ADVERTISEMENT

ವಿಶ್ವದೊಂದಿಗೆ ಸಂವಹನ ನಡೆಸಲು ತಾಲಿಬಾನ್‌ ಉತ್ಸುಕ: ಪಾಕಿಸ್ತಾನ

ಪಿಟಿಐ
Published 11 ನವೆಂಬರ್ 2021, 11:06 IST
Last Updated 11 ನವೆಂಬರ್ 2021, 11:06 IST
ಇಸ್ಲಾಮಾಬಾದ್‌ನಲ್ಲಿ ಗುರುವಾರ ಅಫ್ಗಾನಿಸ್ತಾನದ ಬೆಳವಣಿಗೆ ಕುರಿತು ಚರ್ಚಿಸಲು ಪಾಕಿಸ್ತಾನ ಆಯೋಜಿಸಿದ್ದ ಟ್ರೋಕಾ ಪ್ಲಸ್‌ ಸಭೆಯಲ್ಲಿ ಪಾಕ್‌ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಜತೆಗೆ ಚೀನಾ, ರಷ್ಯಾ ಮತ್ತು ಅಮೆರಿಕದ ವಿಶೇಷ ರಾಯಭಾರಿಗಳು ಭಾಗವಹಿಸಿದ್ದರು –ಎಪಿ/ ಪಿಟಿಐ ಚಿತ್ರ
ಇಸ್ಲಾಮಾಬಾದ್‌ನಲ್ಲಿ ಗುರುವಾರ ಅಫ್ಗಾನಿಸ್ತಾನದ ಬೆಳವಣಿಗೆ ಕುರಿತು ಚರ್ಚಿಸಲು ಪಾಕಿಸ್ತಾನ ಆಯೋಜಿಸಿದ್ದ ಟ್ರೋಕಾ ಪ್ಲಸ್‌ ಸಭೆಯಲ್ಲಿ ಪಾಕ್‌ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಜತೆಗೆ ಚೀನಾ, ರಷ್ಯಾ ಮತ್ತು ಅಮೆರಿಕದ ವಿಶೇಷ ರಾಯಭಾರಿಗಳು ಭಾಗವಹಿಸಿದ್ದರು –ಎಪಿ/ ಪಿಟಿಐ ಚಿತ್ರ   

ಇಸ್ಲಾಮಾಬಾದ್:‘ತಾಲಿಬಾನಿಗಳು ಪ್ರಪಂಚದೊಂದಿಗೆ ಸಂವಹನ ನಡೆಸಲು ಆಸಕ್ತರಾಗಿದ್ದಾರೆ. ಅಫ್ಗಾನಿಸ್ತಾನದ ಪ್ರತ್ಯೇಕತೆಯಿಂದ ಹಲವು ಸಮಸ್ಯೆಗಳ ಸೃಷ್ಟಿಗೆ ಕಾರಣವಾದ ಹಿಂದಿನ ತಪ್ಪುಗಳನ್ನು ಪುನರಾವರ್ತಿಸಬಾರದು’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಗುರುವಾರ ಅಂತರರಾಷ್ಟ್ರೀಯ ಸಮುದಾಯವನ್ನು ಎಚ್ಚರಿಸಿದ್ದಾರೆ.

ಚೀನಾ, ರಷ್ಯಾ ಮತ್ತು ಅಮೆರಿಕ ಪ್ರತಿನಿಧಿಗಳು ಭಾಗವಹಿಸಿದ್ದ ಅಫ್ಗಾನಿಸ್ತಾನದ ಟ್ರೋಕಾ ಪ್ಲಸ್ ಸಭೆಯ ಆರಂಭಿಕ ಅಧಿವೇಶನ ಉದ್ದೇಶಿಸಿ ಮಾತನಾಡಿದ ಖುರೇಷಿ, ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದಾಗಿ ಅಫ್ಗನ್‌ನಲ್ಲಿ ಸಂಭವಿಸಬಹುದಾದ ಮಾನವ ದುರಂತ ತಪ್ಪಿಸಲು ತಕ್ಷಣವೇ ಎಲ್ಲ ರೀತಿಯ ನೆರವು ನೀಡಲು ಅಂತರರಾಷ್ಟ್ರೀಯ ಸಮುದಾಯ ಮುಂದಾಗಬೇಕು ಎಂದು ಒತ್ತಾಯಿಸಿದರು.

ನೆರೆಯ ರಾಷ್ಟ್ರ ಅಫ್ಗಾನಿಸ್ತಾನದ ಪರಿಸ್ಥಿತಿ ಚರ್ಚಿಸಲು ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿ ಅಮೆರಿಕ, ಚೀನಾ ಮತ್ತು ರಷ್ಯಾದ ಹಿರಿಯ ರಾಜತಾಂತ್ರಿಕರ ಸಭೆ ನಡೆಸುತ್ತಿದೆ.

ADVERTISEMENT

‘ಅಫ್ಗಾನಿಸ್ತಾನವು ದುರಂತದ ಅಂಚಿನಲ್ಲಿದೆ. ಅದು ನೌಕರರಿಗೆ ಸಂಬಳವನ್ನು ಸಹ ಪಾವತಿಸಲು ಸಾಧ್ಯವಿಲ್ಲದಂತಾಗಿದೆ. ಅಂತರರಾಷ್ಟ್ರೀಯ ಸಮುದಾಯದ ಸಹಾಯಕ್ಕಾಗಿ ಎದುರು ನೋಡುತ್ತಿದೆ’ ಎಂದು ಖುರೇಷಿ ಹೇಳಿದರು.

‘ಅಫ್ಗಾನ್‌ನಲ್ಲಿ ಜನಸಾಮಾನ್ಯರು ಬರಗಾಲದಂತಹ ಭೀಕರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದು ಸರ್ಕಾರದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಅಂತರರಾಷ್ಟ್ರೀಯ ಸಮುದಾಯವು ತುರ್ತು ಆಧಾರದ ಮೇಲೆ ನೆರವು ನೀಡುವುದು ಅತ್ಯಗತ್ಯ’ ಎಂದು ಖುರೇಷಿ ಪ್ರತಿಪಾದಿಸಿದರು.

‘ಟ್ರೋಕಾ ಪ್ಲಸ್ ಸಭೆಯಿಂದ ಅಫ್ಗಾನಿಸ್ತಾನದ ಮಧ್ಯಂತರ ಸರ್ಕಾರಕ್ಕೆ ನೆರವಾಗಲಿದೆ ಮತ್ತು ದೇಶದ ನೆಲದಿಂದ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವಲ್ಲಿ ಪಾತ್ರ ವಹಿಸುತ್ತದೆ’ ಎಂದು ಅವರು ಆಶಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.