ADVERTISEMENT

ಶ್ರೀಲಂಕಾ: ತುರ್ತು ಪರಿಸ್ಥಿತಿ ನಡುವೆಯೇ ಪ್ರಧಾನಿ ಕಚೇರಿ ವಶಕ್ಕೆ ಪಡೆದ ನಾಗರಿಕರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜುಲೈ 2022, 10:41 IST
Last Updated 13 ಜುಲೈ 2022, 10:41 IST
ಕೊಲಂಬೊದಲ್ಲಿನ ಪ್ರಧಾನಿ ಕಚೇರಿಯನ್ನು ವಶಕ್ಕೆ ಪಡೆದಿರುವ ಪ್ರತಿಭಟನಾಕಾರರು
ಕೊಲಂಬೊದಲ್ಲಿನ ಪ್ರಧಾನಿ ಕಚೇರಿಯನ್ನು ವಶಕ್ಕೆ ಪಡೆದಿರುವ ಪ್ರತಿಭಟನಾಕಾರರು   

ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಶ್ರೀಲಂಕಾದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರಿದಿವೆ.

ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಲ್ಡೀವ್ಸ್‌ಗೆ ಪಲಾಯನಗೈದ ವಿಚಾರ ತಿಳಿಯುತ್ತಿದ್ದಂತೆ ಕೊಲಂಬೊದಲ್ಲಿ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ.

ತುರ್ತು ಪರಿಸ್ಥಿತಿಯನ್ನೂ ಲೆಕ್ಕಿಸದೇ ಶ್ರೀಲಂಕಾದ ಪ್ರಧಾನಿಕಚೇರಿಗೆ ಸಾವಿರಾರು ಪ್ರತಿಭಟನಾಕಾರರು ನುಗ್ಗಿದ್ದಾರೆ. ಭದ್ರತಾ ಪಡೆಗಳ ವಿರುದ್ಧ ಕಾದಾಟ ನಡೆಸಿದ ನಂತರ ಪ್ರಧಾನಿ ಕಚೇರಿಯನ್ನು ಪ್ರತಿಭಟನಾಕಾರರು ವಶಕ್ಕೆ ಪಡೆದುಕೊಂಡಿದ್ದಾರೆ.

ಶ್ರೀಲಂಕಾದ ಪ್ರಧಾನಿಯಾಗಿದ್ದ ಮಹಿಂದಾ ರಾಜಪಕ್ಸ ಅವರು ಮೇ ತಿಂಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆ ನಂತರ, ವಿರೋಧ ಪಕ್ಷದ ನಾಯಕ ರಾನಿಲ್ ವಿಕ್ರಮಸಿಂಘೆ ಅವರು ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈಗ ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

ADVERTISEMENT

ಸರ್ಕಾರದ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಶ್ರೀಲಂಕಾದಾದ್ಯಂತ ತುರ್ತು ಪರಿಸ್ಥಿತಿಯನ್ನು ವಿಕ್ರಮಸಿಂಘೆ ಘೋಷಿಸಿದ್ದಾರೆ. ಈ ನಿಲುವನ್ನು ಪ್ರತಿಪಕ್ಷಗಳ ನಾಯಕರು ವಿರೋಧಿಸಿದ್ದಾರೆ. ಅಧ್ಯಕ್ಷರು ರಾಜೀನಾಮೆ ನೀಡಲೇಬೇಕೆಂದು ಶ್ರೀಲಂಕಾ ನಾಗರಿಕರು ಒತ್ತಾಯಿಸುತ್ತಿದ್ದಾರೆ.

ಇದೇ ವೇಳೆ, ಮಾಲ್ಡೀವ್ಸ್‌ಗೆ ಪಲಾಯನಗೈದಿರುವ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಇಂದು ರಾಜೀನಾಮೆ ನೀಡುವುದಾಗಿ ಸಂಸತ್ತಿನ ಸ್ಪೀಕರ್‌ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.