ADVERTISEMENT

ಇಸ್ಲಾಂ ಧರ್ಮದಲ್ಲಿ ಬಾಲಕಿಯರಿಗೆ ಶಾಲಾ ಶಿಕ್ಷಣ: ಸಮಾವೇಶದಲ್ಲಿ ಮಲಾಲ ಭಾಗಿ

ಏಜೆನ್ಸೀಸ್
Published 11 ಜನವರಿ 2025, 10:11 IST
Last Updated 11 ಜನವರಿ 2025, 10:11 IST
<div class="paragraphs"><p>ಮಲಾಲ&nbsp;ಯೂಸುಫ್ ಜಾಯ್</p></div>

ಮಲಾಲ ಯೂಸುಫ್ ಜಾಯ್

   

ಇಸ್ಲಾಮಾಬಾದ್: ನೊಬೆಲ್ ಶಾಂತಿ ಪುರಸ್ಕಾರ ಪಡೆದ ಮಲಾಲ ಯೂಸುಫ್ ಜಾಯ್ ಅವರು ಹಲವು ವರ್ಷಗಳ ಬಳಿಕ ತವರು ರಾಷ್ಟ್ರ ಪಾಕಿಸ್ತಾನಕ್ಕೆ ಮರಳಿದ್ದಾರೆ. ಆಫ್ಗಾನಿಸ್ತಾನ ಸರ್ಕಾರವು ಬಾಲಕಿಯರಿಗೆ ಶಿಕ್ಷಣ ನಿರಾಕರಿಸಿರುವ ಬೆನ್ನಲ್ಲೇ ನಡೆಯುತ್ತಿರುವ ‘ಇಸ್ಲಾಂ ಧರ್ಮದಲ್ಲಿ ಬಾಲಕಿಯರಿಗೆ ಶಾಲಾ ಶಿಕ್ಷಣ’ ಕುರಿತ ಜಾಗತಿಕ ಸಮಾವೇಶದಲ್ಲಿ ಅವರು ಪಾಲ್ಗೊಂಡಿದ್ದಾರೆ. 

ಜಗತ್ತಿನಲ್ಲಿ ಆಫ್ಗಾನಿಸ್ತಾನ ಹೊರತುಪಡಿಸಿ ಎಲ್ಲಾ ಮುಸ್ಲಿಂ ರಾಷ್ಟ್ರಗಳ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. 

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಶರೀಫ್‌, ‘ಪಾಕಿಸ್ತಾನವನ್ನೂ ಒಳಗೊಂಡು ಮುಸ್ಲಿಂ ದೇಶಗಳಲ್ಲಿ ಸಮಾನ ಶಿಕ್ಷಣ ಬಾಲಕಿಯರಿಗೂ ಸಿಗುವಂತೆ ಮಾಡವುದು ಈ ಯುಗದಲ್ಲೂ ಸವಾಲಿನ ಕೆಲಸವಾಗಿದೆ’ ಎಂದಿದ್ದಾರೆ.

‘ಬಾಲಕಿಯರಿಗೆ ಶಿಕ್ಷಣ ನಿರಾಕರಿಸುವುದೆಂದರೆ ಅವರ ಧ್ವನಿ ಮತ್ತು ಆಯ್ಕೆಯನ್ನು ಹತ್ತಿಕ್ಕಿದಂತೆ. ಜತೆಗೆ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದರಿಂದ ವಂಚಿತರನ್ನಾಗಿ ಮಾಡಿದಂತೆ’ ಎಂದು ಹೇಳಿದ್ದಾರೆ. 

ಆಫ್ಗಾನಿಸ್ತಾನದ ಗೈರು ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಶಿಕ್ಷಣ ಸಚಿವ ಖಾಲೀದ್ ಮಕ್ಬೂಲ್ ಸಿದ್ಧಿಕಿ ಅವರು, ‘ಎಲ್ಲರಿಗೂ ಕಳುಹಿಸಿದಂತೆ ಆಫ್ಗಾನಿಸ್ತಾನಕ್ಕೂ ಕಳುಹಿಸಲಾಗಿತ್ತು. ಆದರೆ ಅಲ್ಲಿನ ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಈ ಸಮ್ಮೇಳನದಲ್ಲಿ ಪಾಲ್ಗೊಂಡಿಲ್ಲ’ ಎಂದಿದ್ದಾರೆ.

ಮುಸ್ಲಿಂ ವರ್ಲ್ಡ್‌ ಲೀಗ್‌ನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಅಲ್‌ ಇಸ್ಸಾ ಅವರು ಮಾತನಾಡಿ, ‘ಶಾಲಾ ಶಿಕ್ಷಣದಿಂದ ಬಾಲಕಿಯರನ್ನು ದೂರವಿಡಲು ಧರ್ಮ ಆಧಾರವಲ್ಲ. ಹೆಣ್ಣು ಮಕ್ಕಳಿಗೆ ಶಿಕ್ಷಣ ಅಗತ್ಯ ಎಂಬುದನ್ನು ಇಡೀ ಮುಸ್ಲಿಂ ರಾಷ್ಟ್ರಗಳು ಒಪ್ಪಿಕೊಂಡಿವೆ. ಯಾರೆಲ್ಲಾ ಇದನ್ನು ವಿರೋಧಿಸುತ್ತಾರೋ ಅವರ ನಿರ್ಧಾರ ತಪ್ಪು’ ಎಂದಿದ್ದಾರೆ.

ಮಲಾಲ ಯೂಸುಫ್ ಜಾಯ್ ಅವರ ಮೇಲೆ 2012ರಲ್ಲಿ ತಾಲಿಬಾನ್ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರು ನಂತರ ಗುಣಮುಖರಾದರು. ಸಮ್ಮೇಳನದಲ್ಲಿ ಭಾನುವಾರ ನಡೆಯಲಿರುವ ಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ತಮ್ಮ ಈ ಭೇಟಿ ಕುರಿತು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಹೆಣ್ಣುಮಕ್ಕಳ ಶಿಕ್ಷಣ ಕುರಿತು ಸಮಾಜಿಕ ಮಾದ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಲಾಲ, ‘ಆಫ್ಗಾನಿಸ್ತಾನದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಮೇಲೆ ನಡೆಯುತ್ತಿರುವ ಅಪರಾಧಗಳ ವಿರುದ್ಧ ವಿಶ್ವ ಸಮೂಹವು ಒಂದುಗೂಡಿ ಏಕೆ ಧ್ವನಿ ಎತ್ತಬಾರದು ಮತ್ತು ಏಕೆ ಹೊಣೆಯನ್ನಾಗಿ ಮಾಡಬಾರದು’ ಎಂದು ಪ್ರಶ್ನಿಸಿದ್ದಾರೆ.

ಆಫ್ಗಾನಿಸ್ತಾನದಲ್ಲಿ 2021ರಲ್ಲಿ ಅಧಿಕಾರಕ್ಕೆ ಮರಳಿದ ತಾಲಿಬಾನ್‌, ಇಸ್ಲಾಂನ ಕಠಿಣ ಕಾನೂನನ್ನು ಜಾರಿಗೆ ತಂದಿತು. ಇದನ್ನು ವಿಶ್ವಸಂಸ್ಥೆಯು ಲಿಂಗಭೇದ ಹಾಗೂ ವರ್ಣಭೇದ ಎಂದು ಕರೆದಿದೆ.

ಮತ್ತೊಂದೆಡೆ ಪಾಕಿಸ್ತಾನದಲ್ಲೂ 2.6 ಕೋಟಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಸರ್ಕಾರಿ ದಾಖಲೆಗಳೇ ಹೇಳುತ್ತಿವೆ. ಇದು ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ಎಂದು ಅಂದಾಜಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.