ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್/ವಾಷಿಂಗ್ಟನ್ : ‘ಭಾರತ–ಪಾಕ್ ಯುದ್ಧವನ್ನು ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿಶ್ವದ ಏಳು ಯುದ್ಧಗಳನ್ನು ಕೊನೆಗೊಳಿಸಿದ್ದಕ್ಕಾಗಿ ನನಗೆ ನೋಬಲ್ ಶಾಂತಿ ಪ್ರಶಸ್ತಿ ಸಿಗಬೇಕು’ ಎಂದು ಪ್ರತಿಪಾದಿಸಿದ್ದಾರೆ.
‘ಭಾರತ–ಪಾಕ್ ಎರಡೂ ದೇಶಗಳ ಮುಖಂಡರನ್ನು ನಾನು ಗೌರವಿಸುತ್ತೇನೆ. ಈ ಎರಡೂ ದೇಶಗಳಿಗೆ ಮುಖ್ಯವಾಗಿ ವ್ಯಾಪಾರ ಬೇಕಾಗಿದೆ. ನಾನು ವ್ಯಾಪಾರದ ಮೂಲಕವೇ ಎರಡು ದೇಶಗಳ ನಡುವಿನ ಸಂಘರ್ಷಕ್ಕೆ ತೆರೆ ಎಳೆದೆ’ ಎಂದು ಟ್ರಂಪ್ ಶನಿವಾರ ಇಲ್ಲಿ ನಡೆದ ಅಮೆರಿಕದ ಕಾರ್ನರ್‌ಸ್ಟೋನ್ ಸಂಸ್ಥೆಯ ಸಂಸ್ಥಾಪಕರ ಭೋಜನ ಕೂಟದಲ್ಲಿ ಹೇಳಿದರು.
‘ನೋಡಿ, ಪಾಕ್ ಬಳಿ ಅಣ್ವಸ್ತ್ರ ಇದೆ. ನೀವು ಅವರೊಂದಿಗೆ ಯುದ್ಧ ಮಾಡಲು ಹೋದರೆ, ನಾನು ನಿಮ್ಮೊಂದಿಗೆ ವ್ಯಾಪಾರ ಮಾಡುವುದಿಲ್ಲ ಎಂದು ನಾನು ಭಾರತಕ್ಕೆ ಹೇಳಿದೆ. ತಕ್ಷಣವೇ ಭಾರತ ಕದನ ವಿರಾಮ ಘೋಷಿಸಿತು’ ಎಂದು ಟ್ರಂಪ್ ಹೇಳಿದ್ದಾರೆ.
‘ಭಾರತ–ಪಾಕ್ ಮಾತ್ರವಲ್ಲ, ಥಾಯ್ಲೆಂಡ್ – ಕಾಂಬೋಡಿಯಾ, ರುವಾಂಡ – ಕಾಂಗೊ ಗಣರಾಜ್ಯ ಸೇರಿ 7 ಯುದ್ಧಗಳನ್ನು ಕೊನೆಗೊಳಿಸಿದ್ದೇನೆ. ಇದರಲ್ಲಿ ಶೇ 60ರಷ್ಟು ಯುದ್ಧಗಳು ‘ವ್ಯಾಪಾರ’ದ ಕಾರಣಕ್ಕಾಗಿಯೇ ಕೊನೆಗೊಂಡವು ಎನ್ನುವುದು ಗಮನೀಯ’ ಎಂದು ಅವರು ಹೇಳಿದರು.
‘ಜಾಗತಿಕ ವೇದಿಕೆಯಲ್ಲಿ ಈಗ ಅಮೆರಿಕಕ್ಕೆ ಹಿಂದೆಂದಿಗಿಂತಲೂ ಅತ್ಯುನ್ನತ ಗೌರವ ಲಭಿಸುತ್ತಿದೆ. ಈ ಕಾರಣದಿಂದಲೇ ನಾವು ಯುದ್ಧಗಳನ್ನು ಕೊನೆಗಾಣಿಸಲು ಶಾಂತಿ ಮಾತುಕತೆಗೆ ಪ್ರಯತ್ನಿಸುತ್ತಿದ್ದೇವೆ’ ಎಂದು ಟ್ರಂಪ್ ಹೇಳಿದ್ದಾರೆ.
ಮೇ 10ರಿಂದ ಇದುವರೆಗೆ ಟ್ರಂಪ್ 40 ಬಾರಿ ಭಾರತ–ಪಾಕ್ ಕದನ ವಿರಾಮ ಘೋಷಣೆಗೆ ತಾವೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಆದರೆ, ಕದನ ವಿರಾಮ ಘೋಷಣೆಯಲ್ಲಿ ಮೂರನೆಯ ವ್ಯಕ್ತಿ/ದೇಶದ ಮಧ್ಯಸ್ಥಿಕೆಯನ್ನು ಭಾರತವು ಸತತವಾಗಿ ಅಲ್ಲಗಳೆದಿದೆ.
ಭಾರತ– ಪಾಕಿಸ್ತಾನ, ಥೈಲ್ಯಾಂಡ್–ಕಾಂಬೋಡಿಯಾ, ಅರ್ಮೇನಿಯಾ–ಅಜರ್‌ಬೈಜಾನ್, ಕೊಸೊವೊ–ಸರ್ಬಿಯಾ, ಇಸ್ರೇಲ್–ಇರಾನ್, ಈಜಿಪ್ಟ್–ಇಥಿಯೋಪಿಯಾ, ಕಾಂಗೊ ಗಣರಾಜ್ಯ– ರುವಾಂಡಾ ಸೇರಿ ಒಟ್ಟು 7 ಯುದ್ಧಗಳನ್ನು ನಿಲ್ಲಿಸಿದ್ದೇವೆ. ಅವುಗಳಲ್ಲಿ ಶೇ 60ರಷ್ಟು ವ್ಯಾಪಾರದ ಕಾರಣವೊಡ್ಡಿ ನಿಲ್ಲಿಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.