ADVERTISEMENT

ಕಾಗದ ಖರೀದಿಸಲೂ ವಿದೇಶಿ ವಿನಿಮಯ ಇಲ್ಲ: ಶ್ರೀಲಂಕಾದಲ್ಲಿ ಪರೀಕ್ಷೆಗಳು ಮುಂದಕ್ಕೆ

ಏಜೆನ್ಸೀಸ್
Published 19 ಮಾರ್ಚ್ 2022, 10:49 IST
Last Updated 19 ಮಾರ್ಚ್ 2022, 10:49 IST
ಪರೀಕ್ಷೆ
ಪರೀಕ್ಷೆ   

ಕೊಲಂಬೊ: ಶ್ರೀಲಂಕಾದಲ್ಲಿ ಕಾಗದದ ಕೊರತೆಯಿಂದ ಶಾಲಾ ಮಕ್ಕಳ ವಾರ್ಷಿಕ ಪರೀಕ್ಷೆಯನ್ನೇ ಮುಂದೂಡಲಾಗಿರುವ ಘಟನೆ ವರದಿಯಾಗಿದೆ.

ಹೌದು,ಶ್ರೀಲಂಕಾದಲ್ಲಿ 1948 ರ ನಂತರ ಇದೇ ಮೊದಲ ಬಾರಿಗೆಅತಿ ದೊಡ್ಡ ಆರ್ಥಿಕ ಮುಗ್ಗಟ್ಟು ಕಾಣಿಸಿಕೊಂಡಿದ್ದು, ವಿದೇಶಿ ವಿನಿಮಯ ಪಾವತಿ ಕೊರತೆಯಿಂದ ಕಾಗದವನ್ನು ಆಮದು ಮಾಡಿಕೊಳ್ಳಲಾಗುತ್ತಿಲ್ಲ. ಇದರಿಂದ ಪರೀಕ್ಷೆ ಬರೆದು ಮುಂದಿನ ತರಗತಿಗೆ ಹೋಗಬೇಕಿದ್ದ ಲಕ್ಷಾಂತರ ಮಕ್ಕಳು ತೊಂದರೆಗೆ ಸಿಲುಕಿಕೊಂಡಿದ್ದಾರೆ.

ಶ್ರೀಲಂಕಾದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸೋಮವಾರದಿಂದ ವಾರ್ಷಿಕ ಪರೀಕ್ಷೆಗಳನ್ನು ಅಣಿಗೊಳಿಸಿತ್ತು. ಆದರೆ, ಕಾಗದದ ಕೊರತೆಯಿಂದ ಅನಿರ್ದಿಷ್ಟಾವಧಿಯವರಿಗೆ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.

ADVERTISEMENT

ಈ ವರ್ಷ 4.5 ಲಕ್ಷ ಮಕ್ಕಳು ಪರೀಕ್ಷೆ ಬರೆಯಬೇಕಿತ್ತು. ಆದರೆ, ವಿದೇಶದಿಂದ ಕಾಗದವನ್ನು ತರಿಸಿಕೊಳ್ಳಲು ಸರ್ಕಾರದ ಬಳಿ ವಿದೇಶಿ ವಿನಿಮಯ ಇರದಿದ್ದರಿಂದ ಕಾಗದದ ಕೊರತೆಯಾಗಿದೆ ಎಂದು ಸರ್ಕಾರ ಹೇಳಿದೆ.

ಆರ್ಥಿಕ ಮುಗ್ಗಟ್ಟಿನಿಂದ ಶ್ರೀಲಂಕಾಕ್ಕೆ ಆಹಾರ, ತೈಲ, ಔಷಧಿ ಕೊರತೆ ಎದುರಾಗಿದೆ. ಎದುರಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಶ್ರೀಲಂಕಾ ಅಧ್ಯಕ್ಷ ಗೋತಬಯಾ ರಾಜಪಕ್ಷೆ ಅವರು ಅಂತರಾಷ್ಟ್ರೀಯ ಹಣಕಾಸು ನಿಧಿ ಮುಖ್ಯಸ್ಥರ ಜೊತೆ ಬುಧವಾರವಷ್ಟೇ ಮಾತುಕತೆ ನಡೆಸಿದ್ದಾರೆ.

ಶ್ರೀಲಂಕಾಕ್ಕೆ ವಾರ್ಷಿಕವಾಗಿ 6.9 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಬೇಕಾಗುತ್ತದೆ. ಆದರೆ, ಈ ಫೆಬ್ರುವರಿ ಅಂತ್ಯದ ವೇಳೆ 2.3 ಬಿಲಿಯನ್ ಡಾಲರ್ ಮಾತ್ರ ಶ್ರೀಲಂಕಾ ಬಳಿ ವಿದೇಶಿ ವಿನಿಮಯ ಕಂಡು ಬಂದಿದೆ.

ಶ್ರೀಲಂಕಾ ಈ ವರ್ಷದ ಆರಂಭದಲ್ಲಿ ಚೀನಾ ಬಳಿ ಹೆಚ್ಚು ಸಾಲ ನೀಡಲು ಮನವಿ ಮಾಡಿಕೊಂಡಿತ್ತು. ಆದರೆ, ಚೀನಾ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಚೀನಾ ಶ್ರೀಲಂಕಾಕ್ಕೆ ಅತಿಹೆಚ್ಚಿನ ಸಾಲ ನೀಡುವ ರಾಷ್ಟ್ರಗಳಲ್ಲಿ ಮೊದಲನೆಯದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.