ADVERTISEMENT

ಮಿಲಿಟರಿ ಆಡಳಿತ ಹಿಂಪಡೆದ ದಕ್ಷಿಣ ಕೊರಿಯಾ

ಏಜೆನ್ಸೀಸ್
Published 4 ಡಿಸೆಂಬರ್ 2024, 2:24 IST
Last Updated 4 ಡಿಸೆಂಬರ್ 2024, 2:24 IST
<div class="paragraphs"><p>ದಕ್ಷಿಣ ಕೊರಿಯಾದ ಅಧ್ಯಕ್ಷ&nbsp;ಯೂನ್‌ ಸುಕ್‌ ಯೋಲ್‌</p></div>

ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್‌ ಸುಕ್‌ ಯೋಲ್‌

   

-ರಾಯಿಟರ್ಸ್ ಚಿತ್ರ

ಸೋಲ್‌: ದೇಶದ ಮೇಲೆ ಹೇರಿದ್ದ ಮಿಲಿಟರಿ ಆಡಳಿತವನ್ನು ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ನೇತೃತ್ವದ ಸರ್ಕಾರವು ಬುಧವಾರ ನಸುಕಿನಲ್ಲಿ ಹಿಂಪಡೆದಿದೆ. ದೇಶದ ಸಂಸದರು, ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಸಭೆ ಸೇರಿ ಮಿಲಿಟರಿ ಆಡಳಿತವನ್ನು ತಿರಸ್ಕರಿಸುವುದರ ಪರವಾಗಿ ಮತ ಚಲಾಯಿಸಿದ್ದರು.

ADVERTISEMENT

ಇದಾದ ನಂತರದಲ್ಲಿ ಪೊಲೀಸರು ಮತ್ತು ಮಿಲಿಟರಿ ಸಿಬ್ಬಂದಿ ಸಂಸತ್ತಿನಿಂದ ವಾಪಸ್ಸಾದರು. ನಸುಕಿನ 4.30ರ ಸುಮಾರಿಗೆ ಸಭೆ ಸೇರಿದ ಸಂಪುಟವು, ಮಿಲಿಟರಿ ಆಡಳಿತವನ್ನು ಹಿಂಪಡೆಯುವ ಘೋಷಣೆ ಮಾಡಿತು.

ಯೂನ್ ಅವರು, ರಾಷ್ಟ್ರವಿರೋಧಿ ಶಕ್ತಿಗಳನ್ನು ಹೊರಹಾಕುವ ಶಪಥ ಮಾಡಿ, ಮಂಗಳವಾರ ರಾತ್ರಿ ಮಿಲಿಟರಿ ಆಡಳಿತ ಹೇರಿದ್ದರು. ವಿರೋಧ ಪಕ್ಷವು ಕಮ್ಯುನಿಸ್ಟ್ ಉತ್ತರ ಕೊರಿಯಾ ಜೊತೆ ಅನುಕಂಪ ಹೊಂದಿದೆ ಎಂದು ಯೂನ್ ಆರೋಪಿಸಿದ್ದರು.

ಮಿಲಿಟರಿ ಆಡಳಿತ ಹೇರಿದ ಮೂರು ತಾಸಿಗೂ ಮೊದಲೇ ಘೋಷಣೆಯೊಂದನ್ನು ಹೊರಡಿಸಿದ ದೇಶದ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ವೂ ವೊನ್ ಶಿಕ್ ಅವರು, ಮಿಲಿಟರಿ ಆಡಳಿತ ಹೇರಿದ ಕ್ರಮ ಅಸಿಂಧು ಎಂದರು. ದೇಶದ ಶಾಸನ ಸಭೆಯ ಸದಸ್ಯರು ಜನರ ಜೊತೆಯಾಗಿ ನಿಂತು ಪ್ರಜಾತಂತ್ರವನ್ನು ರಕ್ಷಿಸಲಿದ್ದಾರೆ ಎಂದರು.

ಮಿಲಿಟರಿ ಆಡಳಿತ ಹೇರಿದ್ದ ಕ್ರಮವನ್ನು ವಿರೋಧ ಪಕ್ಷ ಹಾಗೂ ಯೂನ್ ಅವರ ಪಕ್ಷದ ನಾಯಕರು ಖಂಡಿಸಿದ್ದರು. ಅಧ್ಯಕ್ಷ ಯೂನ್ ಅವರು ಮಿಲಿಟರಿ ಆಡಳಿತ ಹೇರಿಕೆಯನ್ನು ಅಧಿಕೃತವಾಗಿ ಹಿಂಪಡೆಯುವವರೆಗೆ ತಮ್ಮ ಪಕ್ಷದ ಸಂಸದರು ಅಸೆಂಬ್ಲಿಯ ಪ್ರಧಾನ ಸಭಾಂಗಣದಲ್ಲಿಯೇ ಇರಲಿದ್ದಾರೆ ಎಂದು ಡೆಮಾಕ್ರಟಿಕ್ ಪಕ್ಷದ ನಾಯಕ ಲೀ ಜೆ ಮಯುಂಗ್ ಅವರು ಹೇಳಿದ್ದರು.

ಮತದಾನದ ನಂತರ ಮಿಲಿಟರಿ ಸಿಬ್ಬಂದಿ ಅಸೆಂಬ್ಲಿಯನ್ನು ತೆರವು ಮಾಡಿದ ಕ್ರಮವನ್ನು ಸ್ಪೀಕರ್ ವೂ ಶ್ಲಾಘಿಸಿದ್ದಾರೆ. ಯೂನ್ ಅವರು ಮಿಲಿಟರಿ ಆಡಳಿತ ಹೇರಿದ ನಂತರ ಮಿಲಿಟರಿ ಸಿಬ್ಬಂದಿಯ ಚಲನವಲನವು, ‘ಅವರು ಲೀ, ವೂ ಮತ್ತು ಆಡಳಿತಾರೂಢ ಪೀಪಲ್ ಪವರ್ ಪಕ್ಷದ ನಾಯಕ ಹಾನ್ ಡಾಂಗ್–ಹೂನ್ ಅವರನ್ನು ಬಂಧಿಸಲು ಯತ್ನಿಸುತ್ತಿದ್ದಾರೆ ಎಂಬುದನ್ನು ಸೂಚಿಸುವಂತಿತ್ತು’ ಎಂದು ಡೆಮಾಕ್ರಟಿಕ್ ಪಕ್ಷದ ಸಂಸದ ಜೊ ಸಿಯುಂಗ್–ಲೆ ಆರೋಪಿಸಿದ್ದಾರೆ.

ಅಸೆಂಬ್ಲಿಯ ಎದುರು ಜಮಾಯಿಸಿದ್ದ ನೂರಾರು ಮಂದಿ ಪ್ರತಿಭಟನಕಾರರು, ಯೂನ್ ಅವರನ್ನು ವಾಗ್ದಂಡನೆಗೆ ಗುರಿಪಡಿಸಿ ಪದಚ್ಯುತಗೊಳಿಸಬೇಕು ಎಂದು ಒತ್ತಾಯಿಸಿದರು.

ದಕ್ಷಿಣ ಕೊರಿಯಾದ ಸಂವಿಧಾನದ ಪ್ರಕಾರ, ‘ಯುದ್ಧದ ಸಂದರ್ಭದಲ್ಲಿ, ಯುದ್ಧದಂತಹ ಪರಿಸ್ಥಿತಿ ಇದ್ದಾಗ ಅಥವಾ ಅದಕ್ಕೆ ಹೋಲಿಸಬಹುದಾದ ರಾಷ್ಟ್ರೀಯ ತುರ್ತು ಪರಿಸ್ಥಿತಿ ಇದ್ದಾಗ’ ಮಿಲಿಟರಿ ಆಡಳಿತವನ್ನು ಅಧ್ಯಕ್ಷರು ಜಾರಿಗೊಳಿಸಬಹುದು. ಮಿಲಿಟರಿ ಆಡಳಿತ ಜಾರಿಯಾದಾಗ ಪತ್ರಿಕಾ ಸ್ವಾತಂತ್ರ್ಯ, ನ್ಯಾಯಾಲಯಗಳ ಅಧಿಕಾರವನ್ನು ನಿರ್ಬಂಧಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಬಹುದು.

ಆದರೆ, ರಾಷ್ಟ್ರೀಯ ಅಸೆಂಬ್ಲಿಯು ಮಿಲಿಟರಿ ಆಡಳಿತವನ್ನು ಹಿಂಪಡೆಯಬೇಕು ಎಂದು ಬಹುಮತದೊಂದಿಗೆ ಮತ ಚಲಾಯಿಸಿದರೆ, ಅದನ್ನು ಅಧ್ಯಕ್ಷರು ಒಪ್ಪಲೇಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.