ಢಾಕಾ: ವಿವಿಧ ಆರೋಪಗಳನ್ನು ಎದುರಿಸುತ್ತಿರುವ, ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ವಿಚಾರಣೆಯನ್ನು ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಾಲಯವು (ಐಸಿಟಿ) ಭಾನುವಾರ ಆರಂಭಿಸಿತು.
ಹಸೀನಾ ಅವರ ಆಪ್ತರಾದ, ಮಾಜಿ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಕಮಾಲ್ ಹಾಗೂ ಮಾಜಿ ಐಜಿಪಿ ಚೌಧರಿ ಅಬ್ದುಲ್ಲಾ ಅಲ್ ಮಾಮೂನ್ ಈ ಪ್ರಕರಣದಲ್ಲಿ ಸಹ ಆರೋಪಿಗಳಾಗಿದ್ದಾರೆ.
ಶೇಖ್ ಹಸೀನಾ ಹಾಗೂ ಕಮಾಲ್ ಅವರ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಯಿತು. ಮಾಮೂನ್ ಅವರು ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದು, ಮಾಫಿ ಸಾಕ್ಷಿಯಾಗಲು ಒಪ್ಪಿದ್ದಾರೆ.
ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ನೇಮಿಸಿರುವ ಮುಖ್ಯ ಪ್ರಾಸಿಕ್ಯೂಟರ್ ತಜುಲ್ ಇಸ್ಲಾಂ ವಾದ ಮಂಡಿಸಿದರು. ‘ಕಳೆದ ವರ್ಷ ದೇಶದಲ್ಲಿ ನಡೆದ ಹಿಂಸಾಚಾರ ಹಾಗೂ ಅಪರಾಧಿಕ ಕೃತ್ಯಗಳಿಗೆ ಶೇಖ್ ಹಸೀನಾ ಅವರೇ ನೇರ ಕಾರಣ. ಅವರಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು’ ಎಂದು ತಜುಲ್ ಇಸ್ಲಾಂ, ನ್ಯಾಯಾಲಯಕ್ಕೆ ಕೋರಿದರು.
ಕಳೆದ ವರ್ಷ ಆಗಸ್ಟ್ 5ರಂದು, ಹಸೀನಾ ನೇತೃತ್ವದ ಸರ್ಕಾರದ ವಿರುದ್ಧ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ನಡೆದಿದ್ದ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದ ಪ್ರತಿಭಟನಕಾರರ ಮೇಲೆ ಬಲಪ್ರಯೋಗ ನಡೆಸಿ, ಹಲವರ ಹತ್ಯೆಗೆ ಕಾರಣರಾಗಿದ್ದರು ಎಂಬುದು ಸೇರಿ ವಿವಿಧ ಆರೋಪಗಳಡಿ ಅವರ ವಿರುದ್ಧ ಪ್ರಕರಣ ದಾಖಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.