ಇಸ್ಲಾಮಾಬಾದ್: ‘ನನಗೆ ಪ್ರಜ್ಞೆ ಮರಳಿದಾಗ ಸುತ್ತಲೂ ಬೆಂಕಿ ಹೊತ್ತಿ ಉರಿಯುತ್ತಿತ್ತು. ಯಾರೂ ಕಾಣಿಸುತ್ತಿರಲಿಲ್ಲ’ ಎಂದು ಪಾಕಿಸ್ತಾನದ ಕರಾಚಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಪವಾಡಸದೃಶ ರೀತಿಯಲ್ಲಿ ಬಚಾವಾಗಿರುವ ಮೊಹಮ್ಮದ್ ಜುಬೈರ್ ಎಂಬುವವರು ಹೇಳಿದ್ದಾರೆ.
ಅಪಘಾತದಲ್ಲಿ ಗಾಯಗೊಂಡು ಸದ್ಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, ಭಯಾನಕ ಕ್ಷಣಗಳನ್ನು ನೆನಪಿಸಿಕೊಂಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ.
‘ಸಣ್ಣ ಮಕ್ಕಳ ಕೂಗು, ಹಿರಿಯರು ಹಾಗೂ ವೃದ್ಧರ ಆರ್ತನಾದ, ಎಲ್ಲೆಡೆ ಚೀರಾಟ ಕೇಳಿಸುತ್ತಿತ್ತು. ಎಲ್ಲರೂ ಬೆಂಕಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದರು. ನಾನು ಸೀಟ್ ಬೆಲ್ಟ್ ಬಿಚ್ಚಿದೆ. ಒಂದು ಕಡೆ ಹೊರಗಿನ ಬೆಳಕು ಕಾಣಿಸಿತು. ಆ ಕಡೆ ನಡೆದೆ. ಅಲ್ಲಿಂದ ಹೊರ ಜಿಗಿದೆ’ ಎಂದು ಅವರು ಹೇಳಿದ್ದಾರೆ.
ಸುಟ್ಟ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ದುರಂತದಲ್ಲಿ ಇಬ್ಬರು ಪವಾಡಸದೃಶವಾಗಿ ಪಾರಾಗಿದ್ದಾರೆ. ಈ ಪೈಕಿ ಇನ್ನೊಬ್ಬರು ಬ್ಯಾಂಕ್ ಆಫ್ ಪಂಜಾಬ್ ಮುಖ್ಯಸ್ಥ ಝಾಫರ್ ಮಸೂದ್ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಲಾಹೋರ್‌ನಿಂದ ಕರಾಚಿಗೆ ತೆರಳುತ್ತಿದ್ದ ವಿಮಾನ ಕರಾಚಿ ವಿಮಾನ ನಿಲ್ದಾಣದ ಬಳಿ ಶುಕ್ರವಾರ ಮಧ್ಯಾಹ್ನ ಪತನಗೊಂಡಿತ್ತು. ದುರಂತದಲ್ಲಿ 97 ಮಂದಿ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.