ADVERTISEMENT

ಸಿಂಗಪುರ: ಗಡಿ ಬಂದ್ ಮಾಡುವುದರಿಂದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ

ಸಂಸತ್ತಿನಲ್ಲಿ ಆರೋಗ್ಯ ಸಚಿವ ಡಾ. ಕೊಹ್ ಪೊಹ್‌ಕೂನ್

ಪಿಟಿಐ
Published 17 ಫೆಬ್ರುವರಿ 2021, 6:22 IST
Last Updated 17 ಫೆಬ್ರುವರಿ 2021, 6:22 IST
ಕೊಹ್ ಪೂಹ್‌ ಕೂನ್
ಕೊಹ್ ಪೂಹ್‌ ಕೂನ್   

ಸಿಂಗಪುರ: ‘ಕೋವಿಡ್‌ 19‘ ಸಾಂಕ್ರಾಮಿಕದ ಭೀತಿಯಿಂದಾಗಿ ಭಾರತ ಮತ್ತು ಇಂಡೊನೇಷ್ಯಾದ ಪ್ರಯಾಣಿಕರಿಗೆ ಸಿಂಗಪುರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದರೆ ಸಿಂಗಪುರ ಪ್ರಜೆಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಮೇಲೆ ವ್ಯಾಪಕ ಪರಿಣಾಮ ಉಂಟಾಗುತ್ತದೆ ಎಂದು ಮಂಗಳವಾರ ಆರೋಗ್ಯ ಸಚಿವ ಡಾ. ಕೊಹ್ ಪೊಹ್‌ಕೂನ್ ಸಂಸತ್ತಿಗೆ ತಿಳಿಸಿದ್ದಾರೆ.

ಕೋವಿಡ್ 19 ಸಾಂಕ್ರಾಮಿಕ ಭೀತಿಯ ಹಿನ್ನೆಲೆಯಲ್ಲಿ ಭಾರತ ಮತ್ತು ಇಂಡೊನೇಷ್ಯಾ ರಾಷ್ಟ್ರಗಳ ಪ್ರಯಾಣಿಕರ ಸಿಂಗಪುರ ಪ್ರವೇಶಕ್ಕೆ ಏಕೆ ನಿರ್ಬಂಧ ವಿಧಿಸಿಲ್ಲ ಎಂದು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಡಾ. ಕೋಹ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

‘ಭಾರತ ಮತ್ತು ಇಂಡೊನೇಷ್ಯಾ, ನಿರ್ಮಾಣ ಕ್ಷೇತ್ರ ಮತ್ತು ಮನೆ ಕೆಲಸಕ್ಕಾಗಿ ಕಾರ್ಮಿಕರನ್ನು ಪೂರೈಸುವ ಪ್ರಮುಖ ರಾಷ್ಟ್ರಗಳಾಗಿವೆ. ಆ ದೇಶಗಳ ಪ್ರಯಾಣಿಕರಿಗೆ ಸಿಂಗಪುರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದರೆ ಇಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರುತ್ತದೆ‘ ಎಂದು ಕೊಹ್ ತಿಳಿಸಿದ್ದಾರೆ.

ADVERTISEMENT

ಸಿಂಗಪುರದ ನಿವಾಸಿಗಳು ತಮ್ಮ ಮನೆಯ ಹಿರಿಯರು ಮತ್ತು ಮಕ್ಕಳ ಆರೈಕೆಗಾಗಿ ಹೆಚ್ಚಾಗಿ ಈ ರಾಷ್ಟ್ರಗಳ ಪ್ರಜೆಗಳನ್ನೇ ಅವಲಂಬಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಆ ದೇಶಗಳ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಿದರೆ, ಇಲ್ಲಿನ ನಿವಾಸಿಗಳು ಪರ್ಯಾಯವಾಗಿ ವಿದೇಶಿ ನೌಕರರನ್ನು ನೇಮಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ ಎಂದು ವಿವರಿಸಿದ್ದಾರೆ.

‘ಅಲ್ಲದೆ ಈ ಎರಡೂ ರಾಷ್ಟ್ರಗಳ ನಾಗರಿಕರಿಗೆ, ಸಿಂಗಪುರದಲ್ಲಿ ಅವರ ಹತ್ತಿರದ ಸಂಬಂಧಿಗಳಿದ್ದಾರೆ. ಕೆಲವರು ಕಾಯಂ ನಿವಾಸಿಗಳಾಗಿದ್ದಾರೆ. ಇವರೆಲ್ಲರೂ ಪರಸ್ಪರ ಭೇಟಿಯಾಗಲು ಇಲ್ಲಿಗೆ ಬರುತ್ತಾರೆ. ಈ ಎರಡೂ ದೇಶಗಳಿಂದ ಆಮದು ಪ್ರಕ್ರಿಯೆಗಳೂ ನಡೆಯುತ್ತಿವೆ. ಈಗ ಅಂತರರಾಷ್ಟ್ರೀಯ ಗಡಿಗಳನ್ನು ಮುಚ್ಚಿದರೆ, ನಮ್ಮ ದೇಶದ ಆರ್ಥಿಕತೆ, ಜೀವನೋಪಾಯದ ಮೇಲೂ ಪರಿಣಾಮ ಬೀರುತ್ತದೆ‘ ಎಂದು ಅವರು ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.