ADVERTISEMENT

ಸುಡಾನ್‌: ಸರ್ಕಾರ ವಿಸರ್ಜಿಸಿದ ಸೇನಾಡಳಿತ, ಬಡ ರಾಷ್ಟ್ರದ ಮುಂದಿನ ಪಾಡೇನು?

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 12:22 IST
Last Updated 25 ಅಕ್ಟೋಬರ್ 2021, 12:22 IST
ಸುಡಾನ್‌ನಲ್ಲಿ ಸಾರ್ವಜನಿಕರ ಪ್ರತಿಭಟನೆ
ಸುಡಾನ್‌ನಲ್ಲಿ ಸಾರ್ವಜನಿಕರ ಪ್ರತಿಭಟನೆ   

ಖಾರ್ಟುಮ್‌: ಸುಡಾನ್‌ನಲ್ಲಿ ಸೇನೆಯು ದೇಶದ ಹಂಗಾಮಿ ಸರ್ಕಾರವನ್ನು ವಿಸರ್ಜಿಸಿದ್ದು, ಸಂಪುಟದ ಹಲವು ಸದಸ್ಯರನ್ನು ಸೋಮವಾರ ಬಂಧಿಸಿದೆ. ಅದನ್ನು ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದು, ಗುಂಡಿನ ದಾಳಿ ಆಗಿರುವುದು ಹಾಗೂ ಗಾಯಗೊಂಡಿರುವುದು ವರದಿಯಾಗಿದೆ.

ಸುಡಾನ್‌ ಸೇನಾ ಮುಖ್ಯಸ್ಥ ಅಬ್ದೆಲ್‌ ಫತಾಹ್‌ ಅಲ್‌–ಬುರ್ಹಾನ್‌ ಅವರು ದೇಶದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಹಾಗೂ ಹಂಗಾಮಿ ಸರ್ಕಾರ ಮತ್ತು ಕೌನ್ಸಿಲ್‌ ವಿಸರ್ಜಿಸಿರುವುದಾಗಿ ಪ್ರಕಟಿಸಿದ್ದಾರೆ.

ಸೇನಾ ಕ್ಷಿಪ್ರಕ್ರಾಂತಿಗೆ ಬೆಂಬಲ ಸೂಚಿಸಿ ಪ್ರಕಟಣೆ ಹೊರಡಿಸಲು ನಿರಾಕರಿಸಿದ ಪ್ರಧಾನ ಮಂತ್ರಿ ಅಬ್ದುಲ್ಲಾ ಹಮ್ಡೋಕ್‌ ಅವರನ್ನು ವಶಕ್ಕೆ ಪಡೆದು, ನಿಗೂಢ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಮಾಹಿತಿ ಸಚಿವಾಲಯವು ಹೇಳಿದೆ. ಮಾಹಿತಿ ಸಚಿವಾಲಯವು ಈವರೆಗೂ ಪ್ರಧಾನಿ ಬೆಂಬಲಿಗರ ನಿಯಂತ್ರಣದಲ್ಲಿದೆ.

ADVERTISEMENT

ಸೇನಾ ದಂಗೆಯನ್ನು ವಿರೋಧಿಸಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದು, ರಾಜಧಾನಿ ಖಾರ್ಟುಮ್‌ನಲ್ಲಿ ಸೇನಾ ಮುಖ್ಯ ಕಚೇರಿ ಸಮೀಪ ಗುಂಡಿನ ದಾಳಿಯನ್ನು ಎದುರಿಸಿದ್ದಾರೆ. ಘರ್ಷಣೆಯಲ್ಲಿ ಕನಿಷ್ಠ 12 ಮಂದಿ ಗಾಯಗೊಂಡಿರುವುದಾಗಿ ವೈದ್ಯರ ಸಮಿತಿಯೊಂದು ತನ್ನ ಫೇಸ್‌ಬುಕ್‌ ಪುಟದಲ್ಲಿ ಹಂಚಿಕೊಂಡಿದೆ.

ಪ್ರಧಾನಿ ಮತ್ತು ಸೇನಾ ಮುಖಂಡರ ನಡುವೆ ಸಕಾರಾತ್ಮಕ ರೀತಿಯಲ್ಲಿ ಒಪ್ಪಂದ ಏರ್ಪಡುವ ಬೆಳವಣಿಗೆಗಳ ನಡುವೆ ಸೇನೆಯು ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂದು ಪ್ರಧಾನಿ ಕಚೇರಿಯ ನಿರ್ದೇಶಕ ಆ್ಯಡಮ್‌ ಹೆರಿಕಾ ಹೇಳಿರುವುದಾಗಿ ರಾಯಿಟರ್ಸ್‌ ವರದಿ ಮಾಡಿದೆ.

ಸೇನಾ ಪಡೆಗಳು ಖಾರ್ಟುಮ್‌ನಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಿವೆ.

ಸುಡಾನ್‌ ಸಂಘರ್ಷ, ಸೇನೆ ಮತ್ತು ಅಧಿಕಾರ

ಜಗತ್ತಿನ ಅತ್ಯಂತ ಬಡ ರಾಷ್ಟ್ರಗಳಲ್ಲಿ ಒಂದಾಗಿರುವ ಸುಡಾನ್‌ನಲ್ಲಿ ಒಮರ್‌ ಅಲ್‌–ಬಷೀರ್‌ 2019ರಲ್ಲಿ ಅಧಿಕಾರ ಕಳೆದಕೊಂಡ ಬಳಿಕ ರಾಜಕೀಯ ಮತ್ತು ಅಧಿಕಾರ ಹೋಯ್ದಾಟಗಳು ನಡೆದಿವೆ. ಬ್ರಿಟನ್‌ ಮತ್ತು ಈಜಿಪ್ಟ್‌ನ ಜಂಟಿ ಆಡಳಿತಕ್ಕೆ ಒಳಪಟ್ಟಿದ್ದ ಸುಡಾನ್‌, 1956ರಲ್ಲಿ ಸ್ವತಂತ್ರ ಪಡೆಯಿತು.

ವಿಶ್ವ ಬ್ಯಾಂಕ್‌ನ ಅಂಕಿ–ಅಂಶಗಳ ಪ್ರಕಾರ, ಸುಡಾನ್‌ನಲ್ಲಿ ಬಹುತೇಕರು ಮುಸ್ಲಿಮ್‌ ಧರ್ಮಕ್ಕೆ ಸೇರಿದವರಾಗಿದ್ದು, 4.38 ಕೋಟಿ ಜನಸಂಖ್ಯೆ ಇದೆ.

ಅರೇಬಿಕ್‌ ಅಧಿಕೃತ ಭಾಷೆಯಾಗಿದೆ ಹಾಗೂ 1983ರಲ್ಲಿ ಇಸ್ಲಾಮಿಕ್‌ ಶರಿಯಾ ಕಾನೂನು ಜಾರಿಗೊಳಿಸಲಾಗಿದೆ. ಸೈನಿಕನಾಗಿದ್ದ ಒಮರ್‌ ಅಲ್‌–ಬಷೀರ್‌ ಸೇನಾ ದಂಗೆಯ ಮೂಲಕವೇ ಸುಡಾನ್‌ನ ಅಧಿಕಾರಿ ಹಿಡಿದಿದ್ದರು. ಅವರು 1989ರ ಜೂನ್‌ನಿಂದ 2019ರ ಏಪ್ರಿಲ್‌ ವರೆಗೂ ದೇಶದ ಆಡಳಿತದ ಚುಕ್ಕಾಣಿ ಸಾಧಿಸಿದ್ದರು.

ದೇಶದಲ್ಲಿ ಮೊದಲ ಬಾರಿಗೆ 2010ರಲ್ಲಿ ಬಹು ಪಕ್ಷಗಳ ಚುನಾವಣೆ ನಡೆದು, ಬಷೀರ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರು 2015ರಲ್ಲಿ ಮರು ಆಯ್ಕೆಯಾದರು. ಆದರೆ, ವಿರೋಧ ಪಕ್ಷಗಳು ಮತದಾನವನ್ನು ಬಹಿಷ್ಕರಿಸಿದ್ದವು.

2018ರಲ್ಲಿ ಬ್ರೆಡ್‌ನ ಬೆಲೆ ಮೂರು ಪಟ್ಟು ಹೆಚ್ಚುತ್ತಿದ್ದಂತೆ, ಬೆಲೆ ಏರಿಕೆಯ ವಿರುದ್ಧ ಹಲವು ಸಲ ಪ್ರತಿಭಟನೆಗಳು ನಡೆದಿದ್ದವು. ಸೇನೆಯು 2019ರ ಏಪ್ರಿಲ್‌ 11ರಂದು ಬಷೀರ್‌ ಅವರನ್ನು ಸ್ಥಾನದಿಂದ ಉಚ್ಚಾಟಿಸುವವರೆಗೂ ಪ್ರತಿಭಟನೆಗಳು ಮುಂದುವರಿದಿದ್ದವು.

ಸೇನೆ ಮತ್ತು ಪ್ರತಿಭಟನಾ ನಿರತ ನಾಯಕರು ಮೂರು ವರ್ಷಗಳ ನಾಗರಿಕ ಆಡಳಿತಕ್ಕೆ ಜುಲೈನಲ್ಲಿ ಒಮ್ಮತಕ್ಕೆ ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.