
ಸನೇ ತಕೈಚಿ
ಟೊಕಿಯೊ: ಕಳೆದ ಅಕ್ಟೋಬರ್‌ನಲ್ಲಿ ಜಪಾನ್ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಜಗತ್ತಿನ ಗಮನ ಸೆಳೆದಿದ್ದ ಸನೇ ತಕೈಚಿ (64) ಅವರು ಮೂರೇ ತಿಂಗಳಲ್ಲಿ ರಾಜೀನಾಮೆ ನೀಡಿದ್ದಾರೆ.
ಈ ಮೂಲಕ ಅವರು ಜಪಾನ್ ಸಂಸತ್‌ನ ಕೆಳಮನೆಯಾಗಿರುವ ಪಾರ್ಲಿಮೆಂಟ್ ಅನ್ನು ವಿಸರ್ಜನೆ ಮಾಡಿದ್ದಾರೆ.
ಶಿಂಜೊ ಅಭೆ ಸಾವಿನ ನಂತರ ಪ್ರಧಾನಿಯಾಗಿ ಕೇವಲ ಒಂದು ವರ್ಷ ಸೇವೆ ಸಲ್ಲಿಸಿದ ಶಿಗೇರು ಇಶಿಬಾ ಅವರ ನೇತೃತ್ವದಲ್ಲಿ ಲಿಬರಲ್ ಡೆಮಾಕ್ರಟಿಕ್ ಪಕ್ಷ ನಿರಂತರ ಸೋಲುಗಳನ್ನು ಕಂಡಿತು. ಈ ಕಾರಣದಿಂದ ಬಲಪಂಥೀಯ ವಾದದ ನಾಯಕಿ ಸನೇ ತಕೈಚಿ ಪ್ರಧಾನಿಯಾಗಿ ಪಕ್ಷದ ಡ್ಯಾಮೇಜ್ ಕಂಟ್ರೋಲ್ ಮಾಡಿದ್ದರು.
ಈ ಕಾರಣಕ್ಕಾಗಿಯೇ ಅವರು ಜಪಾನ್‌ನಲ್ಲಿ ಜನರ ವಿಶ್ವಾಸವನ್ನು ಪುನರ್ ಗಳಿಸಿ ಚುನಾವಣೆಗೆ ಸಜ್ಜಾಗಿದ್ದಾರೆ. ಇದೇ ಫೆಬ್ರುವರಿ 8 ರಂದು 465 ಸದಸ್ಯ ಬಲದ ಜಪಾನ್ ಪಾರ್ಲಿಮೆಂಟ್‌ಗೆ ಚುನಾವಣೆ ನಡೆಯಲಿದೆ.
ಜನಪ್ರಿಯತೆಯ ಲಾಭವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸನೇ ತಕೈಚಿ ಹೆಜ್ಜೆ ಇಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ನಿರ್ಧಾರಕ್ಕೆ ಅವರ ಪಕ್ಷದ ಎಲ್ಲ ಸದಸ್ಯರು ಬೆಂಬಲ ನೀಡಿದ್ದಾರೆ.
ಪ್ರಧಾನಿ ಆಯ್ಕೆ ವೇಳೆ ವಿರೋಧ ಪಕ್ಷಗಳಲ್ಲಿ ಒಗ್ಗಟ್ಟು ಇಲ್ಲದ್ದೇ ಇದ್ದದ್ದು ತಕೈಚಿ ಆಯ್ಕೆಗೆ ವರದಾನವಾಗಿತ್ತು. ಆಗ ಎಲ್‌ಡಿಪಿಯು ಒಸಾಕಾ ಮೂಲದ ಬಲಪಂಥೀಯ ‘ಜಪಾನ್ ಇನ್ನೋವೇಷನ್ ಪಾರ್ಟಿ’ (ಜೆಐಪಿ) ಜತೆ ಮೈತ್ರಿ ಮಾಡಿಕೊಂಡಿದ್ದರು. ಈಗ ಈ ಮೈತ್ರಿ ಮುಂದುವರೆಯುತ್ತದೆಯೇ ಎಂಬುದನ್ನು ಅವರು ಖಚಿತಪಡಿಸಿಲ್ಲ.
ಸನೇ ತಕೈಚಿ ಪ್ರಧಾನಿಯಾದ ಬಳಿಕ ತೈವಾನ್ ಪರ ಬಹಿರಂಗವಾಗಿಯೇ ಬ್ಯಾಟಿಂಗ್ ಮಾಡಿದ್ದರು. ಇದರಿಂದ ಚೀನಾ ಕುಪಿತಗೊಂಡಿತ್ತು. ಅಮೆರಿಕದ ಜೊತೆಯೇ ತಕೈಚಿ ಕಟುವಾಗಿಯೇ ನಡೆದುಕೊಂಡಿದ್ದು, ತಮ್ಮ ಅಧಿಕಾರವಧಿಯ ಮೂರು ತಿಂಗಳಲ್ಲಿ ಸೇನೆಯನ್ನು ಬಲಿಷ್ಠ ಮಾಡಲೆಂದೇ ಹೆಚ್ಚು ಶ್ರಮ ಹಾಕಿದ್ದಾರೆ.
ಲಿಬರಲ್ ಡೆಮಾಕ್ರಟಿಕ್ ಪಕ್ಷದ ಕಟ್ಟಾ ಸಂಪ್ರದಾಯವಾದಿ ಸನೇ ತಕೈಚಿ ಅವರು ಬಲಪಂಥೀಯ ನಿರ್ಧಾರಗಳಿಂದ ಜಪಾನಿಗರ ಬೆಂಬಲ ಗಳಿಸುತ್ತಿದ್ದಾರೆ ಎನ್ನಲಾಗಿದೆ.
ಜಪಾನ್ ಪಾರ್ಲಿಮೆಂಟ್ ವಿಸರ್ಜೆನೆಯಾಗಿದ್ದು, ಇಂದಿನಿಂದ 12 ದಿನ ಚುನಾವಣೆ ಪ್ರಕ್ರಿಯೆಗಳು ಬಿರುಸು ಪಡೆದುಕೊಳ್ಳಲಿವೆ. ಸನೇ ತಕೈಚಿ ಅವರೇ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಪ್ರಧಾನಿ ಅಭ್ಯರ್ಥಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.