ADVERTISEMENT

ಪುನಃ ಸಕ್ರಿಯಗೊಂಡ ಮೃತ ಹಂದಿಯ ಜೀವಕೋಶ, ಅಂಗಾಂಗಗಳು: ಯಶಸ್ವಿ ಪ್ರಯೋಗ

ಪಿಟಿಐ
Published 5 ಆಗಸ್ಟ್ 2022, 14:03 IST
Last Updated 5 ಆಗಸ್ಟ್ 2022, 14:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಅಂಗಾಂಗ ದಾನ ಪ್ರಕ್ರಿಯೆಗೆ ಮಹತ್ವದ ಕೊಡುಗೆಯನ್ನು ವಿಜ್ಞಾನಿಗಳು ನೀಡಿದ್ದಾರೆ. ಅಮೆರಿಕ ಸಂಶೋಧಕರು ಹೊಸ ತಂತ್ರಜ್ಞಾನವೊಂದನ್ನು ರೂಪಿಸಿದ್ದು, ಇದರ ಸಹಾಯದಿಂದ ಸತ್ತ ಪ್ರಾಣಿಗಳ ಜೀವಕೋಶಗಳು ಮತ್ತು ಅಂಗಾಂಗಗಳನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹಂದಿಗಳ ಮೇಲೆ ಈ ಪ್ರಯೋಗವನ್ನು ನಡೆಸಲಾಗಿದೆ.

ತಂತ್ರಜ್ಞಾನದ ಸಹಾಯದಿಂದ ಹಂದಿಗಳು ಮೃತಪಟ್ಟ ಬಳಿಕ ಸುಮಾರು ಒಂದು ಗಂಟೆಯ ವರೆಗೆ ಅವುಗಳ ಜೀವಕೋಶಗಳು, ರಕ್ತನಾಳಗಳು, ರಕ್ತಪರಿಚಲನೆ ಮತ್ತು ಅಂಗಾಂಗಗಳು ಕಾರ್ಯಚರಣೆ ಸಾಧ್ಯವಾಗಿದೆ. ಈ ಸಂಶೋಧನೆಯಿಂದ ಶಸ್ತ್ರಚಿಕಿತ್ಸೆ ವೇಳೆ ಮನುಷ್ಯನ ಅಂಗಾಂಗಗಳ ಆರೋಗ್ಯದ ಅವಧಿ ವಿಸ್ತರಿಸಲು ಸಹಕಾರವಾಗಲಿದೆ ಮತ್ತು ದಾನವಾಗಿ ಬಂದ ಅಂಗಾಂಗಗಳ ಲಭ್ಯತೆಯನ್ನು ವಿಸ್ತರಿಸಲು ಅನುಕೂಲವಾಗಲಿದೆ ಎಂಬ ವಿಶ್ವಾಸ ಮೂಡಿದೆ.

ಎಲ್ಲ ಜೀವಕೋಶಗಳು ತಕ್ಷಣ ಸಾಯುವುದಿಲ್ಲ. ಅವುಗಳನ್ನು ದೀರ್ಘಾವಧಿ ವರೆಗೆ ವಿಸ್ತರಿಸಲು ಸಾಧ್ಯವಿದೆ. ಕೆಲವು ಜೀವಕೋಶಗಳ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಬಹುದು, ನಿಲ್ಲಿಸಬಹುದು ಮತ್ತು ಅವುಗಳನ್ನು ಯಥಾಸ್ಥಿತಿಗೆ ತರಬಹುದು ಎಂದು ಯಾಲೆ ಸ್ಕೂಲ್‌ ಆಫ್‌ ಮೆಡಿಸಿನ್‌ನ ವಿಜ್ಞಾನಿ ಡೇವಿಡ್‌ ಆ್ಯಂಡ್ರಿಜೆವಿಕ್‌ ತಿಳಿಸಿದ್ದಾರೆ.

ADVERTISEMENT

ಯಾಲೆ ಸ್ಕೂಲ್‌ ಆಫ್‌ ಮೆಡಿಸಿನ್‌ ನೇತೃತ್ವದ ಪ್ರಯೋಗವು 'ಬ್ರೈನ್‌ಎಕ್ಸ್' ಎಂದು ಹೆಸರಿಸಲಾದ ತಂತ್ರಜ್ಞಾನದ ಸಹಾಯದಿಂದ ಮೃತ ಹಂದಿಯ ಮಿದುಳಿನ ನಿರ್ದಿಷ್ಟ ಜೀವಕೋಶಗಳ ಕ್ರಿಯೆಯನ್ನು ಮರುಸ್ಥಾಪಿಸುವಲ್ಲಿ ಯಶಸ್ವಿಯಾಗಿತ್ತು. ಅದರ ಮುಂದುವರಿದ ಸಂಶೋಧನೆಯ ಭಾಗವಾಗಿ ಮಾರ್ಪಾಡುಗೊಂಡ ಬ್ರೈನ್‌ಎಕ್ಸ್‌ ತಂತ್ರಜ್ಞಾನದ ಸಹಾಯದಿಂದ ಮೃತ ಹಂದಿಯ ಸಂಪೂರ್ಣ ದೇಹದ ಮೇಲೆ ಪ್ರಯೋಗ ನಡೆಸಲಾಗಿದೆ. ಆರು ಗಂಟೆಗಳ ಕಾಲ ಚಿಕಿತ್ಸೆ ನೀಡಿದ ಬಳಿಕ ಕೆಲವು ನಿರ್ದಿಷ್ಟ ಜೀವಕೋಶಗಳು ಸಕ್ರಿಯಗೊಂಡಿವೆ. ಪ್ರಮುಖವಾಗಿ ಹೃದಯ, ಹೊಟ್ಟೆ ಮತ್ತು ಕಿಡ್ನಿಗಳಲ್ಲಿನ ಜೀವಕೋಶಗಳು ಮರು ಸಕ್ರಿಯಗೊಂಡಿವೆ. ಮಾರ್ಪಾಡುಗೊಂಡ ತಂತ್ರಜ್ಞಾನಕ್ಕೆ ಆರ್ಗನ್‌ಎಕ್ಸ್‌ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.