ADVERTISEMENT

ಲಂಕಾ: ವಾರದಲ್ಲಿ ಹೊಸ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 11 ಮೇ 2022, 20:52 IST
Last Updated 11 ಮೇ 2022, 20:52 IST
   

ಕೊಲಂಬೊ: ‘ಇದೇ ವಾರದೊಳಗೆ ದೇಶಕ್ಕೆ ಹೊಸ ಪ್ರಧಾನಿ ನೇಮಿಸಿ, ಸಚಿವ ಸಂಪುಟ ರಚಿಸಲಾಗುವುದು’ ಎಂದು ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಷ ಬುಧವಾರ ತಿಳಿಸಿದ್ದಾರೆ.

ದೇಶದ ಜನತೆಯುನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಸತ್ತಿಗೆ ಹೆಚ್ಚಿನ ಅಧಿಕಾರ ನೀಡಲು ಸಂವಿಧಾನಕ್ಕೆ ತಿದ್ದುಪಡಿ ತರಲಾಗುವುದು ಎಂದು ಹೇಳಿದ್ದಾರೆ.

‘ದೇಶದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸವಾಲುಗಳನ್ನು ಎದುರಿಸಲು ಶ್ರೀಲಂಕಾದ ಜನತೆ ಕೈಜೋಡಿಸಬೇಕು. ಸಂಯಮ, ಸಹನೆ ಮತ್ತು ಸಹಬಾಳ್ವೆ ಪ್ರೋತ್ಸಾಹಿಸುವುದುಅತ್ಯಗತ್ಯವಾಗಿದೆ’ ಎಂದು ಅವರು ಟ್ವಿಟರ್‌ನಲ್ಲೂ ಕರೆ ನೀಡಿದ್ದಾರೆ.

ADVERTISEMENT

ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸ ಅವರ ರಾಜೀನಾಮೆ ನೀಡಿದ ಬಳಿಕ ಉಂಟಾಗಿರುವ ರಾಜಕೀಯ ಅಸ್ಥಿರತೆ ಕೊನೆಗೊಳಿಸಲು ಅಧ್ಯಕ್ಷ ಗೊಟಬಯ ಅವರು ಆಡಳಿತಾರೂಢ ಪಕ್ಷದ ಭಿನ್ನಮತೀಯರು ಮತ್ತು ಪ್ರಮುಖ ವಿರೋಧ ಪಕ್ಷ ಎಸ್‌ಜೆಬಿ ನಾಯಕರ ಜೊತೆಯೂ ಮಾತುಕತೆ ನಡೆಸಿದರು.

‘ಹೊಸ ಪ್ರಧಾನಿ ನೇಮಕಕ್ಕೆ 2 ದಿನಗಳಿಂದ ಮಾತುಕತೆ ನಡೆಯುತ್ತಿದೆ. ರಾಜಕೀಯ ಅಸ್ಥಿರತೆ ಶೀಘ್ರ ಅಂತ್ಯವಾಗಲಿದೆ’ ಎಂದು ಆಡಳಿತಾರೂಢ ಎಸ್ಎಲ್‌ಪಿಪಿಯ ಮೈತ್ರಿ ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

ಕೇಂದ್ರ ಬ್ಯಾಂಕ್‌ ಮುಖ್ಯಸ್ಥರಿಂದ ರಾಜೀನಾಮೆ ಬೆದರಿಕೆ: 1948ರಲ್ಲಿ ಸ್ವತಂತ್ರಗೊಂಡ ನಂತರ ದ್ವೀಪ ರಾಷ್ಟ್ರ ತೀವ್ರ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಸ್ಥಿರತೆ ತರಲು ರಾಜಕೀಯ ನಾಯಕರು ವಿಫಲವಾದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶ್ರೀಲಂಕಾ ಕೇಂದ್ರ ಬ್ಯಾಂಕ್‌ ಮುಖ್ಯಸ್ಥ ನಂದಾಲಾಲ್‌ ವೀರಸಿಂಘೆ ಬುಧವಾರ ಬೆದರಿಕೆ ಹಾಕಿದ್ದಾರೆ.

ಕ್ಷಿಪ್ರಕ್ರಾಂತಿ ಅಲ್ಲಗಳೆದ ಸೇನೆ: ‘ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸಲು ಸಾವಿರಾರು ಯೋಧರನ್ನು ನಿಯೋಜಿಸಲಾಗಿದೆ. ಸೇನಾ ಕ್ಷಿಪ್ರಕ್ರಾಂತಿ ನಡೆದಿಲ್ಲ. ಮುನ್ನೆಚ್ಚರಿಕೆ ವಹಿಸಲು ಸೇನೆಗೆ ಅಧಿಕಾರ ನೀಡಲಾಗಿದೆ. ಅಧಿಕಾರ ವಶಕ್ಕೆ ಯತ್ನಿಸುತ್ತಿಲ್ಲ’ಎಂದು ಶ್ರೀಲಂಕಾದ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಕಮಲ್ ಗುಣರತ್ನೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಆಕ್ರೋಶಭರಿತರಿಂದ ಹಿಂಸಾಚಾರ, ಗಲಭೆ ನಡೆಸಿ, ಸೇನಾ ಆಡಳಿತ ಹೇರಲು ಯತ್ನಿಸಲಾಗುತ್ತಿದೆ’ ಎಂದು ವಿರೋಧ ಪಕ್ಷದ ನಾಯಕ ಸಜಿತ್‌ ಪ್ರೇಮದಾಸ ಟ್ವಿಟ್‌ ಮಾಡಿದ್ದಾರೆ.

ರಾಜಪಕ್ಸಗೆ ಸೇನೆ ರಕ್ಷಣೆ: ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಹಾಗೂ ಅವರ ಸಹವರ್ತಿಗಳು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂಬ ಊಹಾಪೋಹಗಳ ಬೆನ್ನಲ್ಲೇ,ಮಹಿಂದಾ ರಾಜಪಕ್ಸ ಅವರಿಗೆ ಇಲ್ಲಿನ ಟ್ರಿಂಕಮಾಲಿ ನೌಕಾನೆಲೆಯಲ್ಲಿ ಭದ್ರತೆ ನೀಡಲಾಗಿದೆ ಎಂದು ರಕ್ಷಣಾ ಕಾರ್ಯದರ್ಶಿ ಕಮಲ್ ಗುಣರತ್ನೆ ಹೇಳಿದ್ದಾರೆ.

ಪ್ರತಿಭಟನಕಾರರ ಮೇಲಿನ ದಾಳಿಗೆ ಪ್ರಚೋದಿಸಿದ ಆರೋಪದಲ್ಲಿ ಮಹಿಂದಾ ಅವರ ಬಂಧನಕ್ಕೆ ವಿರೋಧ ಪಕ್ಷಗಳು ಒತ್ತಾಯಿಸಿವೆ. ಪ್ರತಿಭಟನೆಯಲ್ಲಿ 8 ಜನರು ಮೃತಪಟ್ಟು, ಗಾಯಗೊಂಡ ಘಟನೆ ಬಗ್ಗೆ ಮಹಿಂದಾ ಅವರ ಮುಖ್ಯ ಭದ್ರತಾ ಅಧಿಕಾರಿ ವಿರುದ್ಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.