ADVERTISEMENT

ಚೀನಾ–ಭಾರತ ಗಡಿ ಪರಿಸ್ಥಿತಿ ಸ್ಥಿರ– ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್‌

ಪಿಟಿಐ
Published 21 ಡಿಸೆಂಬರ್ 2021, 12:24 IST
Last Updated 21 ಡಿಸೆಂಬರ್ 2021, 12:24 IST
ಝಾವೊ ಲಿಜಿಯನ್
ಝಾವೊ ಲಿಜಿಯನ್   

ಬೀಜಿಂಗ್‌: ‘ಭಾರತ ಮತ್ತು ಚೀನಾದ ಗಡಿಯಲ್ಲಿ ಪರಿಸ್ಥಿತಿ ಸಾಮಾನ್ಯವಾಗಿ ಸ್ಥಿರವಾಗಿದೆ. ಪೂರ್ವ ಲಡಾಖ್‌ನಲ್ಲಿನ ಅನಿಶ್ಚಿತತೆ ನಿವಾರಿಸುವ ಕ್ರಮವಾಗಿ ಉಭಯ ಕಡೆಯಿಂದಲೂ ಮಾತುಕತೆಗೆ ಒತ್ತು ನೀಡಲಾಗಿದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಭಾರತ–ಚೀನಾ ಗಡಿಯಲ್ಲಿನ ಪ್ರಸಕ್ತ ಪರಿಸ್ಥಿತಿ ಕುರಿತ ಪ್ರಶ್ನೆಗೆ ಮಂಗಳವಾರ ಈ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್‌ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಸೋಮವಾರ ಹೇಳಿಕೆ ನೀಡಿ, ‘ಗಡಿಭಾಗದ ಕೆಲ ಪ್ರದೇಶಗಳನ್ನು ಚೀನಾ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಿದ್ದು, ಸುಪರ್ದಿಗೆ ಪಡೆದಿದೆ’ ಎಂದಿದ್ದರು.

ADVERTISEMENT

ಇದರ ಹಿಂದೆಯೇಪರಿಸ್ಥಿತಿ ತಿಳಿಗೊಳಿಸಲು ಉಭಯ ಕಡೆಯಿಂದಲೂ ರಾಜತಾಂತ್ರಿಕ, ಸೇನಾ ಹಂತದಲ್ಲಿ ಮಾತುಕತೆ ನಡೆದಿದೆ ಎಂದು ಲಡಾಖ್‌ ಉಲ್ಲೇಖಿಸದೇ ಝಾವೊ ಪ್ರತಿಕ್ರಿಯಿಸಿದರು.

ಉಭಯ ದೇಶಗಳ ಸೇನೆ ನಡುವಣ ಸಂಘರ್ಷದ ಹಿನ್ನೆಲೆಯಲ್ಲಿ ಪೂರ್ವ ಲಡಾಖ್‌ನಲ್ಲಿ ಅನಿಶ್ಚಿತ ಸ್ಥಿತಿ ಮೂಡಿದ್ದು, ಬಾಂಧವ್ಯಕ್ಕೂ ಧಕ್ಕೆಯಾಗಿದೆ. ಕಳೆದ ವರ್ಷ ಮೇ 5ರಂದು ಪಾಂಗಾಂಗ್‌ ಸರೋವರ ಭಾಗದಲ್ಲಿ ಸೇನೆಗಳ ನಡುವೆ ಘರ್ಷಣೆಯಾಗಿ, ಹೆಚ್ಚುವರಿ ಸೇನೆ ನಿಯೋಜಿಸಲಾಗಿತ್ತು.

ಉಭಯ ದೇಶಗಳ ನಡುವಿನ ಸರಣಿ ಮಾತುಕತೆಯ ಹಿನ್ನೆಲೆಯಲ್ಲಿ ಇದೇ ವರ್ಷದ ಆಗಸ್ಟ್‌ನಲ್ಲಿ ಗೋಗ್ರಾ ವಲಯದಿಂದ ಸೇನಾ ತುಕಡಿಗಳನ್ನು ಹಿಂಪಡೆಯುವ ಪ್ರಕ್ರಿಯೆಯೂ ಆರಂಭವಾಗಿತ್ತು.

ಜುಲೈ 31ರಂದು ಉಭಯ ದೇಶಗಳ ನಡುವೆ 12ನೇ ಸುತ್ತಿನ ಮಾತುಕತೆ ನಡೆದಿತ್ತು. ವಿದೇಶಾಂಗ ಸಚಿವರು, ಸಚಿವಾಲಯ, ಸೇನಾ ಕಮಾಂಡರ್‌ ಹಂತದಲ್ಲಿ ಮಾತುಕತೆಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.