ADVERTISEMENT

ಶ್ರೀಲಂಕಾ: ರಾಜಪಕ್ಸ ವಜಾಕ್ಕೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

ಪಿಟಿಐ
Published 28 ಏಪ್ರಿಲ್ 2022, 13:44 IST
Last Updated 28 ಏಪ್ರಿಲ್ 2022, 13:44 IST
ಅಧ್ಯಕ್ಷ ಗೋಟಬಯ ರಾಜಪಕ್ಸ ಮತ್ತು ಪ್ರಧಾನಿ ಮಹಿಂದ ರಾಜಪಕ್ಸ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ಗುರುವಾರ ಕೊಲಂಬೊದಲ್ಲಿ ಪ್ರತಿಭಟನೆ ನಡೆಯಿತು –ಎಪಿ/ಎಎಫ್‌ಪಿ ಚಿತ್ರ
ಅಧ್ಯಕ್ಷ ಗೋಟಬಯ ರಾಜಪಕ್ಸ ಮತ್ತು ಪ್ರಧಾನಿ ಮಹಿಂದ ರಾಜಪಕ್ಸ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ಗುರುವಾರ ಕೊಲಂಬೊದಲ್ಲಿ ಪ್ರತಿಭಟನೆ ನಡೆಯಿತು –ಎಪಿ/ಎಎಫ್‌ಪಿ ಚಿತ್ರ   

ಕೊಲಂಬೊ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ವಿಫಲರಾಗಿರುವ ಅಧ್ಯಕ್ಷ ಗೋಟಬಯ ರಾಜಪಕ್ಸ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಸ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ 1,000 ಕಾರ್ಮಿಕ ಸಂಘಟನೆಗಳು ಗುರುವಾರ ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದವು.

ಆರೋಗ್ಯ, ಬಂದರು, ವಿದ್ಯುತ್‌, ಶಿಕ್ಷಣ, ಅಂಚೆ ಸೇರಿದಂತೆ ಹಲವು ವಲಯಗಳ ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಂಡಿವೆ.

‘ಜನರು ಬೀದಿಗಿಳಿದು ಹೋರಾಟ ನಡೆಸಿದರೂ ರಾಜಪಕ್ಸ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಅಂಟಿಕೊಂಡಿದೆ’ ಎಂದು ಶಿಕ್ಷಕರ ಸಂಘಟನೆಯ ವಕ್ತಾರ ಜೋಸೆಫ್‌ ಸ್ಟಾಲಿನ್‌ ಹೇಳಿದ್ದಾರೆ. ಮುಷ್ಕರದ ಪರಿಣಾಮ ಹಲವು ಮಾರುಕಟ್ಟೆಗಳು ಬಿಕೊ ಅನ್ನುತ್ತಿದ್ದವು.

ADVERTISEMENT

ಸಾರಿಗೆ ಬಸ್‌ಗಳಿಗೆ ಹಾನಿಯುಂಟು ಮಾಡುವವರನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ದಿಲುಮ್ ಅಮುನುಗಮ ಹೇಳಿದ್ದಾರೆ.

ಮುಷ್ಕರದಲ್ಲಿ ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರಿಂದ ಕೊಲಂಬೊದಲ್ಲಿ ಹಲವು ಶಾಲೆಗಳು ಮುಚ್ಚಿದ್ದವು. ರೈಲು ಚಾಲಕರು ಭಾಗಿಯಾಗಿದ್ದರಿಂದ ರೈಲು ಸಂಚಾರ ಕೂಡ ವ್ಯತ್ಯಯಗೊಂಡಿತು.

ಅಧ್ಯಕ್ಷರ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ನೌಕರರು ಕಪ್ಪು ಬಾವುಟ ಹಿಡಿದು ಪಾಲ್ಗೊಂಡಿದ್ದರು.

‘ಈ ಸರ್ಕಾರವು ನಮ್ಮ ದೇಶವನ್ನು ಹಾಳು ಮಾಡಿದೆ. ದಿನದಿಂದ ದಿನಕ್ಕೆ ವೆಚ್ಚಗಳು ಹೆಚ್ಚಾಗುತ್ತಿವೆ. ವ್ಯಾಪಾರ ಸಂಸ್ಥೆಗಳು ಮುಚ್ಚುತ್ತಿವೆ. ಜನರಿಗೆ ಬದುಕಲು ದಾರಿ ಇಲ್ಲದಂತಾಗಿದೆ. ವಿದ್ಯುತ್‌ ಇಲ್ಲ, ಅಡುಗೆ ಮಾಡಲು ಅಡುಗೆ ಅನಿಲ ಇಲ್ಲ’ ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಉದ್ಯೋಗಿ ಸಮಂತಿ ಏಕನಾಯಕೆ ಹೇಳಿದ್ದಾರೆ.

ಅಧ್ಯಕ್ಷರು ರಾಜೀನಾಮೆ ನೀಡದಿದ್ದರೆ ಮೇ 6ರಿಂದ ಮುಷ್ಕರ ಮುಂದುವರಿಸುವುದಾಗಿ ಕಾರ್ಮಿಕ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಹಣಕಾಸು ಬಿಕ್ಕಟ್ಟಿನ ಪರಿಣಾಮ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಜೊತೆಗೆ ಇಂಧನ, ಔಷಧ, ಆಹಾರ ಪದಾರ್ಥಗಳ ಕೊರತೆ ಉಂಟಾಗಿದೆ. 1948ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ ಶ್ರೀಲಂಕಾ ಮೊದಲ ಬಾರಿಗೆ ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.