ADVERTISEMENT

ಮೇ 3ಕ್ಕೆ ಸಿಂಗಪುರ ದೇಶದ ಸಾರ್ವತ್ರಿಕ ಚುನಾವಣೆ ನಿಗದಿ: ಭಾರತೀಯರೂ ಪೈಪೋಟಿ

ಮುಂದಿನ ತಿಂಗಳು ಮೇ 3ಕ್ಕೆ ದಕ್ಷಿಣ ಏಷ್ಯಾದ ಪುಟ್ಟ ಶ್ರೀಮಂತ ದೇಶವಾದ ಸಿಂಗಪುರದ ಸಾರ್ವತ್ರಿಕ ಚುನಾವಣೆ ನಿಗದಿಯಾಗಿದೆ.

ಪಿಟಿಐ
Published 15 ಏಪ್ರಿಲ್ 2025, 9:53 IST
Last Updated 15 ಏಪ್ರಿಲ್ 2025, 9:53 IST
<div class="paragraphs"><p>‘ಪಾರ್ಲಿಮೆಂಟ್ ಆಫ್ ಸಿಂಗಪುರ’</p></div>

‘ಪಾರ್ಲಿಮೆಂಟ್ ಆಫ್ ಸಿಂಗಪುರ’

   

ಸಿಂಗಪುರ: ಮುಂದಿನ ತಿಂಗಳು ಮೇ 3ಕ್ಕೆ ದಕ್ಷಿಣ ಏಷ್ಯಾದ ಪುಟ್ಟ ಶ್ರೀಮಂತ ದೇಶವಾದ ಸಿಂಗಪುರದ ಸಾರ್ವತ್ರಿಕ ಚುನಾವಣೆ ನಿಗದಿಯಾಗಿದೆ.

ಸಿಂಗಪುರ ಪ್ರಧಾನಿ ಲಾರೆನ್ಸ್ ವಾಂಗ್ ಅವರ ಸಲಹೆ ಮೇರೆಗೆ ಇಂದು ಆ ದೇಶದ ಅಧ್ಯಕ್ಷರಾದ ಥಾರ್ಮನ್ ಷಣ್ಮುಗಂ ಅವರು ಸಂಸತ್‌ ಅನ್ನು ವಿಸರ್ಜಿಸಿ ಆದೇಶ ಹೊರಡಿಸಿದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸಾರ್ವತ್ರಿಕ ಚುನಾವಣೆಯನ್ನು ಘೋಷಣೆ ಮಾಡಿದೆ.

ADVERTISEMENT

ಸಿಂಗಪುರದಲ್ಲಿ 15 ನೇ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಇದೇ ಏಪ್ರಿಲ್ 23 ನಾಮಪತ್ರ ಸಲ್ಲಿಸಲು ಕಡೆಯ ದಿನ.

1965 ರಲ್ಲಿ ಸಂಪೂರ್ಣ ಸ್ವಾತಂತ್ರ್ಯ ಘೋಷಿಸಿಕೊಂಡ ಸಿಂಗಪುರ ‘ಪಾರ್ಲಿಮೆಂಟ್ ಆಫ್ ಸಿಂಗಪುರ’ ಎಂಬ ಏಕಶಾಸನಸಭೆಯನ್ನು ಅಳವಡಿಸಿಕೊಂಡಿದೆ. 104 ಸದಸ್ಯ ಬಲವನ್ನು ಸಿಂಗಪುರ ಪಾರ್ಲಿಮೆಂಟ್ ಹೊಂದಿದೆ. 96 ಸ್ಥಾನಗಳಿಗೆ ಮಾತ್ರ ಅಲ್ಲಿ ಐದು ವರ್ಷಕ್ಕೊಮ್ಮೆ ಸಾರ್ವತ್ರಿಕ ಚುನಾವಣೆ ನಡೆಯುತ್ತದೆ.

ಆಡಳಿತಾರೂಢ ಪೀಪಲ್ಸ್‌ ಆಕ್ಷನ್‌ ಪಾರ್ಟಿ (ಪಿಎಪಿ) ಪಕ್ಷವು 2020ರ ಚುನಾವಣೆಯಲ್ಲಿ 83 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿದಿತ್ತು. ಸದ್ಯ ಪಕ್ಷದ ನಾಯಕ ಲಾರೆನ್ಸ್ ವಾಂಗ್ ಅವರು ಪ್ರಧಾನಿಯಾಗಿದ್ದರು.

ಸಿಂಗಪುರ ಸ್ವಾತಂತ್ರ್ಯಗೊಂಡ 1965ರಿಂದಲೂ ಆಡಳಿತದಲ್ಲಿರುವ ಪೀಪಲ್ಸ್ ಆ್ಯಕ್ಷನ್ ಪಕ್ಷ (ಪಿಎಪಿ) ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. 

ಸರ್ಕಾರದ ವಿರುದ್ಧದ ಜನರ ಅತೃಪ್ತಿಯಿಂದಾಗಿ 2020ರಲ್ಲಿ ನಡೆದಿದ್ದ ಚುನಾವಣೆ ವೇಳೆ ಪಿಎಪಿ ಹಿನ್ನಡೆ ಅನುಭವಿಸಿತ್ತು. ಹೀಗಾಗಿ, ಕಳೆದ ವರ್ಷದ ಮೇ ತಿಂಗಳಿನಲ್ಲಿ ದೇಶದ ನಾಲ್ಕನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಲಾರೆನ್ಸ್ ವಾಂಗ್ ಅವರು ಹೆಚ್ಚಿನ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೇರುವ ವಿಶ್ವಾಸ ಹೊಂದಿದ್ದಾರೆ.

ಸಿಂಗಪುರ ಚುನಾವಣೆಯಲ್ಲಿ ಶೇ. 11 ರಷ್ಟಿರುವ ಭಾರತೀಯರೂ ನಿರ್ಣಾಯಕ ಪಾತ್ರವಹಿಸುತ್ತಾರೆ. 2020ರಲ್ಲಿ ಅತಿದೊಡ್ಡ ಪಕ್ಷವಾದ ಲಾರೆನ್ಸ್ ವಾಂಗ್ ಅವರ ಪಿಎಪಿ ಭಾರತ ಮೂಲದ ಒಬ್ಬರಿಗೂ ಟಿಕೆಟ್‌ ನೀಡದೇ ಇದ್ದದ್ದು ಟೀಕೆಗೆ ಗುರಿಯಾಗಿತ್ತು.

ಈ ಸಾರಿಯ ಚುನಾವಣೆಯಲ್ಲಿ ಭಾರತ ಮೂಲದವರಿಗೂ ತಮ್ಮ ಪಕ್ಷದ ಟಿಕೆಟ್‌ ನೀಡಲಾಗುವುದು ಎಂದು ಪ್ರಧಾನಿ ಲಾರೆನ್ಸ್‌ ವಾಂಗ್‌ ಇತ್ತೀಚೆಗೆ ಹೇಳಿದ್ದು ಭಾರತೀಯರಲ್ಲಿ ಟಿಕೆಟ್ ಪಡೆಯಲು ತುರುಸಿನ ಪೈಪೋಟಿಗೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.