ಸಿಂಗಪುರ: ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಲಾರೆನ್ಸ್ ವಾಂಗ್ ನೇತೃತ್ವದ ಸಿಂಗಪುರದ ಆಡಳಿತಾರೂಢ ಪಕ್ಷ ಪೀಪಲ್ ಆಕ್ಷನ್ ಪಾರ್ಟಿ(ಪಿಎಪಿ) ಭರ್ಜರಿ ಜಯ ಸಾಧಿಸಿ ಮತ್ತೆ ಅಧಿಕಾರಕ್ಕೆ ಬಂದಿದೆ.
ಶನಿವಾರ ನಡೆದ ಚುನಾವಣೆಯಲ್ಲಿ 97 ಸ್ಥಾನಗಳ ಪೈಕಿ 87 ಸ್ಥಾನಗಳನ್ನು ಪಡೆದ ಆಡಳಿತ ಪಕ್ಷ ಅಧಿಕಾರಕ್ಕೆ ಮರಳಿದೆ. ಪಿಎಪಿ ಶೇ 65.6ರಷ್ಟು ಮತಗಳನ್ನು ಗಳಿಸಿದ್ದು, 2020ಕ್ಕಿಂತ(ಶೇ 61.2) ಮತ ಗಳಿಕೆ ಪ್ರಮಾಣ ಹೆಚ್ಚಾಗಿದೆ ಎಂದು ದಿ ಸ್ಟ್ರೈಟ್ಸ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಪ್ರಬಲ ವಿರೋಧ ಪಕ್ಷ ವರ್ಕರ್ಸ್ ಪಾರ್ಟಿ(ಡಬ್ಲ್ಯುಪಿ) 10 ಸ್ಥಾನ ಮಾತ್ರ ಗೆದ್ದಿದೆ.
ಸರ್ಕಾರದ ಮುಖ್ಯಸ್ಥರಾಗಿ ಮತ್ತು ಪಿಎಪಿ ನಾಯಕರಾಗಿ ಪ್ರಧಾನಿ ವಾಂಗ್ ನೇತೃತ್ವದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಸ್ಪಷ್ಟ ಜನಾದೇಶ ಸಿಕ್ಕಿದೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾಂಗ್, ಸಿಂಗಾಪುರದ ಜನ ಪಿಎಪಿಗೆ ನೀಡಿರುವ ಸ್ಪಷ್ಟ ಮತ್ತು ಪ್ರಬಲ ಜನಾದೇಶವನ್ನು ಅತ್ಯಂತ ವಿನಮ್ರವಾಗಿ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.
ಈ ಫಲಿತಾಂಶವು ಸಿಂಗಪುರದ ಜನ ತಮ್ಮ ಸರ್ಕಾರದ ಮೇಲೆ ಇಟ್ಟಿರುವ ನಂಬಿಕೆ, ಸ್ಥಿರತೆ ಮತ್ತು ವಿಶ್ವಾಸದ ಸ್ಪಷ್ಟ ಸಂಕೇತ ಎಂದು ಬಣ್ಣಿಸಿದ್ದಾರೆ.
ಕೂಡಲೇ ಸಂಪುಟ ರಚನೆ ಮಾಡಲಾಗುತ್ತದೆ. ಆಯ್ಕೆಯಾದ ಎಲ್ಲ ಸಂಸದರಿಗೂ ಧನ್ಯವಾದ. ಸಿಂಗಪುರದ ಜನರ ಸೇವೆಗೆ ಅತ್ಯುತ್ತಮ ತಂಡದ ಆಯ್ಕೆ ಮಾಡುತ್ತೇನ ಎಂದು ವಾಂಗ್ ಹೇಳಿದ್ದಾರೆ.
ಸಿಂಗಪುರದ ಅತ್ಯಂತ ದೊಡ್ಡ ಮತ್ತು ಹಳೆ ಪಕ್ಷವಾದ ಪಿಎಪಿ, 1965ರಲ್ಲಿ ಸ್ವತಂತ್ರ ಬಂದಾಗಿನಿಂದ ದೇಶವನ್ನು ಆಳುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.