ಕೊಲಂಬೊ/ವಾಷಿಂಗ್ಟನ್: ಶ್ರೀಲಂಕಾದಲ್ಲಿ ಉಂಟಾಗಿರುವ ಸಾಂವಿಧಾನಿಕ ಬಿಕ್ಕಟ್ಟು ‘ರಕ್ತಪಾತ’ಕ್ಕೆ ತಿರುಗಬಹುದು ಎಂದು ಸೋಮವಾರ ಎಚ್ಚರಿಕೆ ನೀಡಿರುವ ಉಚ್ಚಾಟಿತ ಪ್ರಧಾನಿ ರನಿಲ್ ವಿಕ್ರಮ್‌ಸಿಂಘೆ, ಆಡಳಿತ ನಡೆಸಲು ಒಬ್ಬರು ನಾಯಕರನ್ನು ಆಯ್ಕೆ ಮಾಡಲು ಸಂಸತ್ತಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಕ್ಕಟ್ಟು ಬಗೆಹರಿಸಲು ಸಂಸತ್ತಿಗೆ ಸಾಂವಿಧಾನಿಕ ಅಧಿಕಾರ ಇದೆ ಎಂದಿರುವ ವಿಕ್ರಮಸಿಂಘೆ, ತಮ್ಮನ್ನು ಉಚ್ಚಾಟನೆಗೊಳಿಸಿದ್ದು ಅಕ್ರಮ ಎಂದಿದ್ದಾರೆ.
‘ಆದ್ದರಿಂದ ತಕ್ಷಣವೇ ಯಾರಿಗೆಬಹುಮತ ಇದೆ ಎಂದು ಸಾಬೀತುಪಡಿಸಲು ಸಂಸತ್ ಅಧಿವೇಶನ ನಡೆಸಬೇಕು ಎಂದು ನಾವು ಹೇಳುತ್ತಿರುವುದು. ಈಗಲೂ ಬಹುಮತ ಇರುವ ಪ್ರಧಾನಿ ನಾನೇ’ ಎಂದು ಅವರು ತಿಳಿಸಿದ್ದಾರೆ.
‘ಈ ಸಂದರ್ಭ ಎಲ್ಲವೂ ಖಾಲಿ ಎನಿಸುತ್ತಿದೆ. ಯಾರೂ ದೇಶದ ಸಂಪೂರ್ಣ ಹೊಣೆ ಹೊತ್ತುಕೊಂಡಿಲ್ಲ’ ಎಂದು ವಿಕ್ರಮಸಿಂಘೆ ಹೇಳಿದ್ದಾರೆ.
ಶುಕ್ರವಾರ ಪ್ರಧಾನಿ ಸ್ಥಾನದಿಂದ ಉಚ್ಛಾಟನೆಗೊಂಡ ನಂತರವೂ ಅವರು ಅಧಿಕೃತ ನಿವಾಸದಲ್ಲಿಯೇ ವಾಸ್ತವ್ಯ ಮುಂದುವರಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗ್ರಹ: ಅಧಿಕಾರದ ಬಿಕ್ಕಟ್ಟು ಕೊನೆಗಾಣಿಸುವ ಸಲುವಾಗಿ,ಮೈತ್ರಿಪಾಲ ಸಿರಿಸೇನ ಅವರು ಸಂಸತ್ತನ್ನು ಅಮಾನತುಗೊಳಿಸಿರುವ ತಮ್ಮ ಕ್ರಮವನ್ನು ಅಮಾನ್ಯವೆಂದು ಘೋಷಿಸಬೇಕೆಂಬ ಆಗ್ರಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೇಳಿಬರುತ್ತಿದ್ದು, ಅಮೆರಿಕ ಸಹ ಇದಕ್ಕೆ ದನಿಗೂಡಿಸಿದೆ.
ತಕ್ಷಣವೇ ಸಂಸತ್ ಅಧಿವೇಶನ ನಡೆಸಬೇಕು ಎಂದು ವಿದೇಶಾಂಗ ಇಲಾಖೆ ವಕ್ತಾರೆ ಹೆದರ್ ನೊವರ್ಟ್ ಆಗ್ರಹಿಸಿದ್ದಾರೆ.‘ಈ ಸಂಬಂಧ ಅಧ್ಯಕ್ಷರು ಹಾಗೂ ಸ್ಪೀಕರ್ ಕ್ರಮ ಕೈಗೊಳ್ಳಬೇಕು.ಜನಪ್ರತಿನಿಧಿಗಳು ತಮ್ಮ ಸರ್ಕಾರ ಮುನ್ನಡೆಸುವನಾಯಕನನ್ನು ಆಯ್ಕೆ ಮಾಡುವ ಹೊಣೆಗಾರಿಕೆ ನಿರ್ವಹಿಸಲು ಅವಕಾಶ ನೀಡಬೇಕು’ ಎಂದು ಹೇಳಿದ್ದಾರೆ.
ಅಧಿಕಾರ ಸ್ವೀಕರಿಸಿದ ರಾಜಪಕ್ಸೆ: ಪ್ರಧಾನಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ರಾಜಪಕ್ಸೆ ಕರ್ತವ್ಯ ಆರಂಭಿಸಿದ್ದಾರೆ. ಕೆಲವು ಸಚಿವರನ್ನು ನೇಮಕಗೊಳಿಸುವ ಸಾಧ್ಯತೆ ಇದೆ.
ರಣತುಂಗ ಬಂಧನ
ಶ್ರೀಲಂಕಾದಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಸಂಬಂಧಪೆಟ್ರೋಲಿಯಂ ಸಚಿವ ಅರ್ಜುನ್ ರಣತುಂಗ ಅವರನ್ನು ಸೋಮವಾರ ಬಂಧಿಸಲಾಗಿದೆ. ರನಿಲ್ ವಿಕ್ರಮಸಿಂಘೆ ಆಪ್ತರಾಗಿರುವ ಅವರನ್ನು ಗುಂಪೊಂದು ಅಪಹರಿಸಲು ಯತ್ನಿಸಿದಾಗ, ಅವರ ಅಂಗರಕ್ಷಕರಲ್ಲಿ ಒಬ್ಬ ಗುಂಡಿನ ದಾಳಿ ನಡೆಸಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.