಳ್ಳಲು ನ್ಯಾಟೊ ಹವಣಿಸುತ್ತಿದೆ’ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೈ ಲಾವ್ರೊವ್‌ ಆರೋಪಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಚೀನಾ ಸಮೀಪ ಉದ್ವಿಗ್ನತೆ ಹೆಚ್ಚಿಸಿ ರಷ್ಯಾಕ್ಕೆ ಅಪಾಯ ಉಂಟು ಮಾಡಲು ನ್ಯಾಟೊ ಎದುರು ನೋಡುತ್ತಿದೆ. ಅದರ ಆಕ್ರಮಣಕ್ಕೆ ಸಿಲುಕದೇ ಇದ್ದ ದಕ್ಷಿಣ ಚೀನಾ ಸಮುದ್ರವನ್ನು ಉಕ್ರೇನ್‌ನಲ್ಲಿ ಮಾಡಿದಂತೆ ಉದ್ವಿಗ್ನತೆಯ ಪ್ರದೇಶವಾಗಿಸಲು ಹೊರಟಿದೆ’ ಎಂದು ದೂರಿದರು.

‘ತೈವಾನ್ ಮತ್ತು ತೈವಾನ್ ಜಲಸಂಧಿ ಉಲ್ಲೇಖಿಸುವುದಿಲ್ಲ.ಇದು ಚೀನಾ ಗಡಿಯಂತೆ ನಮ್ಮ ಸಮು‌ದ್ರ ತೀರಕ್ಕೂ ಹತ್ತಿರದಲ್ಲಿದೆ. ನ್ಯಾಟೊ ಪ್ರಚೋದನೆಗಳನ್ನುಚೀನಾ ಎಷ್ಟೊಂದು ಗಂಭೀರವಾಗಿ ಪರಿಗಣಿಸಲಿದೆ ಎಂಬುದು ನಮಗೆ ತಿಳಿದಿದೆ. ಈ ಪ್ರದೇಶಗಳಲ್ಲಿ ನ್ಯಾಟೊ ಬೆಂಕಿಯೊಂದಿಗೆ ಸರಸಕ್ಕಿಳಿದಿರುವುದುರಷ್ಯಾ ಒಕ್ಕೂಟಕ್ಕೆ ಬೆದರಿಕೆ ಮತ್ತು ಅಪಾಯ ತರುವುದಕ್ಕಾಗಿಯೇ ಎನ್ನುವುದನ್ನೂ ನಾವು ಅರಿತಿದ್ದೇವೆ’ ಎಂದು ಅವರು ಹೇಳಿದರು.

ADVERTISEMENT

‘ಅಮೆರಿಕ ನಾಯಕತ್ವದ ನ್ಯಾಟೊ ರಾಷ್ಟ್ರಗಳುಅಲ್ಲಿ ಸ್ಫೋಟಕಪರಿಸ್ಥಿತಿ ಸೃಷ್ಟಿಗೆ ಪ್ರಯತ್ನಿಸುತ್ತಿವೆ. ಯುರೋಪಿನ ಹಿನ್ನೆಲೆಯನ್ನು ಎಲ್ಲರೂ ಚೆನ್ನಾಗಿ ಅರಿತಿದ್ದಾರೆ. ಅದಕ್ಕಾಗಿಯೇ ರಷ್ಯಾ ಚೀನಾ ಜತೆಗೆ ಸೇನಾ ಸಹಕಾರ ಬಲಪಡಿಸುತ್ತಿದೆ. ಜಂಟಿ ಸೇನಾ ತಾಲೀಮು ನಡೆಸುತ್ತಿದೆ’ ಎಂದು ಲಾವ್ರೊವ್‌ ಹೇಳಿದರು.

‘ಉಕ್ರೇನ್‌ ಸಂಘರ್ಷದಲ್ಲಿ ನ್ಯಾಟೊ ನೇರ ಭಾಗಿ’
‘ಉಕ್ರೇನ್‌ ಸಂಘರ್ಷದಲ್ಲಿ ನ್ಯಾಟೊ ನೇರವಾಗಿ ಭಾಗಿಯಾಗಿದೆ. ಪಶ್ಚಿಮದ ರಾಷ್ಟ್ರಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳ ಪೂರೈಕೆ ಮತ್ತು ‌ಸೈನಿಕರಿಗೆ ತರಬೇತಿ ನೀಡುವ ಮೂಲಕ ಸಂಘರ್ಷದಲ್ಲಿ ನೇರವಾಗಿ ತೊಡಗಿಸಿಕೊಂಡಿದೆ’ ಎಂದು ಸೆರ್ಗೈ ಲಾವ್ರೊವ್‌ ಹೇಳಿದರು.

‘ಈ ಯುದ್ಧದಲ್ಲಿ ನೀವು ಭಾಗಿಯಾಗಿಲ್ಲವೆಂದು ಅಮೆರಿಕ ಮತ್ತು ನ್ಯಾಟೊ ಹೇಳುವಂತಿಲ್ಲ. ಶಸ್ತ್ರಾಸ್ತ್ರಗಳ ಪೂರೈಕೆ ಜತೆಗೆ ಸೇನಾ ತರಬೇತಿ ಕೊಡುವ ಮೂಲಕ ನೇರ ಭಾಗಿಯಾಗಿದ್ದೀರಿ. ಬ್ರಿಟನ್‌, ಜರ್ಮನಿ, ಇಟಲಿ ಹಾಗೂ ಇತರ ರಾಷ್ಟ್ರಗಳು ತಮ್ಮ ನೆಲದಲ್ಲಿ ಉಕ್ರೇನ್‌ ಸೈನಿಕರಿಗೆ ತರಬೇತಿ ನೀಡುತ್ತಿರುವುದನ್ನು ಕಾಣುತ್ತಿದ್ದೇವೆ’ ಎಂದು ಲಾವ್ರೊವ್‌ ಹೇಳಿದರು.

ಈ ವಾರ ನಡೆಯಬೇಕಿದ್ದ ಅಮೆರಿಕ ಜತೆಗಿನ ಅಣ್ವಸ್ತ್ರ ನಿಯಂತ್ರಣದ ಮಾತುಕತೆಯನ್ನು ರಷ್ಯಾ ಮುಂದೂಡಿದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಉಕ್ರೇನ್‌ನಲ್ಲಿ ನಡೆಯುತ್ತಿರುವ ಎಲ್ಲವನ್ನೂ ನಿರ್ಲಕ್ಷಿಸಿ, ಯುದ್ಧಭೂಮಿಯಲ್ಲಿ ರಷ್ಯಾ ಸೋಲಿಸಲು ಅಥವಾ ರಷ್ಯಾ ನಾಶಗೊಳಿಸುವ ಗುರಿ ಘೋಷಿಸಿರುವಾಗ ಇಂತಹ ಚರ್ಚೆ, ಮಾತುಕತೆ ಅಸಾಧ್ಯ’ ಎಂದು ಲಾವ್ರೊವ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.