ADVERTISEMENT

ವಿವೇಕಮೂರ್ತಿ ನಾಮನಿರ್ದೇಶನ ಅನುಮೋದಿಸಲು ಸೆನೆಟ್‌ ಸಮಿತಿಯಿಂದ ವಿಚಾರಣೆ

ಪಿಟಿಐ
Published 25 ಫೆಬ್ರುವರಿ 2021, 5:52 IST
Last Updated 25 ಫೆಬ್ರುವರಿ 2021, 5:52 IST
ಡಾ.ವಿವೇಕ ಮೂರ್ತಿ
ಡಾ.ವಿವೇಕ ಮೂರ್ತಿ   

ವಾಷಿಂಗ್ಟನ್‌: ಅಮೆರಿಕದ ಸರ್ಜನ್‌ ಜನರಲ್‌ ಹುದ್ದೆಗೆ ಭಾರತೀಯ ಅಮೆರಿಕನ್‌ ವೈದ್ಯ ಡಾ.ವಿವೇಕ್‌ ಮೂರ್ತಿ ಅವರ ನಾಮನಿರ್ದೇಶನವನ್ನು ಅನುಮೋದಿಸುವ ಸಂಬಂಧ ಸೆನೆಟ್‌ನ ಸಮಿತಿ ವಿಚಾರಣೆ ನಡೆಸಲಿದೆ.

ವೈದ್ಯಕೀಯ ಸೇವೆಗೆ ಸಂಬಂಧಿಸಿದಂತೆ ಇದು ಅಮೆರಿಕದ ಅತ್ಯುನ್ನತ ಹುದ್ದೆಯಾಗಿದ್ದು, ಅಧ್ಯಕ್ಷ ಜೋ ಬೈಡನ್‌ ಅವರು ಡಾ.ಮೂರ್ತಿ ಅವರನ್ನು ಈ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ.

ಆರೋಗ್ಯ, ಶಿಕ್ಷಣ, ಕಾರ್ಮಿಕ ಹಾಗೂ ಪಿಂಚಣಿಗೆ ಸಂಬಂಧಿಸಿದ ಸೆನೆಟ್‌ನ ಸಮಿತಿಯು ಈ ವಿಚಾರಣೆ ನಡೆಸಲಿದ್ದು, ಅಮೆರಿಕದಲ್ಲಿ ಕೋವಿಡ್‌ನಿಂದಾದ ಪ್ರಾಣಹಾನಿ, ಪಿಡುಗು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮೂರ್ತಿ ಅವರು ತಮ್ಮ ಯೋಜನೆಗಳನ್ನು ಸಮಿತಿ ಮುಂದೆ ಪ್ರಸ್ತುತಪಡಿಸಲಿದ್ದಾರೆ.

ADVERTISEMENT

‘ಕೋವಿಡ್‌ನಿಂದ ದೇಶ ಭಾರಿ ನೋವನ್ನು ಅನುಭವಿಸಿದೆ. 5 ಲಕ್ಷಕ್ಕೂ ಅಧಿಕ ಜನರು ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ಧಾರೆ. ಭಾರತದಲ್ಲಿರುವ ನನ್ನ ಕುಟುಂಬದ ಏಳು ಜನ ಸದಸ್ಯರನ್ನು ಕಳೆದುಕೊಂಡಿದ್ದೇನೆ’ ಎಂಬುದನ್ನು ಸಂಸತ್‌ನ ಸಮಿತಿ ಗಮನಕ್ಕೆ ತರುವ ಮೂಲಕ ಮೂರ್ತಿ ಅವರು ಕೋವಿಡ್‌ನ ಭೀಕರತೆಯನ್ನು ವಿವರಿಸುವರು. ಸಂಸತ್‌ ಸಮಿತಿ ಮುಂದೆ ತಾವು ಪ್ರಸ್ತುತಪಡಿಸಲು ಮೂರ್ತಿ ಅವರು ಸಿದ್ಧಪಡಿಸಿರುವ ದಾಖಲೆಗಳನ್ನು ಉಲ್ಲೇಖಿಸಿ ಎಬಿಸಿ ನ್ಯೂಸ್‌ ಸುದ್ದಿಸಂಸ್ಥೆ ಮಾಡಿರುವ ವರದಿಯಲ್ಲಿ ಈ ವಿಷಯವನ್ನು ವಿವರಿಸಲಾಗಿದೆ.

‘ಅಮೆರಿಕದ ಸರ್ಜನ್‌ ಜನರಲ್‌ ಹುದ್ದೆಗೆ ನೇಮಕಗೊಂಡರೆ, ಕೋವಿಡ್‌ ಪಿಡುಗನ್ನು ನಿರ್ಮೂಲನೆ ಮಾಡುವುದು ನನ್ನ ಮೊದಲ ಆದ್ಯತೆಯಾಗಲಿದೆ. ದೇಶದ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ–ಕಾಲೇಜುಗಳು, ವಿಶ್ವವಿದ್ಯಾಲಯಗಳು, ವರ್ತಕ ಸಮೂಹ, ಆರೋಗ್ಯ ಕಾರ್ಯಕರ್ತರೊಂದಿಗೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿರುವೆ’ ಎಂಬ ಅಂಶವನ್ನು ಸಹ ಅವರು ಸಮಿತಿ ಮುಂದಿಡುವರು ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.