ADVERTISEMENT

ಅಫ್ಗಾನಿಸ್ತಾನ: ಅಮೆರಿಕದ ಯುದ್ಧ ವಾಹನಗಳಲ್ಲಿ ತಾಲಿಬಾನ್‌ ಸೈನಿಕರ ಪರೇಡ್

ಏಜೆನ್ಸೀಸ್
Published 1 ಸೆಪ್ಟೆಂಬರ್ 2021, 20:32 IST
Last Updated 1 ಸೆಪ್ಟೆಂಬರ್ 2021, 20:32 IST
ಹಮ್‌ವೀ ವಾಹನದಲ್ಲಿ ತಾಲಿಬಾನ್‌ ಸೈನಿಕರ ಗಸ್ತು ಎಎಫ್‌ಪಿ ಚಿತ್ರ
ಹಮ್‌ವೀ ವಾಹನದಲ್ಲಿ ತಾಲಿಬಾನ್‌ ಸೈನಿಕರ ಗಸ್ತು ಎಎಫ್‌ಪಿ ಚಿತ್ರ   

ಕಂದಹಾರ್: ಅಮೆರಿಕವು ಅಫ್ಗಾನಿಸ್ತಾನದ ಸೇನೆಗೆ ಪೂರೈಸಿದ್ದ ಶಸ್ತ್ರಸಜ್ಜಿತ ವಾಹನಗಳು, ಹಮ್‌ವೀ ಜೀಪುಗಳು ಹಾಗೂ ಇತರ ಯುದ್ಧ ವಾಹನಗಳೊಂದಿಗೆ ತಾಲಿಬಾನ್‌ ಸೈನಿಕರು ಬುಧವಾರ ಕಂದಹಾರ್‌ನಲ್ಲಿ ಪರೇಡ್‌ ನಡೆಸಿದ್ದಾರೆ.

ಬ್ಲ್ಯಾಕ್‌ ಹಾಕ್‌ ಹೆಲಿಕಾ‍ಪ್ಟರ್‌ ಸೇರಿದಂತೆ ಹಸಿರು ಬಣ್ಣದ ವಾಹನಗಳ ಉದ್ದನೆಯ ಸಾಲು ಕಂದಹಾರ್‌ನ ಹೆದ್ದಾರಿಯಲ್ಲಿ ಬುಧವಾರ ಕಂಡು ಬಂದಿತು. ಅವುಗಳ ಮೇಲೆ ಕಪ್ಪು–ಬಿಳುಪು ಬಣ್ಣದ ತಾಲಿಬಾನ್‌ ಧ್ವಜಗಳು ಹಾರಾಡುತ್ತಿದ್ದವು ಎಂದು ಸುದ್ದಿಸಂಸ್ಥೆಯ ವರದಿಗಾರ ತಿಳಿಸಿದ್ದಾರೆ.

ಕಳೆದ ಇಪ್ಪತ್ತು ವರ್ಷಗಳಲ್ಲಿ ಅಫ್ಗಾನಿಸ್ತಾನದಲ್ಲಿ ಅಮೆರಿಕ, ನ್ಯಾಟೊ ಹಾಗೂ ಅಫ್ಗನ್‌ ಪಡೆಯು ಉಪಯೋಗಿಸಿದ್ದ ಟ್ರಕ್‌ಗಳನ್ನು ಕೆಲವರು ನಿಯಂತ್ರಿಸುತ್ತಿದ್ದರೆ, ಇನ್ನು ಕೆಲವರು ವಾಹನಗಳ ಮೇಲೆ ಹತ್ತಿ ನಿಂತಿದ್ದರು. ತಾಲಿಬಾನ್‌ ಯೋಧರಿಂದ ತುಂಬಿದ್ದ ಪಿಕ್‌ಅಪ್‌ ಟ್ರಕ್‌ಗಳು ಸೇನಾ ವಾಹನಗಳನ್ನು ಹಿಂಬಾಲಿಸಿದರೆ, ಇನ್ನು ಕೆಲವರು ಭಾರೀ ಆಯುಧ ಹಾಗೂ ಮಷಿನ್‌ಗನ್‌ಗಳನ್ನು ಹೊತ್ತುಕೊಂಡಿದ್ದರು.

ADVERTISEMENT

ತಾಲಿಬಾನ್‌ನ ಸಂಘಟನೆ ಹುಟ್ಟಿದ ನೆಲವಾಗಿರುವ ಕಂದಹಾರ್‌ ಬಳಿ, ಇತ್ತೀಚಿನ ದಿನಗಳಲ್ಲಿ ಬ್ಲ್ಯಾಕ್‌ ಹಾಕ್‌ ಹೆಲಿಕಾಪ್ಟರ್ ಒಂದು ಹಾರಾಟ ನಡೆಸುತ್ತಿದೆ. ತಾಲಿಬಾನ್‌ ಪಡೆಯಲ್ಲಿ ನುರಿತ ಪೈಲಟ್‌ಗಳು ಇಲ್ಲದೇ ಇರುವುದರಿಂದ ಅಫ್ಗನ್‌ ಸೇನೆಯ ಮಾಜಿ ಯೋಧರೊಬ್ಬರು ಈ ಹೆಲಿಕಾಪ್ಟರ್‌ ಹಾರಾಟವನ್ನು ನಿಯಂತ್ರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ತಾಲಿಬಾನ್‌ ಮುಖಂಡರು, ಕಂದಹಾರ್‌ನ ಕ್ರಿಕೆಟ್‌ ಮೈದಾನದಲ್ಲಿನ ನೆಲಮಾಳಿಗೆಯಲ್ಲಿ ಗೋಪ್ಯವಾಗಿದ್ದುಕೊಂಡು ಪರೇಡ್ ಆರಂಭವಾಗುವುದನ್ನು ಕಾಯುತ್ತಿದ್ದರೆ, ಇನ್ನು ಕೆಲವರು ಮೈದಾನದ ಹುಲ್ಲಿನ ಮೇಲೆ ಕಾದು ಕುಳಿತಿದ್ದರು. ಇನ್ನೂ ನೂರಾರು ಜನರು ಪರೇಡ್‌ ನೋಡುವುದಕ್ಕಾಗಿ ಮಹಡಿಯ ಮೇಲೆ ಹತ್ತಿ ನಿಂತಿದ್ದರು ಎಂದು ತಿಳಿದುಬಂದಿದೆ.

ಇದುವರೆಗೆ ಅಜ್ಞಾತ ಸ್ಥಳದಲ್ಲಿದ್ದ ತಾಲಿಬಾನ್‌ನ ಸರ್ವೋಚ್ಚ ನಾಯಕ ಹೈಬತ್‌ಉಲ್ಲಾ ಅಖುಂಜಾದಾ, ಕಂದಹಾರ್‌ನಲ್ಲಿಯೇ ಇರುವುದಾಗಿ ತಾಲಿಬಾನ್‌ ಹೇಳಿದೆ. ಆತ, ಬುಧವಾರ ಬಹಿರಂಗವಾಗಿ ಕಾಣಿಸಿಕೊಳ್ಳುವ ನಿರೀಕ್ಷೆ ಇತ್ತು. ಆದರೆ, ಕಾಣಿಸಿಕೊಳ್ಳಲಿಲ್ಲ. ಆತನ ಬದಲಾಗಿ ನಗರದ ಹೊಸ ಆಡಳಿತಾಧಿಕಾರಿ ಜನರನ್ನು ಉದ್ದೇಶಿಸಿ ಮಾತನಾಡಿದ್ದಾನೆ ಎನ್ನಲಾಗಿದೆ. ಅಮೆರಿಕದ ಸೇನಾಪಡೆಯ ಕೊನೆಯ ತುಕಡಿಯ ನಿರ್ಗಮನದಿಂದಾಗಿ, ತಾಲಿಬಾನ್‌ ಸೈನಿಕರು ಕಂದಹಾರ್‌ನಲ್ಲಿಯೂ ಮಂಗಳವಾರ ವಿಜಯೋತ್ಸವ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.