ADVERTISEMENT

ರಕ್ತ ಹೆಪ್ಪುಗಟ್ಟಿಸುವ ಚಳಿ; ಮಡುಗಟ್ಟಿದ ಸಂತ್ರಸ್ತರ ಸಂಕಟ

ಮೃತ ಪುತ್ರಿಯ ಕೈಬಿಡಲು ಒಪ್ಪದ ತಂದೆ

ಎಪಿ
ಎಎಫ್‌ಪಿ
Published 8 ಫೆಬ್ರುವರಿ 2023, 17:05 IST
Last Updated 8 ಫೆಬ್ರುವರಿ 2023, 17:05 IST
   

ಅಂಕರಾ(ಟರ್ಕಿ)/ಪ್ಯಾರಿಸ್‌: ಅವಶೇಷಗಳಡಿ ಸಿಲುಕಿ ಅರೆ ಜೀವವಾಗಿ ನರಳಾಡುತ್ತಿರುವ ನತದೃಷ್ಟರು, ಅವಶೇಷಗಳಡಿ ಸಿಲುಕಿದ ನವಜಾತ ಶಿಶುಗಳು, ಮಕ್ಕಳನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿಯ ಹರಸಾಹಸ, ಮೃತ ಮಗಳ ಕೈ ಹಿಡಿದುಕೊಂಡು ‘ಕಲ್ಲಾಗಿ’ ಕುಳಿತ ದುಃಖತಪ್ತ ತಂದೆ....... ಇಂತಹ ದೃಶ್ಯಗಳು ಒಂದೇ, ಎರಡೇ... ಭೂಕಂಪದಿಂದ ತತ್ತರಿಸಿರುವ ಟರ್ಕಿ ಮತ್ತು ಸಿರಿಯಾದಲ್ಲಿ ಕಂಡುಬಂದ ಹೃದಯವಿದ್ರಾವಕ ದೃಶ್ಯಗಳಿವು.

ಟರ್ಕಿಯ ಭೂಕಂಪ ಕೇಂದ್ರಿತ ಸ್ಥಳದ ಸಮೀಪದ ನಗರ ಕಹ್ರಮನ್ಮರಸ್‌ನಲ್ಲಿ ಸ್ಥಳೀಯ ನಿವಾಸಿ ಮೆಸುಟ್ ಹ್ಯಾನ್ಸರ್‌ ಎಂಬಾತ, ಕಾಂಕ್ರೀಟ್ ಚಪ್ಪಡಿಗಳ ಅಡಿ ಸಿಲುಕಿ, ಜೀವಬಿಟ್ಟ ತನ್ನ 15 ವರ್ಷದ ಮಗಳು ಇರ್ಮಾಕ್‌ ಕೈ ಹಿಡಿದುಕೊಂಡು ಮೈಕೊರೆವ ಚಳಿಯಲ್ಲೇ ಕುಳಿತಿದ್ದಾರೆ. ಯಾರೇ ಬಂದು, ಎಷ್ಟೇ ಮನವೊಲಿಸಿದರೂ ಮೆಸುಟ್ ತಮ್ಮ ಪುತ್ರಿಯ ಕೈಬಿಟ್ಟು ಮೇಲೇಳಲು ಒಪ್ಪುತ್ತಿಲ್ಲ.

ಕಹ್ರಮನ್ಮರಸ್‌ ನಗರದ ಮತ್ತೊಂದು ಕಡೆ ಅಲಿ ಸಗಿರೊಗ್ಲು ಎಂಬ ನಿವಾಸಿ ‘ಸುತ್ತಲೂ ಒಮ್ಮೆ ನೋಡಿ. ಇಲ್ಲಿ ನಮ್ಮ ರಕ್ಷಣೆಗೂ ಒಬ್ಬನೇ ಒಬ್ಬ ಅಧಿಕಾರಿ, ಸಿಬ್ಬಂದಿ ಇಲ್ಲ. ನಮ್ಮ ಮಕ್ಕಳು ರಕ್ತ ಹೆಪ್ಪುಗಟ್ಟುವ ಚಳಿಯಲ್ಲಿ ತತ್ತರಿಸುತ್ತಿದ್ದಾರೆ. ಅವಶೇಷಗಳಡಿ ಸಿಲುಕಿರುವ ನನ್ನ ಸಹೋದರ, ನನ್ನ ಸೋದರಳಿಯನನ್ನು ಬದುಕಿಸಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ. ನಮಗೆ ದೇವರೇ ದಿಕ್ಕು’ ಎಂದು ಅಲ್ಲಿನ ಕರುಣಾಜನಕ ಸ್ಥಿತಿಯನ್ನು ತೆರೆದಿಟ್ಟರು.

ADVERTISEMENT

ಬಾಲಕನ ದೇಹದ ಕೆಳಭಾಗ ಕಾಂಕ್ರೀಟ್ ಮತ್ತು ಚಪ್ಪಡಿಗಳ ಅಡಿ ಸಿಲುಕಿತ್ತು. ಎಚ್ಚರಿಕೆಯಿಂದ ಅವಶೇಷ ತೆರವುಗೊಳಿಸಿ, ಬಾಲಕನನ್ನು ರಕ್ಷಿಸಿದರು.

ಭೂಕಂಪದಲ್ಲಿ ಹೇಗೋ ಬದುಕುಳಿದವರಿಗೂ ಭವಿಷ್ಯ ಕತ್ತಲೆಯಾಗಿದೆ. ಮನೆಗಳನ್ನು ಕಳೆದುಕೊಂಡವರು, ಹಿಮಮಳೆ ಮತ್ತು ಚಳಿಯಿಂದ ಪಾರಾಗಲು ಶಾಲೆಗಳು, ಮಸೀದಿಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಆಶ್ರಯ ಪಡೆದಿದ್ದಾರೆ.

ಭೂಕಂಪಕ್ಕೆ ತುತ್ತಾದ ಪ್ರದೇಶಗಳಲ್ಲಿ ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಸ್ಮಶಾನಸದೃಶವೇ ಕಾಣಿಸುತ್ತಿದೆ. ರಕ್ತ ಹೆಪ್ಪುಗಟ್ಟುವಂತಹ ಚಳಿ ಮತ್ತು ಹಿಮದ ಮಳೆಯ ನಡುವೆ ರಕ್ಷಣಾ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ತೊಡಗಿದ್ದಾರೆ.

ಶೇ 90ಕ್ಕೂ ಹೆಚ್ಚು ಸಂತ್ರಸ್ತರ ರಕ್ಷಣೆ

ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದ ಅವಶೇಷಗಳಲ್ಲಿ ಸಿಲುಕಿದವರ ರಕ್ಷಣೆಯ ನಿರ್ಣಾಯಕ 72 ಗಂಟೆಗಳ ಅವಧಿ ಮುಗಿದಿದೆ ಎಂದು ವಿಪತ್ತು ಸ್ಪಂದನೆಯ ರಕ್ಷಣಾ ತಜ್ಞರು ಬುಧವಾರ ತಿಳಿಸಿದ್ದಾರೆ.

ಮೊದಲ ಮೂರು ದಿನಗಳಲ್ಲಿ ಭೂಕಂಪದಿಂದ ಬದುಕುಳಿದವರಲ್ಲಿ ಶೇ 90ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಲಂಡನ್‌ನ ಯೂನಿವರ್ಸಿಟಿ ಕಾಲೇಜಿನಲ್ಲಿ ವಿಪತ್ತು ಮತ್ತು ಆರೋಗ್ಯದ ಪ್ರಾಧ್ಯಾಪಕರಾಗಿರುವ ಇಲಾನ್ ಕೆಲ್ಮನ್ ಹೇಳಿದ್ದಾರೆ.

‘ಗಾಯಾಳುಗಳ ರಕ್ಷಣೆಗೆ ಈಗಾಗಲೇ ಸಮಯ ಮೀರಿ ಹೋಗಿದೆ. ಕಾರ್ಯಾಚರಣೆ ಕ್ಷಿಪ್ರಗತಿಯಲ್ಲಿ ನಡೆಸಬೇಕೆಂದು’ ವಿವಿಶ್ವ ಆರೋಗ್ಯಸಂಸ್ಥೆಯ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರಾಸ್‌ ಅಧಾನಮ್‌ ಗೆಬ್ರಾಯೆಸೆಸ್‌ ಒತ್ತಾಯಿಸಿದ್ದಾರೆ.

ಉಭಯ ರಾಷ್ಟ್ರಗಳ ಸೇನಾ ಮತ್ತು ವಿಪತ್ತು ನಿರ್ವಹಣೆಯ ಸಿಬ್ಬಂದಿ ಜತೆಗೆ ಭಾರತ, ಚೀನಾ, ಅಮೆರಿಕ ಸೇರಿ 24ಕ್ಕೂ ಹೆಚ್ಚು ರಾಷ್ಟ್ರಗಳ ವಿಪತ್ತು ಸ್ಪಂದನಾ ಪಡೆಗಳ ಸಿಬ್ಬಂದಿ ಸಂತ್ರಸ್ತರ ರಕ್ಷಣಾ ಕಾರ್ಯಚರಣೆಯಲ್ಲಿ ಕೈಜೋಡಿಸಿದ್ದಾರೆ. ಅವಶೇಷಗಳನ್ನು ತೆರವು ಮಾಡಿದಂತೆ ಹೆಜ್ಜೆ ಹೆಜ್ಜೆಗೂ ಮೃತದೇಹಗಳು ಸಿಗುತ್ತಲೇ ಇವೆ.

ಅವಶೇಷಗಳಡಿ ಇನ್ನೆಷ್ಟು ಜನರು ಜೀವಂತ ಸಮಾಧಿಯಾಗಿದ್ದಾರೊ ಎಂಬ ಆತಂಕ ಕವಿದಿದೆ. ಸಾವಿನ ಸಂಖ್ಯೆ ದ್ವಿಗುಣವಾಗುವ ಆತಂಕವನ್ನು ತಜ್ಞರು ಹೊರಹಾಕಿದ್ದಾರೆ.

‘ಭೂಕಂಪ ಪೀಡಿತ ಪ್ರದೇಶದಲ್ಲಿ 2.3 ಕೋಟಿ ಜನರ ಮೇಲೆ ಪರಿಣಾಮ ಬೀರಬಹುದು. ಇದು ಬಿಕ್ಕಟ್ಟಿನಲ್ಲಿ ಅತಿ ದೊಡ್ಡ ಬಿಕ್ಕಟ್ಟು’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸೇವೆಗಳ ಹಿರಿಯ ಅಧಿಕಾರಿ ಅದೆಲ್ಹೀದ್ ಮಾರ್ಚಾಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.