ADVERTISEMENT

ರಾಜಪಕ್ಸೆ ಅರಮನೆಯಲ್ಲಿ ಪ್ರತಿಭಟನಾಕಾರರ ಊಟ, ವಾಸ್ತವ್ಯ: ಜಿಮ್‌, ಈಜುಕೊಳ ಬಳಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜುಲೈ 2022, 14:44 IST
Last Updated 10 ಜುಲೈ 2022, 14:44 IST
ರಾಜಪಕ್ಸೆ ಅರಮನೆಯಲ್ಲಿ ಫೋಟೊ ತೆಗೆದುಕೊಳ್ಳುತ್ತಿರುವ ಪ್ರತಿಭಟನಾಕಾರರು
ರಾಜಪಕ್ಸೆ ಅರಮನೆಯಲ್ಲಿ ಫೋಟೊ ತೆಗೆದುಕೊಳ್ಳುತ್ತಿರುವ ಪ್ರತಿಭಟನಾಕಾರರು   

ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಶ್ರೀಲಂಕಾದಲ್ಲಿ ಪ್ರತಿಭಟನೆಗಳು ಮುಂದುವರಿದಿವೆ. ಇದೇ ವೇಳೆ, ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಭವ್ಯ ಅರಮನೆಗೆ ಪ್ರತಿಭಟನಾಕಾರರು ನುಗ್ಗಿದ್ದಾರೆ.

ಐಷಾರಾಮಿ ಅರಮನೆಯೊಳಗಿರುವ ನೂರಾರು ಪ್ರತಿಭಟನಾಕಾರರು ಜಿಮ್‌, ಈಜುಕೊಳ ಹಾಗೂ ಬೆಡ್‌ರೂಮ್‌ಗಳನ್ನು ಬಳಸಿ ಸಂಭ್ರಮಿಸುತ್ತಿದ್ದಾರೆ. ಇದನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಸುದ್ದಿಸಂಸ್ಥೆ ‘ಎಎನ್‌ಐ’ ಹಂಚಿಕೊಂಡ ವಿಡಿಯೊದಲ್ಲಿ, ಸ್ಥಳೀಯ ನಿವಾಸಿಯೊಬ್ಬರು ತಮ್ಮ ಕುಟುಂಬದೊಂದಿಗೆ ಬಂಗಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.

ADVERTISEMENT

‘ದೇಶವು ಭ್ರಷ್ಟಾಚಾರ ಮುಕ್ತವಾಗಿದೆ. ಎಲ್ಲವೂ ಶಾಂತಿಯುತವಾಗಿದೆ. ಇದನ್ನು ಆಚರಿಸಲು ಕುಟುಂಬದೊಂದಿಗೆ ಇಲ್ಲಿಗೆ ಬಂದಿದ್ದೇನೆ. ನಾವೆಲ್ಲರೂ ಭವನದಲ್ಲಿಯೇ ಊಟ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

‘ನನ್ನ ಮಕ್ಕಳೊಂದಿಗೆ ಇಲ್ಲಿಗೆ ಬಂದು ಊಟ ಮಾಡಲು ನನಗೆ ಅವಕಾಶ ಸಿಕ್ಕಿತು. ರಾಷ್ಟ್ರಪತಿ ಭವನದಲ್ಲಿ ಊಟವೆಂದರೆ, ಅದು ರಾಜಮನೆತನದ ಊಟ’ ಎಂಬುದಾಗಿ ಅವರು ಹೇಳಿದ್ದಾರೆ.

‘ಅವರು(ಗೊಟಬಯ) ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು. ಮಿಲಿಟರಿ ಪಡೆಗಳನ್ನು ಬಳಸಿಕೊಂಡು ಅಧಿಕಾರದಲ್ಲಿದ್ದರು. ಯುವಕರು ಈ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದಾರೆ' ಎಂದು ಮತ್ತೊಬ್ಬ ಪ್ರತಿಭಟನಾಕಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರ ಆಕ್ರೋಶಕ್ಕೆ ಗುರಿಯಾಗಿ ಪಲಾಯನ ಮಾಡಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ ಎಲ್ಲಿಗೆ ತೆರಳಿದ್ದಾರೆ ಎಂಬುದು ಇನ್ನೂ ನಿಗೂಢವಾಗಿ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.