ಯೂನ್ ಸುಕ್ ಯೋಲ್
ಸೋಲ್: ದಕ್ಷಿಣ ಕೊರಿಯಾದ ಪದಚ್ಯುತ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ಸಂವಿಧಾನಿಕ ನ್ಯಾಯಾಲಯವು ಶುಕ್ರವಾರ ಅಧಿಕಾರದಿಂದ ತೆಗೆದು ಹಾಕಿದೆ. ಆ ಮೂಲಕ ದೇಶದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ತಲೆದೋರಿದ್ದ ರಾಜಕೀಯ ಅಸ್ಥಿರತೆಗೆ ಕೋರ್ಟ್ ಅಂತ್ಯ ಹಾಡಿದೆ.
2024ರ ಡಿಸೆಂಬರ್ 3ರಂದು ಬೃಹತ್ ರಾಜಕೀಯ ಬಿಕ್ಕಟ್ಟಿಗೆ ಕಾರಣವಾದ ಮಾರ್ಷಲ್ ಲಾ ಹೇರಿಕೆಗೆ ಸಂಬಂಧಿಸಿದಂತೆ ಯೂನ್ ಅವರನ್ನು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ದೋಷಾರೋಪಣೆಗೊಳಪಡಿಸಿ, ಪದಚ್ಯುತಗೊಳಿಸಲಾಗಿತ್ತು. ಆ ಬಳಿಕ ಹಂಗಾಮಿ ಅಧ್ಯಕ್ಷರಾಗಿ ಹಾನ್ ಡಕ್ ಸೂ ಆಯ್ಕೆಯಾಗಿದ್ದರು. ಅವರು ವಿರುದ್ಧವೂ ದೋಷಾರೋಪ ನಿಗದಿಗೊಳಿಸಿ ಪದಚ್ಯುತಗೊಳಿಸುವ ಪ್ರಯತ್ನ ನಡೆದಿತ್ತು. ಆದರೆ ಅದಕ್ಕೆ ಕೋರ್ಟ್ ತಡೆ ನೀಡಿತ್ತು.
ಯೋಲ್ ಅವರ ಪದಚ್ಯುತಿಯನ್ನು ಕೋರ್ಟ್ ಸರ್ವಾನುಮತದಿಂದ ಎತ್ತಿ ಹಿಡಿದಿದೆ. ಹೊಸ ಅಧ್ಯಕ್ಷರ ಆಯ್ಕೆಗೆ ಇನ್ನೆರಡು ತಿಂಗಳಲ್ಲಿ ರಾಷ್ಟ್ರೀಯ ಚುನಾವಣೆ ನಡೆಯಬೇಕಿದೆ. ಸದ್ಯದ ಸಮೀಕ್ಷೆಗಳ ಪ್ರಕಾರ ವಿರೋಧ ಪಕ್ಷ ಡೆಮಾಕ್ರಟಿಕ್ ಪಾರ್ಟಿಯ ಲಿ ಜೆ ಮ್ಯಾಂಗ್ ಅವರು ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ತೀರ್ಪು ಘೋಷಣೆಯಾಗುತ್ತಿದ್ದಂತೆ ಜನರು ಬೀದಿಗಿಳಿದು ಸಂಭ್ರಮಿಸಿದ ದೃಶ್ಯಗಳು ಕಂಡುಬಂದವು. ಡೌನ್‌ಟೌನ್ ಸೋಲ್‌ನಲ್ಲಿರುವ ಅರಮನೆ ಸಮೀಪ ಸೇರಿದ ಜನ ಘೋಷಣೆ ಕೂಗಿ, ನೃತ್ಯ ಮಾಡಿ ಸಂತೋಷ ಹಂಚಿಕೊಂಡರು.
ಭಾರಿ ವಿವಾದಕ್ಕೆ ಕಾರಣವಾದ ಮಾರ್ಷಲ್ ಲಾ ಹೇರಿಕೆ ಬಳಿಕ ನೂರಾರು ಸೈನಿಕರು ಹಾಗೂ ಪೊಲೀಸರನ್ನು ಯೂನ್ ಸಂಸತ್ತಿಗೆ ನುಗ್ಗಿಸಿದ್ದರು. ಸುವ್ಯವಸ್ಥೆ ಕಾಪಾಡಲು ಹೀಗೆ ಮಾಡಿದ್ದಾಗಿ ಯೂನ್ ಹೇಳಿದ್ದರು. ಆದರೆ ತಮ್ಮ ವಿರುದ್ಧ ಮಂಡಿಸಲಾಗಿದ್ದ ದೋಷಾರೋಪ ನಿರ್ಣಯದ ಮತದಾನ ತಡೆಯಲು ಹೀಗೆ ಮಾಡಲು ಹೇಳಿದ್ದರು ಎಂದು ಸೇನೆಯ ಹಿರಿಯ ಅಧಿಕಾರಿ ಬಳಿಕ ತಿಳಿಸಿದ್ದರು.
ಅದಾಗ್ಯೂ ಸಂಸದರು ಮತದಾನ ಮಾಡಿ ಯೂನ್ ಅವರ ಮೇಲೆ ದೋಷಾರೋಪ ನಿಗದಿ ಮಾಡಿದ್ದರು. ಬಳಿಕ ಡಿಸೆಂಬರ್ 14ರಂದು ಸಂಸತ್ತು ಅವರನ್ನು ಪದಚ್ಯುತಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.