ಕಾಬೂಲ್: ಅಫ್ಗಾನಿಸ್ತಾನದಿಂದ ಅಮೆರಿಕ ಹಾಗೂ ನ್ಯಾಟೊ ಪಡೆಗಳು ಕಾಲ್ಕಿತ್ತ ನಂತರ ತಾಲಿಬಾನಿ ಬೆಂಬಲಿಗರು ಭಾರಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.
ಅಫ್ಗನ್ ಪೂರ್ವ ಪ್ರಾಂತ್ಯದ ಖೋಸ್ತ್ ನಗರದಲ್ಲಿ ತಾಲಿಬಾನಿಗಳು ಹಾಗೂ ಅವರ ಬೆಂಬಲಿಗರು ಅಮೆರಿಕ ಹಾಗೂ ನ್ಯಾಟೊ ಪಡೆಗಳ ಅಣಕು ಶವಯಾತ್ರ ನಡೆಸಿ ಸಂಭ್ರಮಾಚರಣೆ ನಡೆಸಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಶವಪೆಟ್ಟಿಗೆಗಳಿಗೆ ಅಮೆರಿಕ, ಫ್ರಾನ್ಸ್ ಹಾಗೂ ಬ್ರಿಟನ್ ರಾಷ್ಟ್ರ ಧ್ವಜಗಳನ್ನು ಹಾಕಿ ಮೆರವಣಿಗೆ ಮಾಡಿ ಬಳಿಕ ಅವುಗಳನ್ನು ಸುಟ್ಟು ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೊ ವೈರಲ್ ಆಗಿದೆ.
ಇದಲ್ಲದೇ ತಾಲಿಬಾನಿಗಳು ಆಗಸ್ಟ್ 31 ನ್ನು ಅಫ್ಗಾನಿಸ್ತಾನದ ಸ್ವಾತಂತ್ರ್ಯ ದಿನ ಎಂದು ಘೋಷಿಸಿಕೊಂಡಿದ್ದಾರೆ.
ಇನ್ನೊಂದೆಡೆ ಅಫ್ಗಾನಿಸ್ತಾನದಿಂದ 20 ವರ್ಷಗಳ ಯುದ್ಧವನ್ನು ಕೊನೆಗೊಳಿಸಿ ಸೈನ್ಯವನ್ನು ಹಿಂತೆಗೆದುಕೊಂಡಿರುವುದು ಅತ್ಯುತ್ತಮ ಮತ್ತು ಸರಿಯಾದ ನಿರ್ಧಾರ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಮರ್ಥಿಸಿಕೊಂಡಿದ್ದಾರೆ.
ಆ.31 ರಂದು ಅಮೆರಿಕದ ಕೊನೆಯ ಯುದ್ಧ ವಿಮಾನವು ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರುವುದರೊಂದಿಗೆ 2001ರಿಂದ ಅಫ್ಗಾನಿಸ್ತಾನದಲ್ಲಿ ಅಮೆರಿಕ ಹಾಗೂ ನ್ಯಾಟೊ ಪಡೆಗಳು ತಾಲಿಬಾನ್‌ನೊಂದಿಗೆ ನಡೆಸುತ್ತಿದ್ದ ಎರಡು ದಶಕಗಳ ಯುದ್ಧವು ಕೊನೆಗೊಂಡಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.