ADVERTISEMENT

ಆರ್ಕ್ಟಿಕ್ ಪ್ರದೇಶಕ್ಕೂ ಹರಡಿದ ‘ಸೂಪರ್‌ ಬಗ್‌’

ಪಿಟಿಐ
Published 28 ಜನವರಿ 2019, 20:00 IST
Last Updated 28 ಜನವರಿ 2019, 20:00 IST
   

ಲಂಡನ್‌:ನವದೆಹಲಿಯಲ್ಲಿ ಹತ್ತು ವರ್ಷಗಳ ಹಿಂದೆ ಪತ್ತೆಯಾಗಿ ಆತಂಕ ಸೃಷ್ಟಿಸಿದ ಮಾರಣಾಂತಿಕ ಬ್ಯಾಕ್ಟೀರಿಯಾ ‘ಸೂಪರ್‌ ಬಗ್‌’ ಉತ್ತರ ಧ್ರುವ ಪ್ರದೇಶವಾದ ಆರ್ಕ್ಟಿಕ್‌ಗೂ ಹಬ್ಬಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಯಾವುದೇ ಔಷಧಿಯಿಂದಲೂ ತಡೆಯಲಾಗದಂತಹ, ಎಂದಿಗೂ ವಾಸಿಯಾಗದ ಕಾಯಿಲೆಗೆ ಕಾರಣವಾಗುವಂತಹ ಬ್ಯಾಕ್ಟೀರಿಯಾಗಳಾದ ‘ಸೂಪರ್‌ ಬಗ್‌’ಗಳು ಸೂಕ್ಷ್ಮಾಣು ಜೀವಿಗಳಲ್ಲಿ ಸೇರಿಕೊಳ್ಳುತ್ತವೆ. ಹತ್ತು ವರ್ಷಗಳ ಹಿಂದೆ ದೆಹಲಿಯಲ್ಲಿ ಕುಡಿಯುವ ನೀರಿನಲ್ಲಿ ಈ ಮಾರಣಾಂತಿಕ ಬ್ಯಾಕ್ಟೀರಿಯಾಗಳು ಪತ್ತೆಯಾಗಿದ್ದವು. ಅಲ್ಲಿಂದ ಇಲ್ಲಿಯವರೆಗೆ ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ಇವು ಪತ್ತೆಯಾಗಿದ್ದು, ಇದೇ ಮೊದಲ ಬಾರಿಗೆ ಆರ್ಕ್ಟಿಕ್‌ ಪ್ರದೇಶದಲ್ಲಿಯೂ ಕಂಡು ಬಂದಿವೆ.

‘ಪ್ರಾಣಿಗಳ ಮತ್ತು ಮನುಷ್ಯರ ಕರುಳಿನ ಭಾಗದಲ್ಲಿ ಇದು ಕಂಡು ಬಂದಿದೆ. ಈ ಪ್ರದೇಶಕ್ಕೆ ಭೇಟಿ ನೀಡಿದ ಮನುಷ್ಯರು, ಪಕ್ಷಿಗಳು ಮತ್ತು ವನ್ಯಜೀವಿಗಳ ಮೂಲಕ ‘ಸೂಪರ್‌ ಬಗ್‌’ ಹರಡಿರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ADVERTISEMENT

‘ಆರ್ಕ್ಟಿಕ್‌ನಂತಹ ಧ್ರುವ ಪ್ರದೇಶಗಳು ಭೂಮಿಯ ಮೇಲಿನ ಅತಿ ಪ್ರಾಚೀನವಾದ ಪರಿಸರ ವ್ಯವಸ್ಥೆ ಹೊಂದಿರುವ ಪ್ರದೇಶಗಳಾಗಿರುತ್ತವೆ. ಇಲ್ಲಿಯೂ ಮಾರಣಾಂತಿಕ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ ಎಂದರೆ, ಭೂಮಿಯ ಮೇಲೆ ಮಾಲಿನ್ಯ ಪ್ರಮಾಣ ಎಷ್ಟರ ಮಟ್ಟಿಗೆ ಹೆಚ್ಚಾಗುತ್ತಿದೆ ಎಂಬುದು ತಿಳಿಯುತ್ತದೆ’ ಎಂದು ಇಂಗ್ಲೆಂಡ್‌ನ ನ್ಯೂಕ್ಯಾಟಲ್ ವಿಶ್ವವಿದ್ಯಾಲಯದ ಪ್ರೊಫೆಸರ್‌ ಡೇವಿಡ್‌ ಗ್ರಹಾಂ ಕಳವಳ ವ್ಯಕ್ತಪಡಿಸಿದ್ದಾರೆ.

‘ಆರ್ಕ್ಟಿಕ್‌ ಪ್ರದೇಶದ ಒತ್ತುವರಿಯೂ ಹೆಚ್ಚಾಗುತ್ತಿದೆ. ಕೇವಲ ಸ್ಥಳೀಯವಾಗಿ ಈ ಸಮಸ್ಯೆ ನೋಡದೆ ಜಾಗತಿಕ ಮಟ್ಟದಲ್ಲಿ ಇತ್ತ ಗಮನ ಹರಿಸಬೇಕಿದೆ’ ಎಂದು ಅವರು ಹೇಳಿದ್ದಾರೆ.

‘ಸೂಪರ್‌ ಬಗ್‌’ ಬ್ಯಾಕ್ಟೀರಿಯಾಗಳು ದೇಹದಲ್ಲಿ ಚಿಕಿತ್ಸೆ ನೀಡಲು ಕ್ಲಿಷ್ಟಕರವೆನಿಸುವಂಥ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಸದ್ಯಕ್ಕೆ ಲಭ್ಯವಿರುವ ಯಾವುದೇ ರೋಗನಿರೋಧಕ ಔಷಧಿಗಳಿಂದ (ಆ್ಯಂಟಿ ಬಯಾಟಿಕ್‌) ಇವುಗಳ ನಿಯಂತ್ರಣ ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.