ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ(ಐಸಿಟಿ–ಬಿಡಿ) ಅಧಿಕೃತವಾಗಿ ಗುರುವಾರ ಆರೋಪ ನಿಗದಿ ಮಾಡಿದೆ.
ಮಾನವೀಯತೆ ವಿರುದ್ಧದ ಅಪರಾಧಗಳಿಗಾಗಿ, ಅವರ ಅನುಪಸ್ಥಿತಿಯಲ್ಲಿ ಹಸೀನಾ ವಿರುದ್ಧ ಆರೋಪ ನಿಗದಿ ಮಾಡಿರುವ ನ್ಯಾಯಮಂಡಳಿ, ಆಗಸ್ಟ್ 3ರಿಂದ ವಿಚಾರಣೆ ಆರಂಭಿಸಲಾಗುವುದು ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಮೊಹಮ್ಮದ್ ಗುಲಾಮ್ ಮುರ್ತುಜಾ ಮಜುಂದಾರ, ಮೊಹಮ್ಮದ್ ಶಫೀವುಲ್ ಆಲಂ ಮಹಮೂದ್ ಹಾಗೂ ಮೊಹಮ್ಮದ್ ಮಹಿತ್ ಉಲ್ ಹಕ್ ಎನಮ್ ಚೌಧರಿ ಅವರು ಇದ್ದ ನ್ಯಾಯಪೀಠ, ಈ ಕುರಿತ ಆದೇಶ ಹೊರಡಿಸಿತು. ಅಪರಾಧ ಸಾಬೀತಾದಲ್ಲಿ, ಅವರಿಗೆ ಗಲ್ಲು ಶಿಕ್ಷೆ ವಿಧಿಸಬಹುದಾಗಿದೆ.
ಹಸೀನಾ ಅವರು ಪ್ರಧಾನಿಯಾಗಿದ್ದ ವೇಳೆ ಗೃಹ ಸಚಿವರಾಗಿದ್ದ ಅಸಾದುಜ್ಜಮಾನ್ ಖಾನ್ ಕಮಲ್, ಐಜಿಪಿಯಾಗಿದ್ದ ಚೌಧರಿ ಅಬ್ದುಲ್ಲಾ ಅಲ್ ಮಮೂನ್ ವಿರುದ್ಧವೂ ನ್ಯಾಯಮಂಡಳಿಯು ಆರೋಪ ನಿಗದಿ ಮಾಡಿದೆ ಎಂದು ನ್ಯಾಯಮಂಡಳಿಯಲ್ಲಿ ಮುಖ್ಯ ಪ್ರಾಸಿಕ್ಯೂಟರ್ ಆಗಿರುವ ಮುಹಮ್ಮದ್ ತಜುಲ್ ಇಸ್ಲಾಂ ಮಾಧ್ಯಮಗಳಿಗೆ ತಿಳಿಸಿದ್ದಾರೆ.
‘ಕಳೆದ ವರ್ಷ ಜುಲೈ ಮತ್ತು ಆಗಸ್ಟ್‌ನಲ್ಲಿ, ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದಿದ್ದ ಪ್ರತಿಭಟನೆಗಳನ್ನು ಹತ್ತಿಕ್ಕಲು ಯತ್ನಿಸಿದ್ದಕ್ಕಾಗಿ ಈ ಮೂವರ ವಿರುದ್ಧ ಆರೋಪ ಹೊರಿಸಲಾಗಿದೆ. ತಮ್ಮ ವಿರುದ್ಧ ಭುಗಿಲೆದ್ದಿದ್ದ ಪ್ರತಿಭಟನೆಗಳನ್ನು ಹತ್ತಿಕ್ಕುವುದಕ್ಕಾಗಿ ಸಾಮೂಹಿಕ ಹತ್ಯೆ ಮಾಡಿರುವುದು ಹಾಗೂ ಚಿತ್ರಹಿಂಸೆ ನೀಡಿರುವುದಕ್ಕೆ ಸಂಬಂಧಿಸಿಯೂ ಹಸೀನಾ ವಿರುದ್ಧ ಆರೋಪ ಹೊರಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಮನವಿ ತಿರಸ್ಕಾರ: ವಿಚಾರಣೆ ವೇಳೆ, ಶೇಖ್ ಹಸೀನಾ ಮತ್ತು ಕಮಲ್ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಈ ಇಬ್ಬರ ಪರ ವಕೀಲ ಅಮೀರ್ ಹುಸೇನ್ ಮಾಡಿದ ಮನವಿಯನ್ನು ನ್ಯಾಯಮಂಡಳಿ ತಿರಸ್ಕರಿಸಿತು. ಹುಸೇನ್ ಅವರನ್ನು ಸರ್ಕಾರ ನೇಮಕ ಮಾಡಿದೆ.
‘ನನ್ನ ಕಕ್ಷಿದಾರರ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಮಾಡಿದ ಮನವಿಯನ್ನು ನ್ಯಾಯಮಂಡಳಿ ತಿರಸ್ಕರಿಸಿದೆ. ಆದರೆ, ವಿಚಾರಣೆ ಇನ್ನೂ ಆರಂಭಿಕ ಹಂತದಲ್ಲಿದೆ. ಹೀಗಾಗಿ ಬರುವ ದಿನಗಳಲ್ಲಿ ನಮ್ಮ ಮನವಿಯನ್ನು ಪುರಸ್ಕರಿಸುವ ಭರವಸೆ’ ಎಂದು ಹುಸೇನ್, ಸುದ್ದಿಗಾರರಿಗೆ ತಿಳಿಸಿದರು.
ಕಳೆದ ವರ್ಷ ಜುಲೈ ಮತ್ತು ಆಗಸ್ಟ್‌ನಲ್ಲಿ ಹಸೀನಾ ನೇತೃತ್ವದ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಭಾರಿ ಪ್ರತಿಭಟನೆ ನಡೆಸಿದ್ದರು. ಸರ್ಕಾರವು ಪ್ರತಿಭಟನೆ ಹತ್ತಿಕ್ಕಲು ಪ್ರತಿಭಟನಕಾರರ ವಿರುದ್ಧ ಕಠಿಣ ಕ್ರಮ ಕೈಗೊಂಡ ವೇಳೆ, 1,400 ಜನರು ಮೃತಪಟ್ಟಿದ್ದರು ಎಂದು ವಿಶ್ವಸಂಸ್ಥೆ ಹೇಳಿದೆ.
ನಾನು ತಪ್ಪಿತಸ್ಥ: ಮಾಜಿ ಐಜಿಪಿ ಮಮೂನ್
‘ನ್ಯಾಯಮಂಡಳಿ ಮುಂದೆ ಹಾಜರಾಗಿದ್ದ ಮಾಜಿ ಐಜಿಪಿ ಚೌಧರಿ ಅಬ್ದುಲ್ಲಾ ತಾನು ತಪ್ಪಿತಸ್ಥ ಎಂಬುದಾಗಿ ಒಪ್ಪಿಕೊಂಡಿದ್ದಾರೆ’ ಎಂದು ಮುಹಮ್ಮದ್ ತಜುಲ್ ಇಸ್ಲಾಂ ಸುದ್ದಿಗಾರರಿಗೆ ತಿಳಿಸಿದ್ದಾರೆ. ‘ಕಳೆದ ವರ್ಷ ಶೇಖ್ ಹಸೀನಾ ನೇತೃತ್ವದ ಸರ್ಕಾರದ ವಿರುದ್ಧ ಭುಗಿಲೆದಿದ್ದ ಪ್ರತಿಭಟನೆ ವೇಳೆ ನಡೆದ ಅಪರಾಧ ಕೃತ್ಯಗಳ ಕುರಿತು ತನಗೆ ಸಂಪೂರ್ಣ ಅರಿವಿದೆ. ಮಾಫಿ ಸಾಕ್ಷಿಯಾಗುವ ಮೂಲಕ ವಿಚಾರಣೆಗೆ ನೆರವು ನೀಡುವುದಾಗಿ ಮಮೂನ್ ನ್ಯಾಯಮಂಡಳಿಗೆ ತಿಳಿಸಿದರು’ ಎಂದು ಇಸ್ಲಾಂ ಹೇಳಿದರು. ಆದರೆ ಚೌಧರಿ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಕುರಿತು ನಂತರ ನಿರ್ಧರಿಸಲಾಗುವುದು ಎಂದು ನ್ಯಾಯಮಂಡಳಿ ಹೇಳಿದೆ. ಬಳಿಕ ಮಮೂನ್ ಅವರಿಗೆ ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ ಮಾಡಬೇಕು ಎಂಬ ಮನವಿಗೆ ಒಪ್ಪಿದ ನ್ಯಾಯಮಂಡಳಿ ಅವರ ಭದ್ರತೆಗೆ ಕ್ರಮ ತೆಗೆದುಕೊಳ್ಳುವಂತೆಯೂ ಸೂಚಿಸಿತು.
ಅವಾಮಿ ಲೀಗ್ ಸರ್ಕಾರ ರಚಿಸಿದ್ದ ಐಸಿಟಿ–ಬಿಡಿ
ಅವಾಮಿ ಲೀಗ್ ಪಕ್ಷ ನೇತೃತ್ವದ ಸರ್ಕಾರವು 2010ರಲ್ಲಿ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ(ಐಸಿಟಿ–ಬಿಡಿ) ರಚಿಸಿತ್ತು. 1971ರ ಬಾಂಗ್ಲಾ ವಿಮೋಚನಾ ಯುದ್ಧದ ವೇಳೆ ಪಾಕಿಸ್ತಾನ ಸೇನೆಯೊಂದಿಗೆ ಕೈಜೋಡಿಸಿದವರನ್ನು ವಿಚಾರಣೆಗೆ ಒಳಪಡಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿತ್ತು. ಈಗ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವು ಹಸೀನಾ ಅವರ ವಿರುದ್ಧದ ಆರೋಪಗಳ ವಿಚಾರಣೆಯನ್ನು ಇದೇ ನ್ಯಾಯಮಂಡಳಿ ಮೂಲಕ ನಡೆಸಲು ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.