ADVERTISEMENT

ಬಿಕ್ಕಟ್ಟು ಪರಿಹರಿಸದಿದ್ದರೆ ಅವಿಶ್ವಾಸ ಮಂಡನೆ: ರಾಜಪಕ್ಸಗೆ ವಿಪಕ್ಷಗಳ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 10:58 IST
Last Updated 8 ಏಪ್ರಿಲ್ 2022, 10:58 IST
ಸರ್ಕಾರದ ವಿರುದ್ಧ ಪ್ರತಿಭಟನೆ (ಸಂಗ್ರಹ ಚಿತ್ರ)
ಸರ್ಕಾರದ ವಿರುದ್ಧ ಪ್ರತಿಭಟನೆ (ಸಂಗ್ರಹ ಚಿತ್ರ)   

ಕೊಲೊಂಬೊ:ಗಾರ್ಮೆಂಟ್ಸ್‌, ಟೀ ಮತ್ತು ಇತರ ಕೈಗಾರಿಕೋದ್ಯಮಗಳು ಶ್ರೀಲಂಕಾದಲ್ಲಿ ಈ ವರ್ಷ ರಫ್ತು ಪ್ರಮಾಣ ಶೇ 20–30 ರಷ್ಟು ಕುಸಿಯಲಿದೆ ಎಂದು ಆತಂಕ ವ್ಯಕ್ತಪಡಿಸಿವೆ. ಈ ಹಿನ್ನಲೆಯಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಅಲ್ಲಿನ ವಿರೋಧ ಪಕ್ಷಗಳು,ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವೇ ಅವಿಶ್ವಾಸ ನಿರ್ಣಯ ಮಂಡಿಸಲಾಗುವುದು ಎಂದು ಎಚ್ಚರಿಕೆ ನೀಡಿವೆ.

ತೀವ್ರ ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಇಂಧನ, ವಿದ್ಯುತ್‌, ಆಹಾರ ಮತ್ತು ಔಷಧ ಬಿಕ್ಕಟ್ಟು ಎದುರಾಗಿದೆ. ಸರ್ಕಾರ ಪ್ರತಿಭಟನೆಗಳನ್ನು ಹತ್ತಿಕ್ಕಲು ಎರಡು ದಿನ ಕರ್ಫ್ಯೂ ಹೇರಿರುವುದರ ಹೊರತಾಗಿಯೂ ರಾಷ್ಟ್ರದಾದ್ಯಂತ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಪ್ರತಿಭಟನೆಗಳು ನಡೆಯುತ್ತಿವೆ.

ಬಿಕ್ಕಟ್ಟಿನ ಸನ್ನಿವೇಶದಲ್ಲಿವಿರೋಧ ಪಕ್ಷಗಳನ್ನೂ ಒಳಗೊಂಡಂತೆ ಹೊಸ ಸರ್ಕಾರ ರಚಿಸುವ ಪ್ರಸ್ತಾವವನ್ನು ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ವಿರೋಧ ಪಕ್ಷಗಳ ಮುಂದಿಟ್ಟಿದ್ದರು.‘ರಾಷ್ಟ್ರೀಯ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಎಲ್ಲರೂ ಕೈಜೋಡಿಸಬೇಕು’ ಎಂದು ಅವರು ಮನವಿ ಮಾಡಿದ್ದರು. ಎಲ್ಲರನ್ನೂ ಒಳಗೊಂಡ ರಾಷ್ಟ್ರೀಯ ಸರ್ಕಾರ ರಚಿಸುವ ಸಲುವಾಗಿಸಚಿವ ಸಂಪುಟದ ಎಲ್ಲರೂ ಭಾನುವಾರ ತಡರಾತ್ರಿ ರಾಜೀನಾಮೆ ನೀಡಿದ್ದರು.

ADVERTISEMENT

ಆದರೆ, ಗೊಟಬಯ ಅವರ ಪ್ರಸ್ತಾವವನ್ನುವಿರೋಧ ಪಕ್ಷಗಳು ತಿರಸ್ಕರಿಸಿವೆ. ಎಲ್ಲ ಪಕ್ಷಗಳನ್ನು ಒಳಗೊಂಡ ಒಗ್ಗಟ್ಟಿನ ಸರ್ಕಾರ ರಚನೆಯ ಪ್ರಸ್ತಾವವೇ ಅಸಂಬದ್ಧ. ಅಂತಹ ಸರ್ಕಾರ ರಚನೆಯ ಪ್ರಯತ್ನದ ಬದಲು ರಾಜಪಕ್ಸ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿವೆ.ಇದೀಗ ರಾಜಪಕ್ಸಅವರು ಬೆರಳೆಣಿಕೆಯಷ್ಟು ನಾಯಕರೊಂದಿಗೆ ಆಡಳಿತ ನಡೆಸುತ್ತಿದ್ದಾರೆ

'ಸರ್ಕಾರವು ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಬೇಕಾದ ಅಗತ್ಯವಿದೆ. ಆಡಳಿತ ಸುಧಾರಣೆಗಾಗಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗುವುದು' ಎಂದು 'ಸಮಗಿ ಜನ ಬಲವೆಗಯ' ಮೈತ್ರಿ ಕೂಟದ ನಾಯಕ ಸಾಜಿತ್‌ ಪ್ರೇಮದಾಸ ಅವರು ಸಂಸತ್ತಿನಲ್ಲಿ ಹೇಳಿದ್ದಾರೆ.

'ಸಾಲದಿಂದಾಗಿ ಸೃಷ್ಟಿಯಾಗಿರುವ ಅವ್ಯವಸ್ಥೆಯನ್ನು ಶ್ರೀಲಂಕಾ ನಿಯಂತ್ರಿಸುವುದು ಅತ್ಯಗತ್ಯವಾಗಿದೆ. ಸಾಲದ ಹೊರೆ ಕಡಿಮೆ ಮಾಡಲು ಸರ್ಕಾರ ಕಾರ್ಯಪ್ರವೃತ್ತವಾಗಬೇಕು ಮತ್ತು ಆರ್ಥಿಕತೆಯನ್ನು ಸದೃಢಗೊಳಿಸುವುದಕ್ಕಾಗಿ ಹಣಕಾಸು ಸಲಹೆಗಾರರ ನೇಮಕ ಮಾಡಿಕೊಳ್ಳಬೇಕು' ಎಂದೂ ಸಲಹೆ ನೀಡಿದ್ದಾರೆ.

ಸಂಸತ್ ಸದಸ್ಯರು ಪರಸ್ಪರ ವಾಗ್ದಾಳಿ ನಡೆಸಿದ್ದರಿಂದ ಇಂದು (ಶುಕ್ರವಾರ) ಎರಡು ಬಾರಿ ಕಲಾಪವನ್ನು ಮುಂದೂಡಲಾಗಿದೆ. ಸ್ಪೀಕರ್‌ ಆದೇಶದ ಮೇರೆಗೆ ಇಬ್ಬರು ಸದಸ್ಯರನ್ನು ಸದನದಿಂದ ತಾತ್ಕಾಲಿಕವಾಗಿ ಹೊರಗೆ ಕಳುಹಿಸಲಾಗಿದೆ.

ದೇಶದ ಸುಮಾರು ಶೇ 5ರಷ್ಟು ಜನರಿಗೆ ಉದ್ಯೋಗ ಕಲ್ಪಿಸಿರುವ ಸುಮಾರು 20ಕ್ಕೂ ಹೆಚ್ಚು ಉದ್ಯಮ ಸಂಘಟನೆಗಳು, ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌), ವಿಶ್ವ ಬ್ಯಾಂಕ್ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನಿಂದ (ಎಡಿಬಿ) ಸಾಲ ಪಡೆಯಬೇಕು ಎಂದು ಒತ್ತಾಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.