ADVERTISEMENT

73 ವರ್ಷಗಳಿಂದ ಮದ್ಯ ನಿಷೇಧವಿರುವ ಸೌದಿಯಲ್ಲಿ ಇನ್ಮುಂದೆ ಮದ್ಯಪಾನಕ್ಕೆ ಅವಕಾಶ?

​ಪ್ರಜಾವಾಣಿ ವಾರ್ತೆ
Published 26 ಮೇ 2025, 13:43 IST
Last Updated 26 ಮೇ 2025, 13:43 IST
<div class="paragraphs"><p>AI Image</p></div>

AI Image

   

ದುಬೈ: 73 ವರ್ಷಗಳಿಂದ ಮದ್ಯ ನಿಷೇಧವಿರುವ ಸೌದಿ ಅರೇಬಿಯಾದಲ್ಲಿ ಇನ್ಮುಂದೆ ಮದ್ಯಪಾನಕ್ಕೆ ಅವಕಾಶ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂಬ ವರದಿಗಳನ್ನು ಅಲ್ಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ.

ಸಾರ್ವಜನಿಕರಿಗೆ ಮದ್ಯಪಾನ ಮಾಡಲು ನಮ್ಮ ದೇಶದಲ್ಲಿ ಅವಕಾಶ ಇಲ್ಲ ಹಾಗೂ ಇನ್ಮುಂದೆಯೂ ಇರುವುದಿಲ್ಲ ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.

ADVERTISEMENT

ಇತ್ತೀಚೆಗೆ ಅಂತರರಾಷ್ಟ್ರೀಯ ಮಾಧ್ಯಮವೊಂದು ಸೌದಿಯಲ್ಲಿ ಇನ್ಮುಂದೆ ಮದ್ಯಪಾನಕ್ಕೆ ನಿಯಂತ್ರಿತ ಅವಕಾಶ ನೀಡಲಾಗುತ್ತದೆ ಎಂದು ವರದಿ ಮಾಡಿತ್ತು. ಈ ವರದಿ ಸೌದಿ ಅಷ್ಟೇ ಅಲ್ಲದೇ ಮಧ್ಯಪ್ರಾಚ್ಯದಲ್ಲಿ ಚರ್ಚೆ ಹುಟ್ಟಿಸಿತ್ತು.

2034 ರ ಫುಟ್ಬಾಲ್ ವಿಶ್ವಕಪ್ ಸೌದಿಯಲ್ಲಿ ನಡೆಯಲಿದೆ. ತಯಾರಿಯೂ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಕುಡಿಯುವುದಕ್ಕೆ ಅವಕಾಶ ನೀಡಲಾಗುತ್ತದೆ ಎನ್ನಲಾಗಿತ್ತು.

ಸೌದಿಯನ್ನು ಕೇವಲ ತೈಲ ಉದ್ಯಮದ ಮೇಲೆಯೇ ಕೇಂದ್ರಿಕರಿಸುವ ಬದಲು ಪ್ರವಾಸೋದ್ಯಮದಂತಹ ಆರ್ಥಿಕ ಉತ್ತೇಜನ ಇರುವ ಕ್ಷೇತ್ರಗಳಿಗೂ ಒತ್ತು ಕೊಡಲು ಸೌದಿ ರಾಜ ಮೊಹಮದ್ ಬಿನ್ ಸಲ್ಮಾನ್ ಊರ್ಪ್ ಎಂಬಿಎಸ್ ಅವರು ಇತ್ತೀಚೆಗೆ ಹಲವು ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ.

ಅದರಲ್ಲಿ ಮಹಿಳೆಯರಿಗೆ ವಾಹನ ಚಾಲನೆಗೆ ಇದ್ದ ನಿಷೇಧವನ್ನು ಇತ್ತೀಚೆಗೆ ತೆಗೆದುಹಾಕಿದ್ದು ಸೇರಿದೆ.

ಮದ್ಯಪಾನ ನಿಷೇಧ ಇರುವ ಸೌದಿಯಲ್ಲಿ ಮುಸ್ಲಿಂರಲ್ಲದ ರಾಜತಾಂತ್ರಿಕರಿಗೆ ಮಾತ್ರ ನಿಯಂತ್ರಿತ ಮದ್ಯಪಾನಕ್ಕೆ ಅವಕಾಶ ನೀಡಲಾಗಿದೆ. ಮದ್ಯಪಾನ ನಿಷೇಧ ಉಲ್ಲಂಘಿಸಿದರೆ ಸೌದಿಯಲ್ಲಿ ಕಠಿಣ ಶಿಕ್ಷೆಗಳಿವೆ.

ಮುಸ್ಲಿಂರ ಪವಿತ್ರ ಯಾತ್ರಾ ಸ್ಥಳಗಳಾದ ಮೆಕ್ಕಾ ಮದೀನಾಗಳು ಸೌದಿ ಅರೇಬಿಯಾದಲ್ಲಿರುವುದರಿಂದ ಮದ್ಯಪಾನ ನಿಷೇಧವಿದೆ ಎನ್ನಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.